ADVERTISEMENT

ವಿವಿಧೆಡೆ ಉಪವಿಭಾಗಾಧಿಕಾರಿ ಪರಿಶೀಲನೆ

ಕಾಂಗ್ರೆಸ್‌ ಕಾರ್ಯಕರ್ತರಿಂದ ಹಣ ಹಂಚಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 12:50 IST
Last Updated 2 ನವೆಂಬರ್ 2018, 12:50 IST

ಹೊಸಪೇಟೆ: ನಗರದ ರಾಣಿಪೇಟೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದ ಕಾರಣಕ್ಕಾಗಿ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಅವರು ಶುಕ್ರವಾರ ಸಂಜೆ ಅಲ್ಲಿಗೆ ಹಠಾತ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಣಿಪೇಟೆ, ಕೌಲ್‌ಪೇಟೆ, ಹರಿಜನಕೇರಿ, ವರಕೇರಿ, ಚಪ್ಪರದಹಳ್ಳಿ, ಚಿತ್ರಕೇರಿ ಸೇರಿದಂತೆ ಹಲವೆಡೆ ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಯೊಂದಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಕುರಿತು ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿದರು. ‘ಯಾರಾದರೂ ಹಣ ಹಂಚುತ್ತಿದ್ದರೆ ತಕ್ಷಣವೇ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ಕೊಡಬೇಕು’ ಎಂದು ತಿಳಿಸಿದರು.

‘ರಾಣಿಪೇಟೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಣ ಹಂಚುತ್ತಿರುವ ಮಾಹಿತಿ ಲಭ್ಯವಾಯಿತು. ತಕ್ಷಣವೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದೆವು. ಆದರೆ, ಎಲ್ಲೂ ಹಣ ಹಂಚಿರುವ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಸ್ಥಳೀಯ ಜನರಿಗೂ ವಿಚಾರಿಸಿದೆವು. ಆದರೆ, ಯಾರೂ ಬಾಯಿ ಬಿಟ್ಟಿಲ್ಲ’ ಎಂದು ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಸಂಜೆಯಿಂದ ರಾತ್ರಿ ವರೆಗೆ ಹಣ ಹಂಚುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ನಮ್ಮ ಸಿಬ್ಬಂದಿ ಎಲ್ಲೆಡೆ ನಿಗಾ ವಹಿಸಿದ್ದಾರೆ. ರಾತ್ರಿಯಿಡೀ ಎಲ್ಲ ಕಡೆ ಓಡಾಡಿ ಪರಿಶೀಲನೆ ನಡೆಸುವರು. ಯಾರಾದರೂ ಚುನಾವಣಾ ಅಕ್ರಮದಲ್ಲಿ ತೊಡಗಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ಸುದ್ದಿ ವಾಹಿನಿಯೊಂದು ಹಣ ಹಂಚುವ ಸುದ್ದಿ ಪ್ರಸಾರ ಮಾಡಿದೆ. ಅದರಲ್ಲಿ ಪ್ರತಿ ಮತಕ್ಕೆ ನೂರು ರೂಪಾಯಿ ಹಂಚುತ್ತಿರುವುದು ಗೊತ್ತಾಗುತ್ತದೆ. ಅದನ್ನು ಪರಿಶೀಲಿಸಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.