ಪ್ರಜಾವಾಣಿ ವಾರ್ತೆ
ಬಳ್ಳಾರಿ: ವೈದ್ಯ ಸಾಹಿತ್ಯವನ್ನು ಸ್ಥಳೀಯ ಭಾಷೆಯಲ್ಲಿ ಬಲಪಡಿಸುವ ಸಲುವಾಗಿ ದೇಶದ ಇತರ ರಾಜ್ಯಗಳ ಭಾರತೀಯ ವೈದ್ಯಕೀಯ ಸಂಘಗಳೊಂದಿಗೆ ಸಹಯೋಗ, ಸಂಯೋಜನೆ ಮಾಡಿಕೊಳ್ಳುವುದೂ ಸೇರಿದಂತೆ ಒಟ್ಟು ಐದು ನಿರ್ಣಯಗಳನ್ನು ಬಳ್ಳಾರಿಯಲ್ಲಿ ನಡೆದ 6ನೇ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನದಲ್ಲಿ ಭಾನುವಾರ ಕೈಗೊಳ್ಳಲಾಗಿದೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ರಾಜ್ಯ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ ಹಾಗೂ ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಶಾಖೆ ಸಹಯೋಗದಲ್ಲಿ ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆ ಮತ್ತು ಕಾಲೇಜಿನಲ್ಲಿ ನಡೆದ ಎರಡು ದಿನಗಳ ಕನ್ನಡ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನ ಭಾನುವಾರ ಸಮಾರೋಪಗೊಂಡಿತು.
ಸಮಾರಂಭದಲ್ಲಿ ಕೈಗೊಂಡ ನಿರ್ಣಯಗಳನ್ನು ಕನ್ನಡ ವೈದ್ಯ ಬರಹಗಾರರ ಉಪ ಸಮಿತಿ ಅಧ್ಯಕ್ಷ ಡಾ.ಗಡ್ಡಿ ದಿವಾಕರ ಮಂಡಿಸಿದರು. ‘ನಂಜಪ್ಪ ಸ್ಮರಣಾರ್ಥ ವಾರ್ಷಿಕ ಕಾವ್ಯ ಪ್ರಶಸ್ತಿ ಸ್ಥಾಪನೆಗೆ ಬರಹಗಾರರ ಸಮಿತಿ ನಿರ್ಧರಿಸಿದೆ. ವೈದ್ಯಕೀಯ ಸಾಹಿತ್ಯಕ್ಕೆ ಭಾರತೀಯ ವೈದ್ಯಕೀಯ ಸಂಘದ ಮೂಲಕ ಮುದ್ರಣ ವ್ಯವಸ್ಥೆಯನ್ನು ಕಲ್ಪಿಸಲು ಚರ್ಚಿಸಲಾಗುವುದು. ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ವೈದ್ಯಕೀಯ ಕಾಲೇಜುಗಳಲ್ಲಿ ಸಕ್ರಿಯ ಕನ್ನಡ ಸಂಘ ಸ್ಥಾಪನೆ ಮಾಡಲು ಪ್ರಯತ್ನಿಸಲಾಗುವುದು. ಐಎಂಎನ ಪ್ರತಿ ಶಾಖೆಗಳಲ್ಲಿ ಒಂದು ಕನ್ನಡ ಕಾರ್ಯಕ್ರಮ ನಡೆಯಸಲು ನಿರ್ಣಯಿಸಲಾಗಿದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನ ಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.
ಕನ್ನಡ ವೈದ್ಯಬರಹಗಾರರ ರಾಜ್ಯ ಸಮ್ಮೇಳನದ ಅಧ್ಯಕ್ಷ ಡಾ. ಅರವಿಂದ ಪಟೇಲ್ ಮಾತನಾಡಿ, ‘ಅರೆವೈದ್ಯಕೀಯ, ನರ್ಸಿಂಗ್ ಶಿಕ್ಷಣವನ್ನು ಕನ್ನಡದಲ್ಲಿ ಆರಂಭಿಸಲು ಗಂಭೀರ ಸಮಾಲೋಚನೆಗಳು ಆಗಬೇಕು. ವೈದ್ಯಕೀಯ ಅನುಭವಗಳನ್ನು ಕಾವ್ಯವಾಗಿಸುವತ್ತ ಆನ್‌ಲೈನ್ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ವೈದ್ಯಕೀಯ ಪುಸ್ತಗಳು ಎಲ್ಲೆಡೆ ದೊರೆಯುವಂತೆ ಮಾಡಬೇಕು. ಬಳ್ಳಾರಿಯ ವೈದ್ಯಕೀಯ ಕಾಲೇಜಿನ ಗ್ರಂಥಾಲಯದಲ್ಲಿ ಕನ್ನಡದ ಪುಸ್ತಕಗಳು ದೊರೆಯಲು ಪ್ರಯತ್ನಿಸಬೇಕು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಲಿದೆ. ವೈದ್ಯ ಬರಹಗಾರರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ಮಾಡಿಕೊಡಲು ಪ್ರಯತ್ನಿಸಲಾಗುವುದು. ಬಳ್ಳಾರಿಯಲ್ಲಿ ಸಹೃದಯರು ಇದ್ದಾರೆ ಎಂಬುದನ್ನು ಈ ಸಮ್ಮೇಳನ ಸಾಬೀತು ಮಾಡಿದೆ’ ಎಂದರು.
ಐಎಂಎ ರಾಜ್ಯ ಘಟಕದ ಅಧ್ಯಕ್ಷ ವೈದ್ಯ ಚೀನಿವಾಲರ ಮಾತನಾಡಿ, ‘ಸಮ್ಮೇಳನದ ವೈದ್ಯಕೀಯ ಚಿಂತನೆ, ಸಾಹಿತ್ಯ ಮಮತೆ, ಮಾನವೀಯ ಮೌಲ್ಯ ಹೃದಯ ತುಂಬಿಸಿದೆ. ಸ್ಟೆತಾಸ್ಕೋಪ್ ಜತೆಗೇ ಲೇಖನಿ ಕೂಡ ಶಕ್ತಿಶಾಲಿ ಎಂಬುದಕ್ಕೆ ಈ ಸಮ್ಮೇಳನ ಸಾಕ್ಷಿ. ರೋಗಿಯ ನೋವನ್ನು ನಿವಾರಿಸುವ ಕೈಗಳು ಸಮಾಜದ ನೋವನ್ನು ವ್ಯಕ್ತಪಡಿಸುತ್ತದೆ. ಸಾಹಿತ್ಯಕ್ಕೆ ಅಂಥ ಶಕ್ತಿ ಇದೆ. ಇಲ್ಲಿನ ಚರ್ಚೆ ನಮ್ಮನ್ನು ಮತ್ತಷ್ಟು ಮಾನವೀಯವಾಗಿಸಿದೆ. ಮುಂದಿನ ದಿನಗಳಲ್ಲಿ ಕಾವ್ಯ, ಕವನದ ರೂಪದಲ್ಲಿ ಇಲ್ಲಿನ ಚರ್ಚೆ ಅರಳಲಿ. ಕನ್ನಡ ವೈದ್ಯ ಬರಹಗಾರರ ಮತ್ತಷ್ಟು ಬೆಳೆಯಲಿ’ ಎಂದು ಆಶಿಸಿದರು.
ಐಎಂಎ ರಾಜ್ಯ ಗೌರವ ಕಾರ್ಯದರ್ಶಿ ಡಾ.ಸೂರಿರಾಜು, ಡಾ.ದಿನೇಶ್ ಗುಡಿ, ಡಾ.ಪರಸಪ್ಪ ಬಂದ್ರಕಳ್ಳಿ, ಡಾ.ಸುಮಾ ಗುಡಿ, ಡಾ.ದಿವ್ಯಾ ಹಾಗೂ ಡಾ. ಮಾಣಿಕರಾವ್ ಕುಲಕರ್ಣಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.