ADVERTISEMENT

ತೆಕ್ಕಲಕೋಟೆ: ರಾಸಾಯನಿಕ ಬಳಸದ ಪ್ರಯೋಗಶೀಲ ರೈತನ ಮಾದರಿ ಕೃಷಿ

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರೈತ ಈರಪ್ಪಯ್ಯ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:44 IST
Last Updated 8 ಆಗಸ್ಟ್ 2025, 5:44 IST
ತೆಕ್ಕಲಕೋಟೆ ಸಮೀಪದ ಪ್ರಗತಿಪರ ರೈತ ಈರಪ್ಪಯ್ಯ ಅವರ ಜಮೀನಿಗೆ ಸಿರುಗುಪ್ಪ ಕೃಷಿ ಸಹಾಯಕ ನಿರ್ದೇಶಕ ಸಿ. ಎ ಮಂಜುನಾಥ ರೆಡ್ಡಿ ಭೇಟಿ ನೀಡಿ ಸಾವಯವ ಕೃಷಿ ಕುರಿತು ಮಾಹಿತಿ ಪಡೆದುಕೊಂಡರು
ತೆಕ್ಕಲಕೋಟೆ ಸಮೀಪದ ಪ್ರಗತಿಪರ ರೈತ ಈರಪ್ಪಯ್ಯ ಅವರ ಜಮೀನಿಗೆ ಸಿರುಗುಪ್ಪ ಕೃಷಿ ಸಹಾಯಕ ನಿರ್ದೇಶಕ ಸಿ. ಎ ಮಂಜುನಾಥ ರೆಡ್ಡಿ ಭೇಟಿ ನೀಡಿ ಸಾವಯವ ಕೃಷಿ ಕುರಿತು ಮಾಹಿತಿ ಪಡೆದುಕೊಂಡರು   

ತೆಕ್ಕಲಕೋಟೆ: ಸಿರುಗುಪ್ಪ ತಾಲ್ಲೂಕಿನ ರೈತರು ಭತ್ತದ ನಾಟಿಗೆ ಅಣಿಯಾಗುವ ಮುಂಚೆಯೇ ರಸಗೊಬ್ಬರ ಅದರಲ್ಲೂ ಯೂರಿಯಾ, ಕಾಂಪ್ಲೆಕ್ಸ್ ಗಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ರಸಗೊಬ್ಬರ ಅಂಗಡಿಗಳಿಗೆ ಎಡತಾಕುವುದು ಸಾಮಾನ್ಯ.

ಇಂತಹ ದಿನಗಳಲ್ಲಿ ಭೈರಾಪುರ ಗ್ರಾಮದ ಪ್ರಗತಿಪರ ರೈತ ಬಿ.ಎಂ ಈರಪ್ಪಯ್ಯ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡು ಯಾವುದೇ ರಾಸಾಯನಿಕ ಬಳಸದೆ ಬಂಪರ್ ಬೆಳೆ ಪಡೆಯುತ್ತಿರುವುದು ಸುತ್ತಲಿನ ರೈತರ ಹುಬ್ಬೇರುವಂತೆ ಮಾಡಿದೆ.

ಯೂರಿಯಾಕ್ಕೆ ಪರ್ಯಾಯ ಡಯಂಚಾ ಬೆಳೆ: ಭೂಮಿಯಲ್ಲಿ ಬೆಳೆ ಹಾಕುವ 45 ದಿನ ಮುಂಚೆ ಡಯಂಚಾ ಎಂಬ ಹಸಿರೆಲೆ ಸಸ್ಯ ಬೆಳೆದು ಅದನ್ನು ರೋಟೋವೇಟರ್ ಮೂಲಕ ಭೂಮಿಯಲ್ಲಿ ತುಳಿಯುವುದರಿಂದ ವಾತಾವರಣದಲ್ಲಿರುವ ಶೇಕಡಾ 76 ಸಾರಜನಕ ಡಯಾಂಚ ಬೇರಿನ ಗಂಟುಗಳಲ್ಲಿ ಸೇರಿ ಅದನ್ನು ಭೂಮಿಗೆ ಕೊಡುತ್ತದೆ. ಇದರ ಜತೆಗೆ ಉಸುಗನ್ನು ಗೋಮೂತ್ರದಲ್ಲಿ 40 ದಿನ ನೆನೆಸಿ, ಎಕರೆಗೆ 20ಕೆಜಿ ಬಳಸಿದರೆ ಉತ್ತಮ ಸಾರಜನಕ ಸಿಗುತ್ತದೆ. ಇದರಿಂದಾಗಿ ಭೂಮಿಗೆ ರಾಸಾಯನಿಕ ಯೂರಿಯಾ ಅಗತ್ಯವಿಲ್ಲ ಎನ್ನುತ್ತಾರೆ ಈರಪ್ಪಯ್ಯ.

ADVERTISEMENT

ಪ್ರಯೋಗಶೀಲ ರೈತ : ಕಳೆದ 24 ವರ್ಷಗಳಿಂದ ರಾಸಾಯನಿಕ ಬಳಸದೆ ವಿವಿಧ ರೀತಿಯ ಭತ್ತ ಹಾಗೂ ಸಿರಿಧಾನ್ಯ ಬೆಳೆದು ಅದನ್ನು ಅಕ್ಕಿಯಾಗಿ ಮಾರ್ಪಡಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡುತ್ತಾರೆ.

ಯಾವುದೇ ಕ್ರಿಮಿನಾಶಕ ರಸಗೊಬ್ಬರ ಬಳಸದೇ ಸಾವಯವ ಜೀವಾಮೃತ, ಗೋಕೃಪಾಮೃತ ಹಾಗೂ ವಿವಿಧ 12 ಬಗೆಯ (ಬೇವು, ಹೊಂಗೆ, ಸೀತಾಫಲ, ಔಡಲ, ಎಕ್ಕೆ, ಬಿಲ್ಪತ್ರೆ ಮುಂತಾದ) ಎಲೆಗಳಿಗೆ ಬೆಳ್ಕೊಳ್ಳಿ ಹಾಗೂ ಹಸಿಮೆಣಸಿನಕಾಯಿಯ ಮಿಶ್ರಣದಿಂದ ತಯಾರಿಸಲಾಗುವ ‘ಬ್ರಹ್ಮಾಸ್ತ್ರ’ ಕೊಳೆತ ಹಣ್ಣುಗಳಿಂದ ತಯಾರಿಸಲಾದ ರಾಸಾಯನ ಮಿಶ್ರಣವನ್ನು ಕಾಲಕಾಲಕ್ಕೆ ಬಳಸುತ್ತಾರೆ. ಇದು ಸ್ವಾಭಾವಿಕವಾಗಿ 'ಎರೆಹುಳು' ಬೆಳವಣಿಗೆಗೆ ಸಹಾಯಕ' ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಭತ್ತದ ಜವಾರಿ ತಳಿಗಳಾದ ಕುಂಕುಮ ಶಾಲಿ, ನವರ, ಮೈಸೂರು ಮಲ್ಲಿಗೆ, ಸೋನಾ ಮಸೂರಿ ಹಾಗೂ ಆರ್.ಎನ್.ಆರ್ ತಳಿಯ ಭತ್ತ ಬೆಳೆಯುತ್ತಾರೆ.

‘ಸರ್ಕಾರ ಸಾವಯವ ಕೃಷಿಗೆ ಉತ್ತೇಜನ ನೀಡಬೇಕು. ಅಲ್ಲದೆ ಡಯಾಂಚ ಬೀಜ ಉಚಿತವಾಗಿ ಇಲ್ಲವೆ ಕಡಿಮೆ ದರದಲ್ಲಿ ನೀಡಿ ಹಸಿರೆಲೆ ಗೊಬ್ಬರ ಬಳಸಲು ರೈತರಿಗೆ ಉತ್ತೇಜನ ನೀಡಬೇಕು. ಇದರಿಂದ ಯೂರಿಯಾ ಮುಂತಾದ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಆಗುತ್ತದೆ’ ಎಂದು ಬಿ.ಎಂ. ಈರಪ್ಪಯ್ಯ ಹೇಳುತ್ತಾರೆ.

ರೈತಾಪಿ ಕುಟುಂಬ: ಬಿ.ಎ, ಬಿಇಡಿ., ಎಲ್. ಎಲ್. ಬಿ ಪದವೀಧರರಾದ ಈರಪ್ಪಯ್ಯ ಜೊತೆಗೆ ಇವರ ಪತ್ನಿ ಬಿ.ಎಂ.ಶೈಲಾ ಹಾಗೂ ಹಿರಿಯ ಪುತ್ರ ನಂದೀಶ್ ಅವರೂ ಕೃಷಿಕಾಯಕದಲ್ಲಿ ಕೈಜೋಡಿಸಿದ್ದಾರೆ.

ಸಾವಯವ ಕೃಷಿಕ ಈರಪ್ಪಯ್ಯ ತಾವು ಬೆಳೆದ ಡಯಂಚಾ ಹಸಿರೆಲೆ ಗೊಬ್ಬರವನ್ನು ಭೂಮಿಗೆ ಸೇರಿಸುತ್ತಿರುವುದು
ಈರಪ್ಪಯ್ಯ ಸಂಪೂರ್ಣವಾಗಿ ಸಾವಯವ ಪದ್ದತಿ ಅನುಸರಿಸುವ ಮೂಲಕ ಭೂಮಿಯನ್ನು ಆರೋಗ್ಯ ಪೂರ್ಣವಾಗಿಸಿದ್ದು ಸತ್ವಯುತ ಬೆಳೆ ಪಡೆಯುತ್ತಿದ್ದಾರೆ 
ಸಿ. ಎ ಮಂಜುನಾಥ ರೆಡ್ಡಿ ಕೃಷಿ ಸಹಾಯಕ ನಿರ್ದೇಶಕ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.