ADVERTISEMENT

ತೋರಣಗಲ್ಲು | ಮಿಶ್ರ ಬೇಸಾಯ: ಉತ್ತಮ ಫಲ

ಹಣ್ಣು, ತರಕಾರಿ ಜೊತೆಗೆ ಹೂವು ಬೆಳೆದ ರೈತ ವಾಲ್ಮೀಕಿ ಮಾರುತಿ

ಪ್ರಜಾವಾಣಿ ವಿಶೇಷ
Published 2 ಜೂನ್ 2023, 0:18 IST
Last Updated 2 ಜೂನ್ 2023, 0:18 IST
ಸಮೃದ್ಧವಾಗಿ ಬೆಳೆದ ಹೂಕೋಸು ಪರಿಶೀಲಿಸಿದ ರೈತ ವಾಲ್ಮೀಕಿ ಮಾರುತಿ
ಸಮೃದ್ಧವಾಗಿ ಬೆಳೆದ ಹೂಕೋಸು ಪರಿಶೀಲಿಸಿದ ರೈತ ವಾಲ್ಮೀಕಿ ಮಾರುತಿ   

ಎರ‍್ರಿಸ್ವಾಮಿ ಬಿ.

ತೋರಣಗಲ್ಲು: ಸಮೀಪದ ಏಳುಬೆಂಚಿ ಗ್ರಾಮದ ರೈತ ವಾಲ್ಮೀಕಿ ಮಾರುತಿ ಎಂಬುವವರು ಮಿಶ್ರ ಕೃಷಿ ಪದ್ಧತಿಯಲ್ಲಿ 3 ಎಕರೆ 14 ಸೇಂಟ್ ಜಮೀನಿನಲ್ಲಿ ಹೂಕೋಸು, ಕಾಕಡಮಲ್ಲಿಗೆ, ಪೇರಲೆ, ದಾಳಿಂಬೆ, ಜಂಬುನೇರಳೆ, ವಾಟರ್ ಆ್ಯಪಲ್, ತೆಂಗು, ಮಾಗಣಿ ಬೆಳೆದು ವಾರ್ಷಿಕ ವೆಚ್ಚ ಕಳೆದು ₹ 2ಲಕ್ಷ ಆದಾಯಗಳಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಹಣ್ಣು ತರಕಾರಿ ಜೊತೆಗೆ ಎರಡು ವರ್ಷಗಳಿಂದ ಸಮೃದ್ಧವಾಗಿ ಹೂವನ್ನೂ ಬೆಳೆಯುತ್ತಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಸಾವಯವ ಕೃಷಿ ಪದ್ಧತಿಯನ್ನೇ ನಂಬಿ ವರ್ಷ ಪೂರ್ತಿ ಶ್ರಮವಹಿಸಿ ಕೃಷಿ ಆದಾಯದಿಂದ ಜೀವನ ನಡೆಸುತ್ತಿದ್ದಾರೆ.

ADVERTISEMENT

ಪ್ರತಿ ವರ್ಷ ವಾಣಿಜ್ಯ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಸೂರ್ಯಕಾಂತಿ ಮತ್ತು ಕಡಲೆ ಬೆಳೆಯುತ್ತಿದ್ದರು. ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಇರುವುದರಿಂದ ದೂಳು, ಕಲುಷಿತ ಹೊಗೆಯಿಂದ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿ ನಷ್ಟ ಉಂಟಾಗುತ್ತಿತ್ತು. ಹೀಗಾಗಿ ಆ ಬೆಳೆಗಳಿಗೆ ವಿದಾಯ ಹೇಳಿ ವಿವಿಧ ಹಣ್ಣು, ತರಕಾರಿ ಹಾಗೂ ಹೂವಿನ ಬೇಸಾಯ ಆರಂಭಿಸಿದ್ದಾರೆ.

ಪೇರಲೆ, ದಾಳಿಂಬೆ, ಜಂಬುನೇರಳೆಹಣ್ಣು, ವಾಟರ್ ಆ್ಯಪಲ್, ತೆಂಗು, ಮಾಗಣಿ ಸಸಿಗಳನ್ನು ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಖರೀದಿಸಿದ್ದಾರೆ. ಪೇರಲೆ, ದಾಳಿಂಬೆ, ಜಂಬುನೇರಳೆ ಸಸಿಗಳಿಗೆ ತಲಾ ₹100ರಂತೆ ಖರೀದಿಸಿದ್ದರೆ, ವಾಟರ್ ಆ್ಯಪಲ್ ಹಣ್ಣಿನ ಒಂದು ಸಸಿಗೆ ₹150ರಂತೆ ಒಟ್ಟು ನಾಲ್ಕು ಸಸಿಗಳನ್ನು ಖರೀದಿಸಿ ಬೆಳೆಸಿದ್ದಾರೆ.

ಪೇರಲೆ ಮತ್ತು ದಾಳಿಂಬೆ ಹಣ್ಣಿನ ಸಸಿಗಳನ್ನು ಮೂರು ಎಕರೆಯ ವ್ಯಾಪ್ತಿಯಲ್ಲಿ, ಜಂಬು ನೇರಳೆಯ ಸಸಿಗಳನ್ನು 1ಎಕರೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಜಮೀನಿನ ಸುತ್ತ, ಬದುಗಳಲ್ಲಿ 100 ತೆಂಗು, 200 ಮಾಗಣಿ ಸಸಿಗಳನ್ನು ನೆಟ್ಟಿದ್ದಾರೆ. ಹೂಕೋಸನ್ನು ಒಂದು ಎಕರೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ.

ಅರ್ಧ ಎಕರೆಯಲ್ಲಿ ಕಾಕಡಮಲ್ಲಿಗೆಯ 500 ಸಸಿಗಳನ್ನು ನೆಟ್ಟು ಆರು ತಿಂಗಳಾಗಿದೆ. 1 ಕೆ.ಜಿ. ಕಾಕಡಮಲ್ಲಿಗೆಯನ್ನು ₹600ರಂತೆ ಮಾರಾಟ ಮಾಡಿ ಆರೇ ತಿಂಗಳಲ್ಲ ₹ 30ಸಾವಿರ ಆದಾಯ ಗಳಿಸಿದ್ದಾರೆ.

ಕೃಷಿ ಇಲಾಖೆಯಿಂದ ಸಬ್ಸಿಡಿ ಅಡಿ ಹನಿ ನೀರಾವರಿಗೆ ₹25 ಸಾವಿರ ನೀಡಿ, ಡ್ರಿಪ್‍ಗಳನ್ನು ಪಡೆದಿದ್ದಾರೆ. ಮಿಶ್ರ ಬೇಸಾಯದ ವೆಚ್ಚಕ್ಕಾಗಿ ಕುಡುತಿನಿ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಿಂದ ₹75 ಸಾವಿರ ಸಾಲ ಪಡೆದಿದ್ದಾರೆ.

ಸಾವಯುವ ಕೃಷಿ ಪದ್ಧತಿ ಅನುಸಾರ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಉತ್ತಮ ಇಳುವರಿ, ಹೆಚ್ಚಿನ ಆದಾಯಕ್ಕಾಗಿ ರಾಸಾಯನಿಕ ಗೊಬ್ಬರ, ಔಷಧಗಳನ್ನು ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡಿ, ಪ್ರತಿ ವರ್ಷ ಅಧಿಕ ಲಾಭ ಗಳಿಸುತ್ತಿದ್ದಾರೆ.

ಸಮೃದ್ಧವಾಗಿ ಬೆಳೆದ ಕಾಲಿಫ್ಲವರ್ ಬೆಳೆಯೊಂದಿಗೆ ರೈತ ವಾಲ್ಮೀಕಿ ಮಾರುತಿ

ತೋಟಗಾರಿಕಾ ಇಲಾಖೆಯು ಸಬ್ಸಿಡಿ ರೂಪದಲ್ಲಿ ಸಾಲ ನೀಡಬೇಕು. ಸರ್ಕಾರವು ತೋಟಗಾರಿಕಾ ಬೆಳೆಗಳಿಗೂ ಬೆಂಬಲ ಬೆಲೆ ನೀಡಬೇಕು

-ವಾಲ್ಮೀಕಿ ಮಾರುತಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.