ಬಳ್ಳಾರಿ: ‘ಅಂತರರಾಷ್ಟ್ರೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ದಿನಾಚರಣೆ’ ಅಂಗವಾಗಿ, ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಬಳ್ಳಾರಿ ಶಾಖೆಯ ವತಿಯಿಂದ ನಗರದ ಬಸವ ಭವನದಲ್ಲಿ ಶುಕ್ರವಾರ ಎಂಎಸ್‌ಎಂಇ ಮಹೋತ್ಸವ ನಡೆಯಿತು.
ಸಮಾರಂಭದಲ್ಲಿ ಉದ್ದಿಮೆದಾರರಿಗೆ, ರೈತರಿಗೆ ಒಂದು ದಿನದ ವಿಶೇಷ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ.ಹನುಮಂತಪ್ಪ ‘ರೈತರು ನೆಮ್ಮದಿಯಾಗಿದ್ದು, ಉತ್ತಮ ಬೆಳೆ ಬೆಳೆದಲ್ಲಿ ರಾಷ್ಟ್ರವೂ ನೆಮ್ಮದಿಯಾಗಿರುತ್ತದೆ. ರೈತರು ಸಮಪರ್ಕವಾಗಿ ಬೆಳೆ ಬೆಳೆದು, ದೇಶದ ಜನತೆಗೆ ಅನ್ನ ನೀಡುವುದರ ಜತೆಜತೆಗೇ ವಿದೇಶಗಳಿಗೆ ಆಹಾರ ಉತ್ಪನ್ನಗಳನ್ನು ಕಳಿಸುವ ಶಕ್ತಿ ಹೊಂದಿದ್ದಾರೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ, ಜಿಡಿಪಿ ಬೆಳವಣಿಗೆಯಲ್ಲಿ ಕೃಷಿಗೆ ಪೂರಕವಾಗಿರುವ ಎಂಎಸ್‌ಎಂಇಗಳ ಪಾತ್ರ ಮಹತ್ವದ್ದು’ ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಶ್ರೀಕಾಂತ್ ಎಂ.ಬಂಡಿವಾಡ ಮಾತನಾಡಿ, ಕೃಷಿ ವಲಯ ಹಾಗೂ ಎಂಎಸ್‌ಎಂಇ ಕ್ಷೇತ್ರ ಸಬಲೀಕರಣವಾದಲ್ಲಿ ದೇಶದ ಆರ್ಥಿಕ ಅಭಿವೃಧ್ಧಿಯೂ ಆಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂಎಸ್‌ಎಂಇಗಳ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಎಂಎಸ್‌ಎಂಇಗಳ ಪಾತ್ರ ಅನನ್ಯ. ಕೃಷಿ ವಲಯದ ಎಂಎಸ್‌ಎಂಇಗಳ ಬೆಳವಣಿಗೆಯಾದಲ್ಲಿ ದೇಶದಲ್ಲಿ ನಿರುದ್ಯೋಗದ ಪ್ರಮಾಣವೂ ಕಡಿಮೆಯಾಗುತ್ತದೆ. ಆರ್ಥಿಕ ಪ್ರಗತಿಯು ಹೆಚ್ಚುತ್ತದೆ’ ಎಂದರು.
ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನಾರಾಜ್ ಮಾತನಾಡಿ, ‘ಭಾರತವು ಈ ವರ್ಷಾಂತ್ಯಕ್ಕೆ ವಿಶ್ವದ ನಾಲ್ಕನೇ ಹಾಗೂ ಮುಂದಿನ ವರ್ಷಗಳಲ್ಲಿ 3ನೇ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎನ್ನುವ ನಿರೀಕ್ಷೆ ಇದೆ. ಜಿಡಿಪಿ ಆಧಾರದಲ್ಲಿ ಇದನ್ನು ಹೇಳಲಾಗುತ್ತಿದೆ. ಭಾರತದ ಜಿಡಿಪಿಯು ಶೇ.6.3ರಷ್ಟಿದೆ. ಆರ್ಥಿಕ ಸಬಲೀಕರಣದಲ್ಲಿ ಜಿಡಿಪಿಯು ಮಹತ್ವದ ಪಾತ್ರ ವಹಿಸುತ್ತದೆ. ದೇಶದ ಜಿಡಿಪಿ ಶೇ.8ಕ್ಕೆ ಜಿಗಿದಲ್ಲಿ ಉದ್ಯೋಗವಕಾಶ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಎಂಎಸ್‌ಎಂಇಗಳ ಪಾತ್ರ ಪ್ರಮುಖವಾಗಲಿದೆ’ ಎಂದರು.
ಲೆಕ್ಕ ಪರಿಶೋಧಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಗಜರಾಜ್ ಸ್ವಾಗತಿಸಿದರು. ಲೆಕ್ಕಪರಿಶೋಧ ಮಧುಕರ್ ಎನ್.ಹಿರೇಗಂಗೆ, ಬಿ.ಇ.ಪಂಪಣ್ಣ, ಪ್ರಮೋದ್ ಹೆಗಡೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಇದ್ದರು.
ಸಂಪತ್ತಿನ ಅಸಮಾನತೆ
ಈ ದೇಶದ ಕೇವಲ ಶೇಕಡಾ 1ರಷ್ಟು ಜನಸಂಖ್ಯೆ ಕೈಯಲ್ಲಿ ನಮ್ಮ ದೇಶದ ಶೇ. 40ಕ್ಕೂ ಹೆಚ್ಚಿನ ಸಂಪತ್ತು ಇದೆ. ಅಂತೆಯೇ ದೇಶದ ಶೇ.50ಕ್ಕೂ ಹೆಚ್ಚು ಜನರು ಕೇವಲ ಶೇ.3ರಷ್ಟು ಸಂಪತ್ತು ಹೊಂದಿದ್ದಾರೆ. 2022ರ ಅಂಕಿ-ಅಂಶಗಳು ಇದನ್ನು ಹೇಳುತ್ತಿವೆ. ಆದಾಯ ಮತ್ತು ಆರ್ಥಿಕತೆ ಸರಿಯಾಗಿ ಹಂಚಿಕೆಯಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದು ಹಿರಿಯ ಲೆಕ್ಕ ಪರಿಶೋಧಕ ಪನ್ನಾರಾಜ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.