ADVERTISEMENT

ಶಾಸಕ ನಾಗೇಂದ್ರಗೆ ಕತ್ತಿ ತೋರಿಸಿ ಬೆದರಿಕೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಮೇ 2023, 4:06 IST
Last Updated 15 ಮೇ 2023, 4:06 IST
ಬಿ. ನಾಗೇಂದ್ರ
ಬಿ. ನಾಗೇಂದ್ರ   

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರಿಗೆ ಕಿಡಿಗೇಡಿಗಳಿಬ್ಬರು ಕತ್ತಿ ತೋರಿಸಿ ಬೆದರಿಕೆ ಹಾಕಿದರೆನ್ನಲಾದ ಘಟನೆ ದೇವಿನಗರ ಮುಖ್ಯ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದ್ದು, ಈ ಸಂಬಂಧ ದೇವಿನಗರದ ವಿಷ್ಣು ವೆಂಕಟೇಶ್‌ ಮತ್ತು ರಮೇಶ್‌ ಎಂಬುವವರನ್ನು ಬಂಧಿಸಲಾಗಿದೆ. 

ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ದಿನ ಸಂಜೆ 7.30ರ ಸಮಯದಲ್ಲಿ ನಾಗೇಂದ್ರ ಅವರು ಆಪ್ತರೊಬ್ಬರ ಮನೆಗೆ ಹೋಗಿ ವಾಪಸ್‌ ಬರುವಾಗ ರಸ್ತೆ ಬದಿಯಲ್ಲಿದ್ದ ಇಬ್ಬರು ಕೈಯಲ್ಲಿದ್ದ ಕತ್ತಿ ಝಳಪಿಸಿ ಬೆದರಿಕೆ ಹಾಕಿದರು. ನಾಗೇಂದ್ರ ಕಾರಿನೊಳಗೆ ಕುಳಿತಿದ್ದರಿಂದ ತೊಂದರೆ ಆಗಲಿಲ್ಲ.

ಶಾಸಕರಾಗಲೀ ಅಥವಾ ಅವರ ಬೆಂಬಲಿಗರಾಗಲೀ ಘಟನೆ ಕುರಿತು ದೂರು ನೀಡಿಲ್ಲ. ಆದರೆ, ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿಗಳು ಯಾರು? ಯಾವ ಕಾರಣಕ್ಕೆ ಕತ್ತಿ ಹಿಡಿದಿದ್ದರು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೌಲ್‌ ಬಜಾರ್‌ ಠಾಣೆಯಲ್ಲಿ ಎಫ್‌ಐಆರ್‌ 73/23 ದಾಖಲಾಗಿದೆ. ಇನ್‌ಸ್ಪೆಕ್ಟರ್‌ ವಾಸು ಕುಮಾರ್ ತನಿಖೆ ನಡೆಸುತ್ತಿದ್ದಾರೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ನಾಗೇಂದ್ರ ಎರಡನೇ ಸಲ ಪುನರಾಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಎರಡು ಸಲ ಕೂಡ್ಲಿಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.