ADVERTISEMENT

‘ವೆಂಟಿಲೇಟರ್‌ ಕೊರತೆಯಿಂದ ಹೆಚ್ಚಿನ ಸಾವು’

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 8:52 IST
Last Updated 22 ಜುಲೈ 2020, 8:52 IST

ಹೊಸಪೇಟೆ: ‘ಬಳ್ಳಾರಿ ಜಿಲ್ಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದ ಕೋವಿಡ್‌ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಆರೋಪಿಸಿದರು.

‘ಬಳ್ಳಾರಿಯ ಕೋವಿಡ್‌ ಆಸ್ಪತ್ರೆಯಲ್ಲಿ 25 ಜನಕ್ಕೆ ಸಾಕಾಗುವಷ್ಟು ವೆಂಟಿಲೇಟರ್‌ಗಳಿವೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉಸಿರಾಟದಿಂದ ತೊಂದರೆ ಎದುರಿಸುತ್ತಿರುವವರು ಆಸ್ಪತ್ರೆಗೆ ದಾಖಲಾದರೆ ವೆಂಟಿಲೇಟರ್‌ ಸಿಗುತ್ತಿಲ್ಲ. ಅದಕ್ಕೆ ಇತ್ತೀಚಿನ ತಾಜಾ ನಿದರ್ಶನ ನಗರದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆ ವ್ಯಕ್ತಿ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾದರೂ ರಾತ್ರಿ ವರೆಗೆ ವೆಂಟಿಲೇಟರ್‌ ಸೌಲಭ್ಯ ಸಿಕ್ಕಿರಲಿಲ್ಲ. ಹೀಗಾಗಿ ಅವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಾವು ಇದರಿಂದಲೇ ಆಗುತ್ತಿವೆ. ಆದರೂ ಜಿಲ್ಲಾಡಳಿತ ಏನೂ ಮಾಡುತ್ತಿಲ್ಲ’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕೊರೊನಾ ನಿಭಾಯಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೋವಿಡ್‌ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವವರಿಂದ ಹೆಚ್ಚಿನ ಹಣ ಸುಲಿಯಲಾಗುತ್ತಿದೆ. ಒಬ್ಬ ವ್ಯಕ್ತಿಯ ಚಿಕಿತ್ಸೆಗೆ ಎಷ್ಟು ಹಣ ಖರ್ಚಾಗುತ್ತಿದೆ ಎನ್ನುವುದನ್ನು ಜಿಲ್ಲಾಡಳಿತ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ. ನಿತ್ಯ ಸರಾಸರಿ 100 ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕನಿಷ್ಠ ಹದಿನೈದು ದಿನಗಳ ವರೆಗೆ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಬೇಕೆಂದು ಈ ಹಿಂದೆಯೇ ಜಿಲ್ಲಾಡಳಿತವನ್ನು ಆಗ್ರಹಿಸಿದ್ದೆ. ಆದರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈಗ ಸ್ವತಃ ಮುಖ್ಯಮಂತ್ರಿಯೇ ಎಲ್ಲೂ ಲಾಕ್‌ ಡೌನ್‌ ಮಾಡುವುದಿಲ್ಲ ಎಂದು ತಿಳಿಸಿರುವುದರಿಂದ ಜಿಲ್ಲಾಡಳಿತಕ್ಕೆ ಏನೂ ಮಾಡಲು ಆಗುವುದಿಲ್ಲ. ಮುನ್ನೆಚ್ಚರಿಕೆ ವಹಿಸಿದ್ದರೆ ಇಷ್ಟೊಂದು ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು

‘ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದರೆ ಅಂತಹವರಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಲಾಗುತ್ತಿದೆ. ಆದರೆ, ಪಾಸಿಟಿವ್‌ ಬಂದವರಿಗೆ ಯಾವುದೇ ರೀತಿಯ ಮಾಹಿತಿ ನೀಡುತ್ತಿಲ್ಲ. ನೇರವಾಗಿ ಆಂಬುಲೆನ್ಸ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಬಂದು ಕರೆದೊಯ್ಯುತ್ತಿದ್ದಾರೆ. ಇದರಿಂದ ಕೋವಿಡ್‌ ರೋಗಿ ಹಾಗೂ ಆತನ ಮನೆಯ ಸುತ್ತಮುತ್ತಲಿನವರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.