ಸಾಂದರ್ಭಿಕ ಚಿತ್ರ
ಕಂಪ್ಲಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ತಡರಾತ್ರಿ ಹೆರಿಗೆ ಬಳಿಕ ತಾಯಿ ಮತ್ತು ಶಿಶು ಮೃತಪಟ್ಟಿದ್ದಾರೆ.
ತಾಲ್ಲೂಕಿನ ರಾಮಸಾಗರ ಗ್ರಾಮದ ಸಿ.ಚಂದ್ರಮ್ಮ ಸಣ್ಣ ರಮೇಶ (30) ಮೃತರು, ಗುರುವಾರ ಬೆಳಿಗ್ಗೆ 11ಕ್ಕೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ 5.35ಕ್ಕೆ ಸಾಮಾನ್ಯ ಹೆರಿಗೆಯಾಗಿದ್ದು, ನಿರ್ಜೀವ ಸ್ಥಿತಿಯಲ್ಲಿ ಹೆಣ್ಣು ಶಿಶು ಜನಿಸಿತ್ತು. ಬಳಿಕ ತಾಯಿಗೆ ರಕ್ತಸ್ರಾವ ಉಂಟಾಗಿದ್ದರಿಂದ ಬಳ್ಳಾರಿಯ ಬಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿತ್ತು. ಅಲ್ಲಿ ಚಿಕಿತ್ಸೆ ಸ್ಪಂದಿಸದೆ ತಾಯಿಯೂ ಮೃತಪಟ್ಟಿದ್ದಾರೆ.
ಕರ್ತವ್ಯ ಲೋಪ; ವರ್ಗಾವಣೆ: ಈ ಘಟನೆಗೆ ಸಂಬಂಧಿಸಿದಂತೆ ತಾಯಿ ಮರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ಡಾ. ರವೀಂದ್ರ ಕನಕೇರಿ ಅವರನ್ನು ಸಂಡೂರು ಸಾರ್ವಜನಿಕ ಆಸ್ಪತ್ರೆಗೆ ಅನ್ಯಪರ ಸೇವೆಗೆ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆ ಆಧಾರದ ಶುಶ್ರೂಷಣಾಧಿಕಾರಿ ರಜನಿ ಅವರನ್ನು ಸಿರುಗುಪ್ಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿಯೋಜಿಸಿ ವರ್ಗಾವಣೆಗೊಳಿಸಿ ಬಳ್ಳಾರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶುಕ್ರವಾರ ಆದೇಶಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ವೈದ್ಯಕೀಯ ವರದಿ ಮಾತ್ರ ಪಡೆಯಲಾಗಿದ್ದು, ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.