ADVERTISEMENT

ಬಳ್ಳಾರಿ: ‘ಸ್ಕೂಲ್‌ ಆಫ್‌ ಮೈನಿಂಗ್‌’ ಎಲ್ಲಿ?

ಸಂಡೂರೋ, ಬೆಂಗಳೂರೋ, ಕೊಪ್ಪಳವೋ? ಇನ್ನೂ ಆಗಿಲ್ಲ ನಿರ್ಧಾರ

ಆರ್. ಹರಿಶಂಕರ್
Published 20 ಸೆಪ್ಟೆಂಬರ್ 2025, 2:48 IST
Last Updated 20 ಸೆಪ್ಟೆಂಬರ್ 2025, 2:48 IST
   

ಬಳ್ಳಾರಿ: ಬೆಳೆಯುತ್ತಿರುವ ಗಣಿ ಉದ್ಯಮಕ್ಕೆ ಅಗತ್ಯವಿರುವ ತಂತ್ರಜ್ಞಾನ ಮತ್ತು ತಂತ್ರಜ್ಞರನ್ನು ಸಿದ್ಧಪಡಿಸುವ ಉದ್ದೇಶವುಳ್ಳ ‘ಸ್ಕೂಲ್‌ ಅಫ್‌ ಮೈನಿಂಗ್‌’ ಕಾಲೇಜನ್ನು ಎಲ್ಲಿ ಸ್ಥಾಪಿಸಬೇಕು ಎಂಬುದರ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ರಾಜ್ಯ ಸರ್ಕಾರಕ್ಕೆ ಈವರೆಗೆ ಸಾಧ್ಯವಾಗಿಲ್ಲ. 

ಕಾಲೇಜು ಸ್ಥಾಪಿಸಲು ಸೂಕ್ತವಾದ ಸ್ಥಳ ನಿರ್ಧರಿಸಲೆಂದು 2022ರ ಸೆ.7ರಂದು ರಚಿಸಲಾಗಿರುವ ತಜ್ಞರ ಸಮಿತಿಯು ಈ ವರೆಗೆ ತನ್ನ ವರದಿಯನ್ನೇ ನೀಡಿಲ್ಲ. ಹೀಗಾಗಿ ಕಾಲೇಜಿನ ಜಾಗದ ವಿಚಾರವೇ ಡೋಲಾಯಮಾನವಾಗಿದೆ. 

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿರುವ ನಂದಿಹಳ್ಳಿಯಲ್ಲಿ ‘ಸ್ಕೂಲ್‌ ಆಫ್‌ ಮೈನಿಂಗ್‌’ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಉತ್ಕೃಷ್ಟ ಕಬ್ಬಿಣದ ಅದಿರನ್ನು ಹೊಂದಿರುವ, ಗಣಿ ಚಟುವಟಿಕೆ ಹೆಚ್ಚಾಗಿರುವ ಕಾರಣಕ್ಕೆ ಸಂಡೂರಿನಲ್ಲಿಯೇ ‘ಸ್ಕೂಲ್‌ ಆಫ್‌ ಮೈನಿಂಗ್‌’ ಕಾಲೇಜು ಸ್ಥಾಪನೆಯಾಗುವ ಆಶಾಭಾವ ಇತ್ತು.

ADVERTISEMENT

ಆದರೆ, ಪ್ರಸ್ತಾವನೆಯನ್ನು ಪರಿಶೀಲಿಸಲು ಸರ್ಕಾರ 2021ರ ಜುಲೈ 20ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ ಎಚ್‌.ಪಿ ಕಿಂಚಾ ಅವರ ನೇತೃತ್ವದ ಒಟ್ಟು ನಾಲ್ವರು ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ ಬಳ್ಳಾರಿ, ಕೊಪ್ಪಳ ಮತ್ತು ಬೆಂಗಳೂರು ಈ ಮೂರು ಸ್ಥಳಗಳಲ್ಲಿ ಸ್ಕೂಲ್ ಆಫ್ ಮೈನಿಂಗ್ ಕಾಲೇಜು ಸ್ಥಾಪಿಸುವುದರ ಕುರಿತು ಶಿಫಾರಸ್ಸು ಮಾಡಿತ್ತು. ಈ ಸಮಿತಿ ಸಲ್ಲಿಸಿದ್ದ ವರದಿಯನ್ನು ಅನುಷ್ಠಾನಗೊಳಿಸುವುದರ ಸಂಬಂಧ ಸರ್ಕಾರವು 2022ರ ಸೆ. 7ರಂದು ಮತ್ತೊಂದು ಸಮಿತಿಯನ್ನು ರಚಿಸಿದೆ.

ಆದರೆ, ಸಮಿತಿ ರಚಿಸಿ 2025ರ ಸೆಪ್ಟೆಂಬರ್‌ 7ಕ್ಕೆ ಮೂರು ವರ್ಷಗಳು ಕಳೆದರೂ ಇನ್ನೂ ತನ್ನ ವರದಿಯನ್ನೇ ಸಲ್ಲಿಸಿಲ್ಲ. ಹೀಗಾಗಿ ‘ಸ್ಕೂಲ್‌ ಆಫ್‌ ಮೈನಿಂಗ್‌’ ಕಾಲೇಜು ಬಳ್ಳಾರಿಯಲ್ಲೋ, ಬೆಂಗಳೂರಿನಲ್ಲೋ, ಕೊಪ್ಪಳದಲ್ಲೋ ಎಂಬ ಗೊಂದಲ ಇನ್ನೂ ಮುಂದುವರಿದಿದೆ. ಈ ಮಧ್ಯೆ ಜಿಲ್ಲಾಡಳಿತವೂ ಈ ವಿಚಾರವನ್ನು ಮರೆತು ಕುಳಿತಂತೆ ಕಾಣುತ್ತಿದೆ. 

ಯಾವ ಉದ್ದೇಶಕ್ಕೆ ಮೈನಿಂಗ್‌ ಸ್ಕೂಲ್‌?: 

ಗಣಿಗಾರಿಕೆ ಕ್ಷೇತ್ರದ ಉನ್ನತಿಗಾಗಿ, ರಾಜ್ಯಕ್ಕೆ ಹೆಚ್ಚು ಹೆಚ್ಚು ಗಣಿ ಇಂಜಿನಿಯರ್‌ಗಳು, ಪರಿಸರ ಇಂಜಿನಿಯರ್‌ಗಳು, ಭೂವಿಜ್ಞಾನಿಗಳು ಮತ್ತು ಐಟಿ ವೃತ್ತಿಪರರು ಬೇಕಾಗುತ್ತಾರೆ. ಅಂತರ ರಾಷ್ಟ್ರೀಯ ಮಾನದಂಡಗಳ ಪ್ರಕಾರ ಗಣಿಗಾರಿಕೆ ವಲಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಮರ್ಪಕವಾಗಿ ಬಲಪಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ‘ಸ್ಕೂಲ್ ಆಫ್ ಮೈನಿಂಗ್’ ಸ್ಥಾಪಿಸಲು ಸರ್ಕಾರ ಉದ್ದೇಶಿಸಿತ್ತು. 

ತಾಂತ್ರಿಕ ಪರಿಣತರ ತಯಾರಿ

ಗಣಿಗಾರಿಕೆ ಮೇಲ್ವಿಚಾರಣೆ, ಗಣಿ ವ್ಯವಸ್ಥಾಪಕ, ಗಣಿ ಪರಿಣತರನ್ನು ಪೂರೈಸಲು ಇದು ಮಾರ್ಗದರ್ಶಿ ಸಂಸ್ಥೆ ‘ಸ್ಕೂಲ್‌ ಆಫ್‌ ಮೈನಿಂಗ್‌’ ಕಾಲೇಜು ಕೆಲಸ ಮಾಡಲಿದೆ.  

ಬ್ಲಾಸ್ಟಿಂಗ್ ಮತ್ತು ಅದರ ತಂತ್ರಜ್ಞಾನ ಸೇರಿದಂತೆ ಆಳ ಕೊರೆಯುವಿಕೆ, ಕೋರ್ ಡ್ರಿಲ್ಲಿಂಗ್, ಕೋರ್ ಮಾದರಿ, ದತ್ತಾಂಶ ಸಂಸ್ಕರಣೆ ಮತ್ತು ವಿಶ್ಲೇಷಣೆ, ಖನಿಜ ಸಂಪತ್ತಿನ ದಾಸ್ತಾನು ಅಂದಾಜಿಸಲು ಆಧುನಿಕ ವಿಧಾನಗಳನ್ನು ಆವಿಷ್ಕರಿಸಲು ಈ ಸಂಸ್ಥೆ ಅಗತ್ಯ. 

ಸರ್ವೇಯರ್‌ಗಳಿಗೆ ಸುಧಾರಿತ ಸರ್ವೇ ವಿಧಾನಗಳನ್ನು ತಿಳಿಸಿಕೊಡಲು, ಗಣಿಗಾರಿಕೆ ವಿಧಾನಗಳಲ್ಲಿ ಹೊಸತನ್ನು ಸಂಶೋಧಿಸಲು ಈ ಸಂಸ್ಥೆ ನೆರವಾಗುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. 

ಸರ್ಕಾರ ಈ ವಿಚಾರವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಿ. ಸ್ಕೂಲ್‌ ಆಫ್‌ ಮೈನ್‌ ಸಾಧ್ಯವಿದೆಯೋ ಇಲ್ಲವೋ ಎಂಬುದನ್ನಾದರೂ ಸ್ಪಷ್ಟಪಡಿಸಲಿ. ಈ ಕುರಿತ ಗೊಂದಲ ನಿವಾರಿಸಲಿ 
ವೈ.ಎಂ ಸತೀಶ್‌ ವಿಧಾನ ಪರಿಷತ್‌ ಸದಸ್ಯ 

ಕೇಂದ್ರದ ಮುಂದಿಲ್ಲ ಪ್ರಸ್ತಾವ 

‘ಸ್ಕೂಲ್‌ ಆಫ್‌ ಮೈನಿಂಗ್‌’ ಸ್ಥಾಪಿಸುವುದು ರಾಜ್ಯ ಸರ್ಕಾರದ ಕೈಲಿಲ್ಲ. ಅದು ಕೇಂದ್ರ ಸರ್ಕಾರ ಮಾಡಬೇಕಾದ ನಿರ್ಧಾರ. ಆದರೆ ರಾಜ್ಯದಲ್ಲಿ ಸ್ಕೂಲ್‌ ಆಫ್‌ ಮೈನಿಂಗ್‌ ಆರಂಭಿಸುವ ಪ್ರಸ್ತಾವವೇ ಕೇಂದ್ರದ ಮುಂದೆ ಇಲ್ಲ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಹೀಗಾಗಿ ಇದೊಂದು ಕಲ್ಪಿತ ಯೋಜನೆಯೇ ಎಂಬ ಪ್ರಶ್ನೆಯೂ ಎದ್ದಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.