ಮೆಗಾ ಡೇರಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ್ದ ರಾಬಕೊವಿ ಅಧ್ಯಕ್ಷ, ಶಾಸಕ ರಾಘವೇಂದ್ರ ಹಿಟ್ನಾಳ್
ಬಳ್ಳಾರಿ: ಬಳ್ಳಾರಿ ನಗರ ಹೊರವಲಯದ ಕೊಳಗಲ್ ಗ್ರಾಮದಲ್ಲಿ ಮೆಗಾ ಡೇರಿ ನಿರ್ಮಿಸಲು ಮಂಜೂರಾಗಿರುವ 15 ಎಕರೆ ಭೂಮಿ ಖರೀದಿ ಪ್ರಕ್ರಿಯೆಗೆ ‘ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಒಕ್ಕೂಟ’ ಚಾಲನೆ ನೀಡಿದೆ.
ಶುಕ್ರವಾರ ರಾಬಕೊವಿ ನೂತನ ಆಡಳಿತ ಮಂಡಳಿಯ ಮೊದಲ ಸಭೆ ನಡೆಯಿತು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ‘ಭೂಮಿ ಖರೀದಿಗಾಗಿ ಸರ್ಕಾರಕ್ಕೆ ₹2.92 ಕೋಟಿ ಪಾವತಿಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು’ ಎಂದು ತಿಳಿಸಿದರು.
‘ನಾಲ್ಕು ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡುವ ಕುರಿತು ಚರ್ಚೆ ಮಾಡಿದ್ದೇವೆ. ರೈತರ, ಸಹಕಾರಿ ಸಂಘಗಳ ಸಮಸ್ಯೆ ಬಗೆಹರಿಸಲು, ಹೊಸ ಸಂಘಗಳನ್ನು ಮಾಡಲು, ಪಶು ವೈದ್ಯಾಧಿಕಾರಿಗಳನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.
‘ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಒಂದೆಡೆ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದ್ದರೆ, ಕೆಲವು ಜಿಲ್ಲೆಗಳಲ್ಲಿ ಕಡಿಮೆ ಹಾಲು ಉತ್ಪಾದನೆಯಾಗುತ್ತಿದೆ. ಎಲ್ಲ ಜಿಲ್ಲೆಗಳ ಉತ್ಪಾದನೆಯನ್ನು ಸಮತೋಲನಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಕ್ಕೂಟದ ಒಟ್ಟು ಉತ್ಪಾದನೆ 5 ಲಕ್ಷ ಲೀಟರ್‌ಗೆ ಹೆಚ್ಚಿಸಲು ತೀರ್ಮಾನ ಮಾಡಿದ್ದೇವೆ. ಬಳ್ಳಾರಿ, ಕೊಪ್ಪಳದ ಬೂದುಗುಂಪ ಮತ್ತು ರಾಯಚೂರಿನ ಡೇರಿಗಳನ್ನು ನಿರ್ವಹಣೆಗೆ ನಿರ್ಧರಿಸಲಾಗಿದ’ ಎಂದರು.
‘2024ರ ಮಾರ್ಚ್‌ನಲ್ಲಿ ಒಕ್ಕೂಟ ₹7 ಕೋಟಿ ನಷ್ಟದಲ್ಲಿತ್ತು. ಆದರೆ, ₹2025ರ ಮಾರ್ಚ್ ಹೊತ್ತಿಗೆ ಸುಮಾರು 2 ಕೋಟಿ ಲಾಭದಲ್ಲಿತ್ತಾದರೂ, ಒಟ್ಟಾರೆ, ₹4 ಕೋಟಿ ನಷ್ಟದಲ್ಲಿ ಸಂಸ್ಥೆ ಇದೆ’ ಎಂದು ರಾಬಕೊವಿಯ ವ್ಯವಸ್ಥಾಪಕ ನಿರ್ದೇಶಕ ಪ್ರಭುಶಂಕರ ಹೇಳಿದರು.
ಆಡಳಿತ ಮಂಡಳಿ ಸಭೆಯಲ್ಲಿ ಪದಾಧಿಕಾರಿಗಳು, ನಿರ್ದೇಶಕ ಭೀಮಾ ನಾಯ್ಕ ಅವರೂ ಸೇರಿಂದಂತೆ ಎಲ್ಲ ನಿರ್ದೇಶಕರು ಭಾಗವಹಿಸಿದ್ದರು.
ಒಕ್ಕೂಟದಲ್ಲಿ ಆಡಳಿತಾತ್ಮಕ ಬದಲಾವಣೆ ಮಾಡಲಿದ್ದೇವೆ. ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತೇವೆ. ಮಾರುಕಟ್ಟೆ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದೇವೆ. ಕೆಕೆಆರ್‌ಡಿಬಿಯಿಂದಲೂ ಹಣ ಹೊಂದಿಸಿ ತರಲಾಗುವುದು.ರಾಘವೇಂದ್ರ ಹಿಟ್ನಾಳ ರಾಬಕೊವಿ ಅಧ್ಯಕ್ಷ
ನಾರುತ್ತಿರುವ ಕೊಳಗಲ್:
ಮೆಗಾ ಡೇರಿ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿರುವ ಕೊಳಗಲ್ ಗ್ರಾಮದಲ್ಲಿ ಕೊಳಕು ತಾಂಡವವಾಡುತ್ತಿದೆ. ಡೇರಿ ಸ್ಥಳಕ್ಕೆ ತೆರಳುವ ಮುಖ್ಯ ರಸ್ತೆಯ ಅಕ್ಕಪಕ್ಕದ ಚರಂಡಿಗಳು ಕಟ್ಟಿಕೊಂಡು ದುರ್ವಾಸನೆ ಬೀರುತ್ತಿದೆ. ಎಲ್ಲೆಲ್ಲಿಯೂ ಬಿದ್ದಿರುವ ಕಸದ ರಾಶಿ ಈ ಮಧ್ಯೆ ಸುರಿದ ಮಳೆಯಿಂದಾಗಿ ಕೊಳಕು ವಾಸನೆ ಎಲ್ಲೆಡೆ ಹರಡಿಕೊಂಡಿತ್ತು. ಹಳ್ಳಿಯ ಹಲವರು ಈಗಲೂ ಚೊಂಬು ಹಿಡಿದು ಬಹಿರ್ದೆಸೆಗೆ ಹೋಗುತ್ತಿದ್ದ ದೃಶ್ಯಗಳು ಕೊಳಗಲ್ ಗ್ರಾಮದಲ್ಲಿ ಇದೆ.
ಡೇರಿಗೆ ಸ್ಥಳ ಪರಿಶೀಲನೆ:
ಕೊಳಗಲ್ ಗ್ರಾಮಕ್ಕೆ ಭೇಟಿ ನೀಡಿದ್ದ ರಾಬಕೊವಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಮೆಗಾ ಡೇರಿಗೆ ಜಿಲ್ಲಾಡಳಿತ ಮಂಜೂರು ಮಾಡಿರುವ 15 ಎಕರೆ ಜಾಗವನ್ನು ಪರಿಶೀಲಿಸಿದರು. ‘ಒಂದು ಅಥವಾ ಎರಡು ತಿಂಗಳಲ್ಲಿ ಮೆಗಾಡೇರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ಮುಖ್ಯಮಂತ್ರಿ ಸಚಿವರನ್ನು ಕರೆಸಲಾಗುವುದು’ ಎಂದು ಅವರು ತಿಳಿಸಿದರು. ಈ ವೇಳೆ ಮಾತನಾಡಿದ ಸ್ಥಳೀಯ ಶಾಸಕ ಬಿ. ನಾಗೇಂದ್ರ ‘ಮೆಗಾ ಡೇರಿ ಹೈನುಗಾರರ ರೈತರ ಬಹುದಿನಗಳ ಬೇಡಿಕೆ. ಇಲ್ಲಿ ಅತ್ಯಾಧುನಿಕ ಡೇರಿ ನಿರ್ಮಾಣ ಮಾಡಲಿದ್ದೇವೆ. ಇನ್ನು ಕೆಲವೇ ತಿಂಗಳಲ್ಲಿ ಜಿಲ್ಲೆಯಾದ್ಯಂತ 11 ಸಾವಿರ ಹಸು ವಿತರಿಸಲಾಗುವುದು. ಹಾಲು ಉತ್ಪಾದನೆ ಹೆಚ್ಚುತ್ತದೆ. ಮೆಗಾ ಡೇರಿ ಸಾಮರ್ಥ್ಯಕ್ಕೆ ಇದು ಪೂರಕವಾಗಲಿದೆ. ಬಳ್ಳಾರಿ ಮತ್ತು ಗ್ರಾಮಾಂತರ ಭಾಗದಲ್ಲಿ 1.50 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಬೇಕು. ಇದರಿಂದ ಹೈನುಗಾರರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ’ ಎಂದು ಹೇಳಿದರು. ಶಾಸಕ ನಾರಾ ಭರತ್ ರೆಡ್ಡಿ ಮೇಯರ್ ಮುಲ್ಲಂಗಿ ನಂದೀಶ್ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ ಉಪ ವಿಭಾಗಾಧಿಕಾರಿ ಪ್ರಮೋದ್ ತಹಶೀಲ್ದಾರ್ ರೇಖಾ ರಾಬಕೊವಿ ಮಾಜಿ ನಾಮನಿರ್ದೇಶಿತ ಸದಸ್ಯ ಧನಂಜಯ ಹಾಮಲ್ ಕಾಂಗ್ರೆಸ್ ಮುಖಂಡರಾದ ಜಗನ್ನಾಥ್ ಸುಧೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.