ADVERTISEMENT

ಕಂಗೊಳಿಸುತ್ತಿವೆ ಮಲ್ಲಿಗೆ ನಾಡಿನ ಗ್ರಂಥಾಲಯ

ಗ್ರಾಮ ಪಂಚಾಯಿತಿಗಳ ನೆರವು; ಓದುಗ ಸ್ನೇಹಿ ವಾತಾವರಣ

ಕೆ.ಸೋಮಶೇಖರ
Published 2 ಏಪ್ರಿಲ್ 2021, 19:30 IST
Last Updated 2 ಏಪ್ರಿಲ್ 2021, 19:30 IST
ಹೂವಿನಹಡಗಲಿ ತಾಲ್ಲೂಕು ಇಟ್ಟಿಗಿ ಗ್ರಾಮದಲ್ಲಿ ನವೀಕರಣಗೊಂಡಿರುವ ಗ್ರಂಥಾಲಯ
ಹೂವಿನಹಡಗಲಿ ತಾಲ್ಲೂಕು ಇಟ್ಟಿಗಿ ಗ್ರಾಮದಲ್ಲಿ ನವೀಕರಣಗೊಂಡಿರುವ ಗ್ರಂಥಾಲಯ   

ಹೂವಿನಹಡಗಲಿ: ತಾಲ್ಲೂಕಿನ ಗ್ರಾಮೀಣ ಗ್ರಂಥಾಲಯಗಳು ಸುಣ್ಣ, ಬಣ್ಣಗಳಿಂದ ಸಿಂಗಾರಗೊಂಡು ಓದುಗರ ಆಕರ್ಷಣೆಯ ಕೇಂದ್ರಗಳಾಗಿವೆ. ಬಹುಕಾಲ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಜ್ಞಾನ ದೇಗುಲಗಳಿಗೆ ಈಗ ಹೊಸ ಹೊಳಪು ಬಂದಿದೆ.

ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳು ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಮಾದರಿಯಾಗಿ ರೂಪುಗೊಳ್ಳುತ್ತಿವೆ. ಕಟ್ಟಡಗಳನ್ನು ನವೀಕರಿಸಿ ಆಕರ್ಷಕ ಬಣ್ಣ ಬಳಿದಿರುವುದರಿಂದ ಗ್ರಂಥಾಲಯಗಳು ‘ಕಲರ್ ಪುಲ್’ ಆಗಿ ಕಂಗೊಳಿಸುತ್ತಿವೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರ ಕಾಳಜಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್.ಸೋಮಶೇಖರ ಅವರ ಇಚ್ಛಾಶಕ್ತಿಯಿಂದ ತಾಲ್ಲೂಕಿನಲ್ಲಿ ಗ್ರಂಥಾಲಯಗಳು ಮಾದರಿಯಾಗಿ ರೂಪುಗೊಳ್ಳುತ್ತಿವೆ.

ADVERTISEMENT

ಗ್ರಾಮ ಪಂಚಾಯಿತಿಗಳಲ್ಲಿನ 14ನೇ ಹಣಕಾಸು ಯೋಜನೆಯ ಉಳಿಕೆ ಅನುದಾನ ಮತ್ತು ಬ್ಯಾಂಕ್ ಖಾತೆಯಲ್ಲಿನ ಬಡ್ಡಿ ಹಣ ಬಳಸಿಕೊಂಡು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಮಾದರಿ ಗ್ರಂಥಾಲಯ, ಮಾದರಿ ಶಾಲೆ, ಮಾದರಿ ಅಂಗನವಾಡಿ ರೂಪಿಸುವ ಯೋಜನೆ ಸಿದ್ಧವಾಗಿದೆ.

ಗ್ರಂಥಾಲಯಗಳ ಬಾಹ್ಯ ಸೌಂದರ್ಯ ಮಾತ್ರ ಹೆಚ್ಚಿಸದೇ ಓದುಗರ ಜ್ಞಾನದ ಹರವು ಹೆಚ್ಚಿಸುವ ಕಡೆ ಗಮನಹರಿಸಲಾಗಿದೆ. ನಾಡಿನ ಸಾಹಿತಿಗಳ ಉಪಯುಕ್ತ ಕೃತಿಗಳು, ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶಿ ಪುಸ್ತಕಗಳನ್ನು ಖರೀದಿಸಲಾಗಿದೆ. ಅಚ್ಚುಕಟ್ಟಾದ ಪೀಠೋಪಕರಣ, ಶುದ್ಧ ಕುಡಿಯುವ ನೀರು, ಶೌಚಾಲಯ, ಯು.ಪಿ.ಎಸ್. ಸೇರಿದಂತೆ ಅಗತ್ಯ ಮೂಲಸೌಕರ್ಯದೊಂದಿಗೆ ಓದುಗ ಸ್ನೇಹಿ ವಾತಾವರಣ ಕಲ್ಪಿಸಲಾಗಿದೆ.

ಇಟ್ಟಿಗಿಯಲ್ಲಿ ಗ್ರಾಮ ಪಂಚಾಯಿತಿಯಿಂದ ₹8 ಲಕ್ಷ ವೆಚ್ಚದಲ್ಲಿ ಮಾದರಿ ಗ್ರಂಥಾಲಯ ರೂಪಿಸಲಾಗಿದೆ. ಇಲ್ಲಿ ಮಹಿಳೆ ಮತ್ತು ಮಕ್ಕಳ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಗೋಡೆಗಳಿಗೆ ಆಕರ್ಷಕವಾಗಿ ಪೇಂಟಿಂಗ್ ಮಾಡಲಾಗಿದೆ. ಸಾಧಕರ ಚಿತ್ರಗಳು, ನಾಣ್ಣುಡಿಗಳ ಗೋಡೆ ಬರಹಗಳು ಗಮನ ಸೆಳೆಯುತ್ತಿವೆ. ಮಳೆ ನೀರು ಕೊಯ್ಲು ವ್ಯವಸ್ಥೆಯೊಂದಿಗೆ ಜಲಸಾಕ್ಷರತೆಯನ್ನು ಬೋಧಿಸಲಾಗುತ್ತಿದೆ.

ಸ್ಥಳೀಯ ಗ್ರಂಥಪಾಲಕರು ಅಚ್ಚುಕಟ್ಟಾಗಿ ಗ್ರಂಥಾಲಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಮಾದರಿ ಗ್ರಂಥಾಲಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಪ್ರಶಂಸಿಸಿ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಹಾಜನದಹಳ್ಳಿ, ಹೊಳಗುಂದಿ, ಉತ್ತಂಗಿ, ಕೊಂಬಳಿ, ಹಿರೇಹಡಗಲಿ, ಮಾಗಳ, ಹೊಳಲು, ಮೈಲಾರ, ಉತ್ತಂಗಿ ಸೇರಿದಂತೆ 11 ಗ್ರಂಥಾಲಯಗಳು ಮಧುವಣಗಿತ್ತಿಯಂತೆ ಅಲಂಕಾರಗೊಂಡಿವೆ. ಇವುಗಳನ್ನು ಡಿಜಿಟಲ್ ಲೈಬ್ರರಿಯಾಗಿ ರೂಪಿಸುವ ತಯಾರಿ ನಡೆದಿದೆ. ಇಲ್ಲಿ ಓದುಗರಿಗೆ ಬೆರಳ ತುದಿಯಲ್ಲೇ ಎಲ್ಲ ಮಾಹಿತಿ ದೊರೆಯುವ ಡಿಜಿಟಲ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.