
ಹರಪನಹಳ್ಳಿ: ಬಿಸಿಯೂಟ ಕಾರ್ಯಕರ್ತೆಯರ ತಿಂಗಳ ಗೌರವಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಾರ್ಯಕರ್ತರು ಸೋಮವಾರ ತಾಲ್ಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆ ಜಿಲ್ಲಾ ಮುಖಂಡರಾದ ಪುಷ್ಪಾ ಮಾತನಾಡಿ, ‘23 ವರ್ಷಗಳಿಂದ ಬಿಸಿಯೂಟ ತಯಾರಕರು ಗೌರವಧನ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಶಾಲಾ ಮಕ್ಕಳಿಗೆ ಶುಚಿ, ರುಚಿಯಾದ ಅಡುಗೆ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಈಗ ನಮ್ಮ ಗೌರವಧನ ₹3,600ಕ್ಕೆ ತಲುಪಿದೆ. ಇದರಿಂದ ನಮ್ಮ ಕುಟುಂಬ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.
‘ಬೆಳಗಾವಿಯ ಖಾನಾಪುರದಲ್ಲಿ ನಡೆದಿದ್ದ ಸಮಾವೇಶದಲ್ಲಿ ರಾಷ್ಟ್ರೀಯ ನಾಯಕಿ ಪ್ರಿಯಾಂಕ ಗಾಂಧಿ ಅವರು ಬಿಸಿಯೂಟ ಮತ್ತು ಅಂಗನವಾಡಿ ತಾಯಂದಿರ ಗೌರವಧನ ಹೆಚ್ಚಿಸಲಾಗುವುದು ಎಂದು 6ನೇ ಗ್ಯಾರಂಟಿ ಘೋಷಿಸಿದ್ದರು. ಆದರೆ ಅದು ಈವರೆಗೂ ಈಡೇರಿಲ್ಲ’ ಎಂದು ದೂರಿದರು.
‘ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅಡುಗೆ ತಯಾರಕರ ಮೇಲೆ ದೌರ್ಜನ್ಯ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು. ಉದ್ಯೋಗ ಭದ್ರತೆ ಒದಗಿಸಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ವಿಲೀನಗೊಳಿಸುವ ನಿರ್ಧಾರ ಕೈಬಿಡಬೇಕು. ಒಂದು ವೇಳೆ ಶಾಲೆ ಮುಚ್ಚಿದರೆ ಶಾಲೆಯ ಅಡುಗೆ ಕೆಲಸವನ್ನೆ ನಂಬಿರುವ ಸಿಬ್ಬಂದಿಗೆ ಅನ್ಯಾಯವಾಗುತ್ತದೆ. ಶೀಘ್ರ ಗೌರವಧನ ಹೆಚ್ಚಿಸುವ ನಿರ್ಧಾರವನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ತಾಲ್ಲೂಕು ಮುಖಂಡ ಬಳಿಗನೂರು ಕೊಟ್ರೇಶ್, ಪುಷ್ಪಾ, ವಿಶಾಲಮ್ಮ, ಶಿಲ್ಪಾ, ರುದ್ರಮ್ಮ, ಚೈತ್ರಾ, ಗುಡಿಹಳ್ಳಿ ಹಾಲೇಶ್, ಎಚ್.ಎಂ.ಸಂತೋಷ್, ಚೌಡಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.