ADVERTISEMENT

ಬಾಣಂತಿಯರ ಸಾವು | ₹5 ಲಕ್ಷ ಪರಿಹಾರ ಒಪ್ಪತಕ್ಕದ್ದಲ್ಲ: ನಾಗಲಕ್ಷ್ಮೀ ಚೌದರಿ 

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 8:17 IST
Last Updated 12 ಡಿಸೆಂಬರ್ 2024, 8:17 IST
   

ಬಳ್ಳಾರಿ: ‘ತಾಯಿಯ ಸಾವಿಗೆ ನೀಡಲಾಗಿರುವ ₹5 ಲಕ್ಷ ಪರಿಹಾರ ಒಪ್ಪುವಂಥದ್ದಲ್ಲ. ಸರ್ಕಾರ ಮೃತ ಬಾಣಂತಿಯರ ಮಕ್ಕಳ ಜವಾಬ್ದಾರಿ ಹೊತ್ತುಕೊಳ್ಳಬೇಕು. ಅವರಿಗೆ ಭದ್ರತೆ, ಉನ್ನತ ಶಿಕ್ಷಣ, ನೌಕರಿ ಒದಗಿಸುವ ಹೊಣೆ ಹೊರಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಆಗ್ರಹಿಸಿದ್ದಾರೆ.    

ಬಾಣಂತಿಯರ ಸರಣಿ ಸಾವು ಸಂಭವಿಸಿದ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ್ದ ಅವರು, ವ್ಯವಸ್ಥೆ ಪರಿಶೀಲಿಸಿದರು. ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ‘ಒಬ್ಬ ತಾಯಿಗೆ ನೀಡಲಾಗುವ ₹5 ಲಕ್ಷ ಪರಿಹಾರವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಆರಂಭದಲ್ಲಿ ₹2ಲಕ್ಷ ಪರಿಹಾರ ಘೋಷಿಸಲಾಗಿತ್ತು. ಆದನ್ನು ಪರಿಷ್ಕರಿಸುವಂತೆ ನಾನು ಸಿಎಂಗೆ ಪತ್ರ ಬರೆದಿದ್ದೆ’ ಎಂದರು. 

‘ಒಟ್ಟು ಐವರು ಬಾಣಂತಿಯರ ಪೈಕಿ ಮೂವರು ಬಾಣಂತಿಯರು ಬಳ್ಳಾರಿಯವರಾಗಿದ್ದಾರೆ. ಅವರ ಪರಿಹಾರದ ಚೆಕ್‌ ಸಿದ್ಧವಾಗಿದೆ. ಒಬ್ಬರಿಗೆ ಹಸ್ತಾಂತರವೂ ಆಗಿದೆ. ಆದರೂ, ಮೃತ ಬಾಣಂತಿಯರ ಮಕ್ಕಳ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಮಕ್ಕಳು ಬೆಳೆದ ಮೇಲೆ ಅವರಿಗೆ ಸರ್ಕಾರಿ ನೌಕರಿ ಒದಗಿಸಿಕೊಡಬೇಕು. ಉನ್ನತ ಶಿಕ್ಷಣ, ಭದ್ರತೆ ಕೊಡಬೇಕು. ನಾನು ಸಿಎಂಗೆ ನೀಡುವ ವರದಿಯಲ್ಲಿ ಇದನ್ನೇ ಬರೆಯುತ್ತೇನೆ’ ಎಂದು ಮಾಹಿತಿ ನೀಡಿದರು.  

ADVERTISEMENT

‘ಅಧಿಕಾರಿಗಳು ತಾತ್ಕಾಲಿಕ ಪರಿಹಾರಗಳು ಕ್ರಮಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ಅದು ಕಾನೂನಾತ್ಮಕವಾಗಿ ಸಿಕ್ಕರೆ ಮಾತ್ರವೇ ಕಡ್ಡಾಯವಾಗಿ ಜಾರಿಗೆ ಬರಲಿವೆ’ ಎಂದು ಅವರು ಅಭಿಪ್ರಾಯಪಟ್ಟರು. 

‘ಘಟನೆ ಬಗ್ಗೆ ಗೊತ್ತಾದ ಕೂಡಲೇ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೇನೆ. ಉನ್ನತ ಮಟ್ಟದ ತನಿಖೆ, ನಿರ್ದಿಷ್ಟ ಐ.ವಿ ದ್ರಾವಣದ ಬಳಕೆ ನಿಷೇಧ, ತಾಯಂದಿರಿಗೆ ಸೂಕ್ತ ಪರಿಹಾರದ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಆದರೆ ವೈಯಕ್ತಿಕ ಸಮಸ್ಯೆಯ ಕಾರಣದಿಂದ ನಾನು ಜಿಲ್ಲೆಗೆ ಬರುವುದು ವಿಳಂಬವಾಗಿದೆ’ ಎಂದು ಸಮಜಾಯಿಷಿ ನೀಡಿದರು. 

‘ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹಿಂದೆ ಎಂದೂ ಬಾಣಂತಿಯರ ಸಾವಿನ ಪ್ರಕರಣಗಳು ಆಗಿರಲಿಲ್ಲ. ‌ರಾಯಚೂರು, ಪಾವಗಡಗಳಲ್ಲಿ ಇದಕ್ಕೂ ಮೊದಲು ಸಾವುಗಳು ಸಂಭವಿಸಿದ್ದವು. ಅಲ್ಲಿನ ಐವಿ ದ್ರಾವಣವನ್ನು ಕೇಂದ್ರ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಸರಿ ಇದೆ ಎಂದು ವರದಿ ಬಂದಿತ್ತು. ಅದೇ ದ್ರಾವಣದ ಬೇರೆ ಬ್ಯಾಚ್‌ ಅನ್ನು ಬಳ್ಳಾರಿಯಲ್ಲಿ ಬಳಸಲಾಗಿದೆ. ಅದನ್ನು ನೀಡಲಾದ ಸಾಮಾನ್ಯ ರೋಗಿಗಳಲ್ಲೂ ಸಮಸ್ಯೆಯಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ’ ಎಂದರು.  

‘ಆದರೂ, ದುರಂತಕ್ಕೆ ಐ.ವಿ ದ್ರಾವಣವೊಂದೇ ಕಾರಣ ಎಂಬ ದೃಷ್ಟಿಕೋನದಲ್ಲಿ ಮಾತ್ರ ನೋಡುವುದರ ಬದಲಿಗೆ, ಶಸ್ತ್ರಚಿಕಿತ್ಸಾ ಕೊಠಡಿ (ಒ.ಟಿ)ಗಳ ಬಗ್ಗೆಯೂ ನಾವು ಗಮನಹರಿಸಬೇಕು. ಬಳ್ಳಾರಿ ಜಿಲ್ಲಾಸ್ಪತ್ರೆಯ ಒ.ಟಿಯಲ್ಲಿ ವರ್ಷಕ್ಕೆ 6 ಸಾವಿರ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಒ.ಟಿಗಳ ಸ್ವಚ್ಛತೆ ಬಗ್ಗೆ ಪರಿಶೀಲಿಸಬೇಕಿದೆ. ಒ.ಟಿಗಳ ಪರೀಕ್ಷಾ ಮಾದರಿಗಳ ವರದಿಗಳನ್ನು ನಾನು ಆಸ್ಪತ್ರೆಯಿಂದ ಕೇಳಿದ್ದೇನೆ. ರಾಜ್ಯದ ಎಲ್ಲ ಒ.ಟಿ.ಗಳಲ್ಲೂ ಪ್ರಮಾಣಿತ ಕಾರ್ಯ ವಿಧಾನ (ಎಸ್‌ಒಪಿ) ಪಾಲಿಸಬೇಕು’ ಎಂದು ನಾಗಲಕ್ಷ್ಮೀ ಮಾಧ್ಯಮಗಳಿಗೆ ಮಾಹಿತಿ ನೀಡಿದರು. 

‘ಔಷಧದ ವಿಚಾರದಲ್ಲಿ ಕಡಿಮೆ ಬೆಲೆಯ ಟೆಂಡರ್‌ ಪದ್ಧತಿ ರದ್ದಾಗಬೇಕು. ಜೀವದ ಜೊತೆಗೆ ರಾಜಿ ಮಾಡಿಕೊಳ್ಳುವುದು ಸರಿಯಲ್ಲ‘ ಎಂದು ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡುತ್ತೇನೆ ಎಂದರು.  

‘ಬಳ್ಳಾರಿಯಲ್ಲಿ ತಾಯಂದಿರ ಸಾವಿನ ಪ್ರಮಾಣ ಕಡಿಮೆ ಇದೆ. ಆದರೂ, ಇಲ್ಲಿ ಅವ್ಯವಸ್ಥೆಗಳು ಕಂಡು ಬಂದಿವೆ. ಇಲ್ಲಿನ ನೀರಿನ ಟ್ಯಾಂಕ್‌ಗಳು ಸರಿ ಇಲ್ಲ. ಬಾಣಂತಿಯರಿಗೆ ಬಿಸಿ ನೀರಿಲ್ಲ. ಶೌಚಾಲಯಗಳಿಗೆ ಬಾಗಿಲುಗಳಿಲ್ಲ, ಕೊಳಾಯಿಗಳಿಲ್ಲ, ಔಷಧಕ್ಕೆ ಹೊರಗೆ ಬರೆದು ಕಳಿಸುವುದು ಕಂಡು ಬಂದಿದೆ‘ ಎಂದು ಅಸಮಾಧಾನ ಹೊರ ಹಾಕಿದರು.  

‘ಇದಂತೂ ವರ್ಸ್ಟ್‌ ಇದೆ ನೋಡಿ
ಆಸ್ಪತ್ರೆಯಲ್ಲಿ ಕುಡಿಯುವ ಉದ್ದೇಶಕ್ಕೆ ಮತ್ತು ಶೌಚಾಲಯಕ್ಕೆ ನೀರು ಪೂರೈಸುವ ಓವರ್‌ ಹೆಡ್‌ ಟ್ಯಾಂಕ್‌ಗಳ ಸ್ಥಿತಿ ಕಂಡು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆ ಮೇಲಿನ ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ಖುದ್ದು ವೀಕ್ಷಿಸಿದ ಅವರು ‘ಇದಂತೂ ವರ್ಸ್ಟ್‌ ಇದೆ ನೋಡಿ... ಟ್ಯಾಂಕ್‌ಗಳನ್ನು ತೊಳೆಸುವುದಿಲ್ಲವೇ, ನೀರನ್ನು ಪರೀಕ್ಷೆಗೆ ಕಳುಹಿಸಿದಲ್ಲವೇ, ಟ್ಯಾಂಕ್‌ ತುಂಬ ಮಣ್ಣು, ಪಾಚಿ ಇದೆ. ಮನೆಗಳ ಟ್ಯಾಂಕ್‌ಗಳನ್ನೇ ಆರು ತಿಂಗಳಿಗೊಮ್ಮೆ ಶುಚಿಗೊಳಿಸಲಾಗುತ್ತದೆ. ಆಸ್ಪತ್ರೆ ಟ್ಯಾಂಕ್‌ಗಳನ್ನು ನಿಯಮಿತವಾಗಿ ತೊಳೆಸುತ್ತಿರಬೇಕಲ್ಲವೇ’ ಎಂದು ಪ್ರಶ್ನೆ ಮಾಡಿದರು. ಈ ಪ್ರಶ್ನೆಗಳಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ನಿರುತ್ತರರಾಗಿ ನಿಂತಿದ್ದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.