ಮಳೆ
ಬಳ್ಳಾರಿ: ರಾಜ್ಯದಲ್ಲಿ ಜೂನ್ ತಿಂಗಳಲ್ಲಿ 16 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ ಎಂಬುದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂಕಿ ಅಂಶಗಳಿಂದ ಗೊತ್ತಾಗಿದೆ.
ರಾಜ್ಯದ ಜೂನ್ ತಿಂಗಳ ವಾಡಿಕೆ ಮಳೆ 19.94 ಸೆಂ.ಮೀ. ಆದರೆ, 20.33 ಸೆಂ.ಮೀ ಮಳೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೆ ಮತ್ತೆ ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆ ಸುರಿದಿದೆ.
ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಜೂನ್ 30ರ ವೇಳೆಗೆ ಸರಾಸರಿ 6.55 ಸೆಂ.ಮೀ ಮಳೆ ಆಗಬೇಕಿತ್ತು. ಆದರೆ, 5 ಸೆಂ.ಮೀ ಸುರಿದಿದೆ. ಕೋಲಾರ, ತುಮಕೂರು, ಚಾಮರಾಜನಗರ ಜಿಲ್ಲೆಗಳು ಮಳೆ ಕೊರತೆ ಎದುರಿಸಿವೆ. ದಾವಣಗೆರೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ.
ಉತ್ತರ ಒಳನಾಡಿನ 13 ಜಿಲ್ಲೆಗಳಲ್ಲಿ ಸರಾಸರಿ 10.30 ಸೆಂ.ಮೀ ಮಳೆಯಾಗಬೇಕಿತ್ತು. 9.66 ಸೆಂ.ಮೀ ಮಳೆಯಾಗಿದೆ. ಬಳ್ಳಾರಿ, ಬೀದರ್, ಕೊಪ್ಪಳ, ಯಾದಗಿರಿಯಲ್ಲಿ ವಾಡಿಕೆಗಿಂತ ಅರ್ಧದಷ್ಟು ಮಳೆಯಾಗಿದೆ. ಬೆಳಗಾವಿ, ಧಾರವಾಡ, ವಿಜಯನಗರ ಮತ್ತು ಹಾವೇರಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ.
ಮಲೆನಾಡಿನ 4 ಜಿಲ್ಲೆಗಳಲ್ಲಿ ಸರಾಸರಿ 36.30 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, 41.51 ಸೆಂ.ಮೀ ಮಳೆ ಸುರಿದಿದೆ. ಕರಾವಳಿಯಲ್ಲಿ 88.14 ಸೆಂ.ಮೀ ಮಳೆ ಸುರಿದಿದೆ.
ಮೇ ತಿಂಗಳಲ್ಲಿ ಸುರಿದ ಮಳೆಯಿಂದ ಬೇಗನೇ ಬಿತ್ತನೆಯಾಗಿತ್ತು. ಆದರೆ, ಜೂನ್ ಮಧ್ಯದಿಂದ ಮಳೆ ಕಡಿಮೆಯಾಗಿದೆ. ಬೀಜ ಮೊಳಕೆಯುವ ಈ ಹಂತದಲ್ಲಿ ಮಳೆಯ ಅಗತ್ಯವಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಶೇ 53ರಷ್ಟು ಬಿತ್ತನೆ ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳು ಸೇರಿ ರಾಜ್ಯದ ಒಟ್ಟು 82.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬಿತ್ತನೆ ಗುರಿಯಿದೆ. ಈವರೆಗೆ 43.55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ತಕ್ಷಣಕ್ಕೆ ಮಳೆ ಬೇಕೇ ಬೇಕು
ಜೂನ್ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇರುವುದು ಕೃಷಿಯ ಮೇಲೆ ಪರಿಣಾಮ ಬೀರಿದೆ. ಮೇನಲ್ಲಿ ಸುರಿದ ಮಳೆ ಕಂಡು ಒಂದಷ್ಟು ಭಾಗದಲ್ಲಿ ಬೇಗನೆ ಬಿತ್ತನೆಯಾಗಿತ್ತು. ಜೂನ್ ಆರಂಭಿಕ ವಾರದಲ್ಲಿ ಮಳೆಯಾಗಿದ್ದರಿಂದ ಇನ್ನೂ ಒಂದಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆ ಬಳಿಕ ಮಳೆ ಕುಂಠಿತವಾಗಿದ್ದು, ಬಿತ್ತನೆ ವೇಗ ಕಡಿಮೆಯಾಯಿತು. ಈಗಾಗಲೇ ಬಿತ್ತನೆಗೊಂಡಿರುವ ಪ್ರದೇಶಕ್ಕೆ ತಕ್ಷಣಕ್ಕೆ ಮಳೆ ಅಗತ್ಯವಿದೆ. ಇಲ್ಲವಾದರೆ ಹಾನಿಯಾಗಬಹುದು. ಉಳಿದ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದರೂ ಮಳೆ ಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಬಿತ್ತನೆಯಾದ ಮೂರು ವಾರ ಸತತ ಮಳೆಯಾಗದೇ ಹೋದರೆ ಸಮಸ್ಯೆಯಾಗಲಿದೆ. ಜಲಾಶಯಗಳಲ್ಲಿ ನೀರು ಇರುವುದರಿಂದ ನೀರಾವರಿ ಪ್ರದೇಶಕ್ಕೆ ತೊಂದರೆಯಾಗದು. ಆದರೆ, ಮುಂದಿನ ದಿನಗಳಲ್ಲಿ ಮಳೆಯಾಗದೇ ಹೋದರೆ, ಮಳೆಯಾಶ್ರಿತ ಪ್ರದೇಶದಲ್ಲಿ ನಷ್ಟವಾಗಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.