ADVERTISEMENT

ಮೋದಿ ಹಿಂದುಳಿದ ವರ್ಗದ ನಿಜವಾದ ನಾಯಕ: ಯಮುನೇಶ್‌

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 8:16 IST
Last Updated 17 ಏಪ್ರಿಲ್ 2019, 8:16 IST
ವೈ. ಯಮುನೇಶ್‌
ವೈ. ಯಮುನೇಶ್‌   

ಹೊಸಪೇಟೆ: ‘ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಹಿಂದುಳಿದ ವರ್ಗಗಳ ನಿಜವಾದ ನಾಯಕ’ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷ ವೈ. ಯಮುನೇಶ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಟ್ಟರು. ಹಿಂದುಳಿದ ವರ್ಗದವರಿಗೆ ಮೀಸಲು ಸೌಲಭ್ಯ ಕಲ್ಪಿಸಬೇಕೆಂಬ ದಶಕಗಳ ಬೇಡಿಕೆಯನ್ನು ಮೋದಿಯವರು ಈಡೇರಿಸಿದ್ದಾರೆ’ ಎಂದರು.

‘ಮೋದಿಯವರು ಇದುವರೆಗೆ ಒಮ್ಮೆಯೂ ನಾನು ಹಿಂದುಳಿದ ವರ್ಗದ ನಾಯಕ ಎಂದು ಹೇಳಿಕೊಂಡಿಲ್ಲ. ಆದರೆ, ಆ ವರ್ಗಕ್ಕೆ ಮೀಸಲು ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಮೇಲ್ಜಾತಿಯ ಬಡವರಿಗೆ ಶೇ 10ರಷ್ಟು ಮೀಸಲು ಕಲ್ಪಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ. ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳಿಗೆ ಏನೂ ಕೆಲಸ ಮಾಡಲಿಲ್ಲ. ಆದರೆ, ತಾನು ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಈ ವಿಷಯದಲ್ಲಿ ರಾಜ್ಯ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

‘ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ಕಲ್ಪಿಸುವ ತಿದ್ದುಪಡಿ ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವುದು ಮೋದಿಯವರ ಆಡಳಿತದ ಅವಧಿಯಲ್ಲಿ. ಇದರಿಂದಾಗಿ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕಡ್ಡಾಯವಾಗಿ ಶೇ 27ರಷ್ಟು ಮೀಸಲಾತಿ ಸೌಲಭ್ಯ ಪಡೆಯಲು ಆ ವರ್ಗಗಳಿಗೆ ಸಾಧ್ಯವಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಆಯೋಗಕ್ಕೆ ನೀಡಿದ್ದಾರೆ. ಇದು ಮೋದಿಯವರ ದಿಟ್ಟ ಹಾಗೂ ಐತಿಹಾಸಿಕ ನಿರ್ಧಾರದಿಂದ ಸಾಧ್ಯವಾಗಿದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘ಮೇಲ್ಜಾತಿಯ ಬಡವರು, ಹಿಂದುಳಿದ ವರ್ಗದವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ, ರಾಷ್ಟ್ರೀಯ ಭಾವೈಕ್ಯತೆ–ಸಾಮರಸ್ಯಕ್ಕೆ ಮತ್ತಷ್ಟು ಬಲವನ್ನು ಮೋದಿಯವರು ತಂದುಕೊಟ್ಟಿದ್ದಾರೆ. ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು. ಅದನ್ನು ಜನ ಸಾಧ್ಯವಾಗಿಸುತ್ತಾರೆ ಎಂಬ ದೊಡ್ಡ ನಂಬಿಕೆ ಇದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಬಿಸಾಟಿ ಸತ್ಯನಾರಾಯಣ, ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ಮಾಧ್ಯಮ ವಕ್ತಾರ ಶಂಕರ್‌ ಮೇಟಿ, ಮುಖಂಡರಾದ ಚಿದಾನಂದ, ಸತ್ಯನಾರಾಯಣ, ವೀರಾಂಜನೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.