ಸಿರುಗುಪ್ಪ: ಜೇರ್ವಗಿಯಿಂದ ಚಾಮರಾಜನಗರದವರೆಗೆ ಸಿರುಗುಪ್ಪ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ಪಟ್ಟಣ ಪ್ರದೇಶದಲ್ಲಿ 6ಕಿ.ಮೀ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ವೈಯಕ್ತಿಕ ₹10 ಲಕ್ಷ ಹಣದಿಂದ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ತಿಳಿಸಿರುವುದಾಗಿ ಕೊಪ್ಪಳ ಸಂಸದ ಕೆ.ರಾಜಶೇಖರ್ ಬಸವರಾಜ ಹಿಟ್ನಾಳ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳೊಂದಿಗೆ ಹಾಗೂ ಗುತ್ತಿಗೆದಾರೊಂದಿಗೆ ರಸ್ತೆ ಪರಿಶೀಲಿಸಿ, ನಂತರ ಚರ್ಚಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ನಗರದ 6ಕಿ.ಮೀ. ವ್ಯಾಪ್ತಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವರ ಅನುಮೋದನೆ ಕಳಿಸಲಾಗಿದ್ದು, ಅಲ್ಲಿಯವರೆಗೆ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಕೈಗೊಂಡು ಸುಗಮ ಸಂಚಾರಕ್ಕೆ ಅನುಮಾಡಿಕೊಡಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ’ ಎಂದು ಹೇಳಿದರು.
ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ಸಂಸದರು ತರಾಟೆಗೆ ತೆಗೆದುಕೊಂಡರು. ರಸ್ತೆ ವಿಭಾಜಕದಿಂದ 7X7 ಮೀಟರ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸೂಚಿಸಿದರು. ಸದ್ಯ ರಸ್ತೆ ಅಗಲೀಕರಣ ನಿಲ್ಲಿಸಲಾಗಿದೆ. ಇನ್ನೂ ಎರಡು ತಿಂಗಳಲ್ಲಿ ರಸ್ತೆಯ ಕಾಮಗಾರಿಯನ್ನು ಮುಗಿಸುವಂತೆ ಗುತ್ತಿಗೆದಾರರಿಗೆ ಎಚ್ಚರಿಸಿದರು.
‘2 ವರ್ಷದಿಂದ 6.48ಕಿ.ಮೀ ರಸ್ತೆ ಕಾಮಗಾರಿ ಪ್ರಾರಂಭಿಸದೇ ಇರುವುದರಿಂದ ಬಹಳಷ್ಟು ಗುಂಡಿಗಳು ಮತ್ತು ತೆಗ್ಗು ಪ್ರದೇಶಗಳು ಉಂಟಾಗಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಮಳೆಯಿಂದಾಗಿ ಅನಾಹುತಗಳ ಸಂಖ್ಯೆ ಹೆಚ್ಚಿದೆ. ನಗರದ ಪರಿಮಿತಿಯಲ್ಲಿನ ಗುಂಡಿಗಳನ್ನು ಮುಚ್ಚುವ ಕ್ರಮವನ್ನು ಕೈಗೊಳ್ಳಲಾಗುವುದು’ ಎಂದರು.
ಸಂಸದ ಕೆ.ರಾಜಶೇಖರ್ ಬಸವರಾಜ ಹಿಟ್ನಾಳ್ ಅವರು ತನ್ನ ವೈಯಕ್ತಿಕ ₹10 ಲಕ್ಷವನ್ನು ಸುದ್ದಿಗೋಷ್ಠಿಯ ನಂತರ ಗುತ್ತಿಗೆದಾರನಿಗೆ ನೀಡಿ ಕೆಲಸ ಆರಂಭಿಸಲು ಸೂಚಿಸಿದರು.
ರಸ್ತೆ ವೀಕ್ಷಿಸುವಾಗ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮ ಮತ್ತು ಸಿರುಗುಪ್ಪ ಪಟ್ಟಣದ ಸಾರ್ವಜನಿಕರು ಸಂಸದರನ್ನು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ರಸ್ತೆ ಸರಿಪಡಿಸುವಂತೆ ಅಕ್ರೊಶ ವ್ಯಕ್ತಪಡಿಸಿದರು.
ವಾಲ್ಮೀಕಿ ವಿದ್ಯಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ, ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಮಾರುತಿ ವರಪ್ರಸಾದ್ ರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಮ್ಮೂರು ಸೋಮಪ್ಪ, ಸರ್ವಧರ್ಮೀಗಳ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಕೊಡ್ಲೆಮಲ್ಲಿಕಾರ್ಜುನ, ಮುಖಂಡರಾದ ವೆಂಕಟೇಶ, ಗಣೇಶ, ಚಿಟಿಗಿ ಹುಸೇನಿ, ಬಾಲಪ್ಪ ಮಲ್ಲಿಕಾರ್ಜುನ, ನರೇಂದ್ರಸಿಂಹ, ಸಿದ್ದರಾಮಯ್ಯ ಸ್ವಾಮಿ, ಬಂದೇ ನವಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.