ADVERTISEMENT

ಹಾಲು ಉತ್ಪಾದಕರ ಸಂಘಗಳ ನಷ್ಟದ ಹೊರೆ ರೈತರಿಗೆ ಹೊರಿಸಲ್ಲ: ರಾಘವೇಂದ್ರ ಹಿಟ್ನಾಳ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 6:28 IST
Last Updated 7 ಡಿಸೆಂಬರ್ 2025, 6:28 IST
ರಾಘವೇಂದ್ರ ಹಿಟ್ನಾಳ
ರಾಘವೇಂದ್ರ ಹಿಟ್ನಾಳ   

ಬಳ್ಳಾರಿ: ‘ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿನ ನಷ್ಟವನ್ನು ರೈತರ ಮೇಲೆ ಹೊರಿಸುವುದಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ, ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಸ್ಪಷ್ಟಪಡಿಸಿದ್ದಾರೆ. 

ಒಕ್ಕೂಟದ 349ನೇ ಆಡಳಿತ ಮಂಡಳಿಯ ಸಭೆಯು ಶನಿವಾರ ಒಕ್ಕೂಟದ ಬಳ್ಳಾರಿ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆಯಿತು.

ಸಭೆಯಲ್ಲಿನ ನಿರ್ಧಾರಗಳ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರಾಘವೇಂದ್ರ ಹಿಟ್ನಾಳ್‌, ‘ಒಕ್ಕೂಟ ಆರ್ಥಿಕವಾಗಿ ನಷ್ಟಕ್ಕೆ ಸಿಲುಕಿದೆ. ಅದನ್ನು ತಡೆಯಲು ಮತ್ತು ಒಕ್ಕೂಟ ಲಾಭದ ಹಳಿಗೆ ಬರಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ಮಾಡಲಾಗಿದೆ. ₹7.32 ಕೋಟಿಯಷ್ಟು ನಷ್ಟ ಅಂದಾಜು ಮಾಡಲಾಗಿತ್ತು. ರೈತರಿಂದ ಖರೀದಿ ಮಾಡುವ ಹಾಲಿನ ದರ ಇಳಿಸಬೇಕೆಂಬ ಸಲಹೆ ಇತ್ತು. ಆದರೆ ಅದನ್ನು ತಳ್ಳಿಹಾಕಲಾಗಿದೆ. ರೈತರ ಮೇಲೆ ಯಾವುದೇ ಹೊರೆ ಹೊರಿಸುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಮುಂದಿನ ವರ್ಷದ ಇದೇ ಹೊತ್ತಿಗೆ ಒಕ್ಕೂಟ ನಷ್ಟದಿಂದ ಪಾರಾಗಿ ಲಾಭದ ಹಳಿಗೆ ಬರಲಿದೆ’ ಎಂದರು. 

‘ಖರೀದಿಸಿದ ಹಾಲಿಗೆ 15 ದಿನಗಳಿಗೆ ಒಮ್ಮೆ ಹಣ ಪಾವತಿ ಮಾಡಬೇಕು. ಆದರೆ, ಈಗ ವಿಳಂಬವಾಗುತ್ತಿದೆ. ಅದನ್ನು ಸರಿಪಡಿಸುವ ಕ್ರಮಗಳನ್ನು ಚರ್ಚಿಸಿದ್ದೇವೆ. ಹಾಲು ಉತ್ಪಾದನೆ, ಗುಣಮಟ್ಟ ಕಾಯ್ದುಕೊಳ್ಳುವಿಕೆ, ಮಾರುಕಟ್ಟೆ ಅಭಿವೃದ್ಧಿಗೆ ಸೂಚಿಸಿದ್ದೇವೆ. ಮೆಗಾಡೇರಿ ನಿರ್ಮಾಣದ ಕುರಿತು ಸಿಎಂ ಜತೆಗೆ ಮಾತುಕತೆ ಮಾಡಲಾಗಿದ್ದು, ಅವರು ಮುಖ್ಯಕಾರ್ಯದರ್ಶಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ’ ಎಂದರು.  

‘ಚಿಕ್ಕಬಳ್ಳಾಪುರ ಒಕ್ಕೂಟದ ಚುನಾವಣೆ ಇನ್ನೂ ನಡೆದಿಲ್ಲ. ಅದು ಮುಗಿದ ಬಳಿಕ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಕುರಿತು ಮಾತನಾಡುತ್ತೇನೆ’ ಎಂದರು.  

ಖರ್ಚು ಕಡಿಮೆ ಮಾಡಲು ಆದ್ಯತೆ 

ಉಪಾಧ್ಯಕ್ಷ ಸತ್ಯನಾರಾಣ ಮಾತನಾಡಿ ‘ಒಕ್ಕೂಟದ ವ್ಯವಸ್ಥಾಪಕರೂ ಸೇರಿ ಅಧಿಕಾರಿ ವರ್ಗ ಹಾಲಿನ ಖರೀದಿ ದರ ಇಳಿಕೆ ಮಾಡಬೇಕು ಎಂದು ಎಷ್ಟೇ ಒತ್ತಾಯ ಮಾಡಿದರೂ ಆಡಳಿತ ಮಂಡಳಿ ಅಂಥ ನಿರ್ಧಾರದಿಂದ ಹಿಂದೆ ಸರಿದಿದೆ. ಅದಕ್ಕೆ ಬದಲಾಗಿ ಒಕ್ಕೂಟದ ಆರ್ಥಿಕ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಸೂಚಿಸಲಾಗಿದೆ. ಒಕ್ಕೂಟದಿಂದ ಕೆಎಂಎಫ್‌ 25 ಸಾವಿರ ಲೀಟರ್‌ ಖರೀದಿಸಬೇಕು ಎಂಬ ಮನವಿಯನ್ನು ಕೇಂದ್ರ ಕಚೇರಿಗೆ ರವಾನಿಸಲಾಗಿದೆ. ಹಾಲಿನ ಒಕ್ಕೂಟದಲ್ಲಿ ಬಾಯ್ಲರ್‌ಗಳಿಗೆ ಬಳಕೆಯಾಗುತ್ತಿರುವ ವಿದ್ಯುತ್‌ ಬಿಲ್‌ಗಾಗಿಯೇ ₹3 ಕೋಟಿಗೂ ಅಧಿಕ ಹಣ ವ್ಯಯಿಸಲಾಗುತ್ತಿದೆ. ಇದಕ್ಕಾಗಿ ಸೋಲಾರ್‌ ಅಳವಡಿಕೆಗೆ ನಿರ್ಧರಿಸಲಾಗಿದೆ’ ಎಂದರು.  ‘ಹಾಲು ಉತ್ಪಾದಕರಿಗೆ ನಿಯಮಿತವಾಗಿ ಬಟವಾಡೆ ಸಂದಾಯ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ 15ರಂದು ತುರ್ತು ಸಭೆ ಕರೆಯಾಗುತ್ತಿದೆ’ ಎಂದು ಹೇಳಿದರು.  ‘ಗುಣಮಟ್ಟದ ಹಾಲಿನ ಸಂಗ್ರಹಣೆ ಮಾರುಕಟ್ಟೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿ ಸಿಬ್ಬಂದಿ ವರ್ಗಕ್ಕೆ ಗುರಿ ನಿಗದಿ ಮಾಡಲಾಗಿದೆ. ಇದರಲ್ಲಿ ವಿಫಲವಾದರೆ ಶಿಸ್ತು ಕ್ರಮ ಕೈಗೊಳ್ಳಲು ವ್ಯವಸ್ಥಾಪಕ ನಿರ್ದೇಶಕರಿಗೆ ತಾಕೀತು ಮಾಡಲಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.