ADVERTISEMENT

ಬಳ್ಳಾರಿ: ಪಾಲಿಕೆ ಕಮಿಷನರ್‌ ಮೇಲೆ ಸಚಿವ ನಾಗೇಂದ್ರ ಗರಂ

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಜಾಹಿರಾತು ಫಲಕ ಕೆಡವಿದ ಕ್ರಮ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 14:32 IST
Last Updated 6 ಜುಲೈ 2023, 14:32 IST
ಸಚಿವ ಬಿ. ನಾಗೇಂದ್ರ
ಸಚಿವ ಬಿ. ನಾಗೇಂದ್ರ   

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿದ್ದ ಭಾರಿ ಜಾಹಿರಾತು ಫಲಕವನ್ನು ಕೆಡವಿದ ಕ್ರಮದಿಂದ ಸಿಟ್ಟಿಗೆದ್ದಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ಪಾಲಿಕೆ ಆಯುಕ್ತ ಎಸ್‌.ಎನ್‌. ರುದ್ರೇಶ್‌ ಮೇಲೆ ಗರಂ ಆಗಿದ್ದಾರೆ.

ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಎಂಟು ಭಾರಿ ಗಾತ್ರದ ಜಾಹಿರಾತು ಫಲಕ, 10/25 ಅಡಿಯ 20 ಫಲಕಗಳು ಹಾಗೂ ರಸ್ತೆ ವಿಭಜಕಗಳಲ್ಲಿ ಅಳವಡಿಸಿದ್ದ 270 ಸಣ್ಣ ಗಾತ್ರದ ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದರು. 

ಬಳ್ಳಾರಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಕೌಲ್‌ಬಜಾರ್‌ ಪ್ರದೇಶದಲ್ಲಿ ‘ಸನ್‌ ಮೀಡಿಯಾ’ ಸಂಸ್ಥೆ ಹಾಕಿದ್ದ ಭಾರಿ ಗಾತ್ರದ ಜಾಹಿರಾತು ಫಲಕವೂ ಇದರಲ್ಲಿ ಸೇರಿತ್ತು. ಪಾಲಿಕೆಯ ಮಾಜಿ ಸದಸ್ಯ ಬಂಡಿಹಟ್ಟಿ ನಾಗರಾಜ್‌ ಅವರ ಪತ್ನಿ ಸುಜಾತಾ ಎಂಬುವರಿಗೆ ಇದು ಸಂಬಂಧಿಸಿದ್ದು.

ADVERTISEMENT

ಏಪ್ರಿಲ್‌ 3ರಂದು ಫಲಕದ ಬಾಡಿಗೆ ಬಾಬ್ತು ₹ 1.97ಲಕ್ಷವನ್ನು ಪಾಲಿಕೆಗೆ ಸುಜಾತಾ ಪಾವತಿ ಮಾಡಿದ್ದರು. ಜುಲೈ 3ರಂದು ಸ್ವೀಕೃತಿ ಪಡೆದಿದ್ದರು. ಆದರೂ ಫಲಕ ತೆರವುಗೊಳಿಸಲಾಗಿದೆ. ಈ ಪ್ರದೇಶ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿನಿಧಿಸಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಸೇರುತ್ತದೆ. ಪಾಲಿಕೆ ಕಮಿಷನರ್‌ ತಮ್ಮ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿದ್ದು ನಾಗೇಂದ್ರ ಅವರ ಸಿಟ್ಟಿಗೆ ಕಾರಣವಾಯಿತು.

ಬುಧವಾರ ಮಧ್ಯಾಹ್ನ ಕಮಿಷನರ್‌ ಅವರಿಗೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು, ‘ನನ್ನ ಅನುಮತಿ ಇಲ್ಲದೆ ನನ್ನ ಕ್ಷೇತ್ರದಲ್ಲಿದ್ದ ಜಾಹಿರಾತು ಫಲಕವನ್ನು ತೆರೆದಿದ್ದು ಹೇಗೆ?’ ಎಂದು ಗರಂ ಆದರು’ ಎಂದು ನಾಗೇಂದ್ರ ಅವರ ಆಪ್ತ ಮೂಲಗಳು ತಿಳಿಸಿವೆ.

‘ನಗರದ ಸೌಂದರ್ಯ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಉದ್ದೇಶದಿಂದ ಫಲಕ ತೆಗೆದು ಹಾಕಲಾಗಿದೆ’ ಎಂದು ಕಮಿಷನರ್‌ ಸಮಜಾಯಿಷಿ ನೀಡಿದರು. ಆದಕ್ಕೆ ‘ತೆಗೆಯುವ ಮೊದಲು ನನ್ನನ್ನು ಏಕೆ ಕೇಳಲಿಲ್ಲ’ ಎಂದು ಅವರು ಕೇಳಿದರು. ಫಲಕ ತೆಗೆಯುವಾಗ ತಾವು ಸ್ಥಳದಲ್ಲಿ ಇರಲಿಲ್ಲ ಎಂದು ರುದ್ರೇಶ್‌ ಹೇಳಿದ್ದಾಗಿ ಆಪ್ತ ಮೂಲಗಳು ಹೇಳಿವೆ.

‘ಕೌಲ್‌ ಬಜಾರ್‌ನಲ್ಲಿ ತೆರವು ಮಾಡಿರುವ ಫಲಕವನ್ನು ಮರಳಿ ಅಳವಡಿಸಬೇಕು. ಇಲ್ಲವೆ, ಅದಕ್ಕೆ ಪರಿಹಾರ ಕೊಡಬೇಕು’ ಎಂದು ಕಮಿಷನರ್‌ ಅವರಿಗೆ ಸಚಿವರು ತಾಕೀತು ಮಾಡಿದ್ದಾರೆ. ಸಮಸ್ಯೆ ಪರಿಹರಿಸುವ ಭರವಸೆಯನ್ನು ರುದ್ರೇಶ್‌ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಬಳ್ಳಾರಿಯಲ್ಲಿ ಇದೀಗ ದ್ವೇಷ ರಾಜಕಾರಣ ಆರಂಭವಾಗಿದ್ದು, ಯುವ ನಾಯಕರೊಬ್ಬರು ತಮ್ಮ ಪ್ರಭಾವ ಬಳಸಿ ತಮಗಾಗದವರನ್ನು ಬಗ್ಗು ಬಡಿಯುತ್ತಿದ್ದಾರೆ’ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಕಮಿಷನರ್‌ ರುದ್ರೇಶ್‌

* ಕಮಿಷನರ್‌ಗೆ ಕರೆ ಮಾಡಿದ್ದ ಸಚಿವರು * ಸೂಕ್ತ ರೀತಿ ಸಮಸ್ಯೆ ಪರಿಹಾರಕ್ಕೆ ಸೂಚನೆ * ಕೌಲ್‌ ಬಜಾರ್‌ ವಿಸ್ತರಣೆ ಪ್ರಸ್ತಾವ

ಸರ್ಕಲ್‌ ವಿಸ್ತರಣೆ ಪ್ರಸ್ತಾವ... ಕೌಲ್ ಬಜಾರ್ ಸರ್ಕಲ್‌ ವಿಸ್ತರಣೆ ಪ್ರಸ್ತಾವ ಪಾಲಿಕೆ ಮುಂದಿದೆ. ಒಂದೆರಡು ವಾರಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಈಗ ಅಲ್ಲದಿದ್ದರೂ ಕಾಮಗಾರಿ ಆರಂಭವಾದ ಮೇಲಾದರೂ ಫಲಕ ತೆರವುಗೊಳಿಸಲೇಬೇಕಿತ್ತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಅವರನ್ನು ಕರೆದು ಮಾತನಾಡಿ ಮನವೊಲಿಸುವ ಜವಾಬ್ದಾರಿಯನ್ನು ಪಾಲಿಕೆ ಅಧಿಕಾರಿಗಳಾದ ಕಿರಣ್‌ ಮತ್ತು ರೆಹಮಾನ್‌ ಅವರಿಗೆ ಕಮಿಷನರ್‌ ನೀಡಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.