ADVERTISEMENT

ಫಾಸ್ಟ್‌ಟ್ರ್ಯಾಕ್ ಕೋರ್ಟ್ ರಚಿಸಿ: ವೈ.ಎಂ. ಸತೀಶ್

ಬಳ್ಳಾರಿ ಪಾಲಿಕೆಯಲ್ಲಿನ ಭ್ರಷ್ಟಾಚಾರ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:37 IST
Last Updated 28 ಜನವರಿ 2026, 7:37 IST
<div class="paragraphs"><p>ವೈ.ಎಂ. ಸತೀಶ್</p></div>

ವೈ.ಎಂ. ಸತೀಶ್

   

ಬಳ್ಳಾರಿ: ‘ಸರ್ಕಾರಿ ನೌಕರರ ಭ್ರಷ್ಟಾಚಾರ, ಹಣ ದುರುಪಯೋಗ ಸೇರಿ ವಿವಿಧ ಪ್ರಕರಣಗಳ ತ್ವರಿತ ವಿಚಾರಣೆಗೆ ಜಿಲ್ಲಾ ಮಟ್ಟದಲ್ಲಿ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಗಳನ್ನು ಪ್ರಾರಂಭಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹಿಸಿದ್ದಾರೆ.

ಪರಿಷತ್ ಕಲಾಪದಲ್ಲಿ ಮಂಗಳವಾರ ವಿಷಯವನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ಗಮನಕ್ಕೆ ತಂದ ಅವರು, ‘ಬಳ್ಳಾರಿ ಮಹಾನಗರ ಪಾಲಿಕೆ ಸೇರಿ ರಾಜ್ಯಾದ್ಯಂತ ಅಧಿಕಾರಿಗಳ ಭ್ರಷ್ಟಾಚಾರ ಹೆಚ್ಚಾಗಿದೆ. ಹಣದ ದುರುಪಯೋಗ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇಂಥಹಾ ಎಲ್ಲಾ ಪ್ರಕರಣಗಳ ವಿಚಾರಣೆಗೆ ಕರ್ನಾಟಕ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಫಾಸ್ಟ್‌ಟ್ರ್ಯಾಕ್ ಕೋರ್ಟ್‍ಗಳನ್ನು ಪ್ರಾರಂಭಿಸಬೇಕು’ ಎಂದರು.

ADVERTISEMENT

ಬಳ್ಳಾರಿ ಮಹಾನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ಆಗಿರುವ ಎನ್. ವೀರೇಶಕುಮಾರ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಮನೋಹರ, ದ್ವಿತೀಯ ದರ್ಜೆ ಸಹಾಯಕ ಕೆ. ದೊಡ್ಡಬಸಪ್ಪ ಅವರು ₹2.80 ಲಕ್ಷ ಪಾಲಿಕೆಯ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತ ಸಿಬ್ಬಂದಿಗಳನ್ನು ಅಮಾನತು ಮಾಡಿ, ಪುನಃ ಕೆಲಸಕ್ಕೆ ತೆಗೆದುಕೊಂಡಿರುವುದು ಸರಿಯಲ್ಲ. ಇಂಥಹವರನ್ನು ಸೇವೆಯಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಬಿ.ಎಸ್. ಸುರೇಶ್‌, ‘ನಿವೃತ್ತ ನ್ಯಾಯಾಧೀಶ ದಾವಣಗೆರೆಯ ಈಶ್ವರ್ ಜಂತ್ಲಿ ಅವರನ್ನು ವಿಚಾರಣಾ ಅಧಿಕಾರಿಗಳನ್ನಾಗಿ, ಹಿಂದಿನ ಸಾಂಖಿಕ ಅಧಿಕಾರಿಗಳಾದ ಸಹಾಯಕ ನಿರ್ದೇಶಕ ರಮೇಶ್ ಅವರನ್ನು ಮಂಡನಾ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ವಿಚಾರಣಾಧಿಕಾರಿ ಆರು ಸಭೆಗಳನ್ನು ನಡೆಸಿದ್ದು, ಅಂತಿಮ ವಿಚಾರಣಾ ವರದಿ ಇನ್ನೂ ಸ್ವೀಕೃತವಾಗಿಲ್ಲ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವ ಕಾರಣ ಆರೋಪಿತರನ್ನು ನಿಯಮಗಳ ಪ್ರಕಾರವೇ ಬೇರೆ ವೃತ್ತಕ್ಕೆ ವರ್ಗ ಮಾಡಲಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವೈ.ಎಂ. ಸತೀಶ್ ‘ಭ್ರಷ್ಟಾಚಾರದ ಬಿಸಿ ನನಗೇ ತಾಕಿದೆ. ಕಾರಣ ಭ್ರಷ್ಟಾಚಾರ, ಹಣ ದರುಪಯೋಗದಂಥಹಾ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯ ರಚನೆ ಅಗತ್ಯವಿದೆ. ಸರ್ಕಾರ ಚಿಂತಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.