ADVERTISEMENT

ವ್ಯಾಜ್ಯ ಸುಖಾಂತ್ಯಕ್ಕೆ ಲೋಕ ಅದಾಲತ್‌: ನ್ಯಾಯಾಧೀಶೆ ಶಾಂತಿ

ರಾಜೀಗಳಿಂದ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ನ್ಯಾಯಾಧೀಶೆ ಶಾಂತಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:07 IST
Last Updated 11 ಡಿಸೆಂಬರ್ 2025, 6:07 IST
ಕೆ.ಜಿ.ಶಾಂತಿ
ಕೆ.ಜಿ.ಶಾಂತಿ   

ಬಳ್ಳಾರಿ: ‘ವಾಜ್ಯಗಳನ್ನು ಪರಿಹರಿಸಿಕೊಳ್ಳಲು ರಾಜೀ ಸಂದಾನ ಉತ್ತಮ ಮಾರ್ಗ. ಡಿ. 13ರಂದು ನಡೆಯಲಿರುವ ‘ರಾಷ್ಟ್ರೀಯ ಲೋಕ ಅದಾಲತ್‌’ ಅನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ.ಶಾಂತಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌‘2025ರ ಕೊನೇ ಲೋಕ ಅದಾಲತ್‌ ಇದಾಗಿದೆ. ಹಿಂದಿನ ಅದಾಲತ್‌ನಲ್ಲಿ ಉತ್ತಮ ಸ್ಪಂದನೆ ಸಿಕ್ಕಿತ್ತು. ಈ ಬಾರಿ 35 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ 8,961 ಪ್ರಕರಣಗಳನ್ನು ರಾಜೀಗೆ ಗುರುತಿಸಲಾಗಿದೆ. 4,378 ಪ್ರಕರಣಗಳು ರಾಜೀ ಹಂತದಲ್ಲಿದ್ದು, ಇನ್ನೇನು ಇತ್ಯರ್ಥಗೊಳ್ಳಲಿವೆ. 7,859 ದಾವೆ ಪೂರ್ವ ವ್ಯಾಜ್ಯಗಳಿವೆ. ಇವೆಲ್ಲವನ್ನೂ ಶನಿವಾರ ನಡೆಯಲಿರುವ ಲೋಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಲು ಅವಕಾಶವಿದೆ’ ಎಂದು ತಿಳಿಸಿದರು. 

‘ಸದ್ಯದ ಪರಿಸ್ಥಿತಿಯಲ್ಲಿ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚು ಸಮಯಬೇಕಾಗುತ್ತದೆ. ರಾಜೀ ಮೂಲಕ ಪರಿಹರಿಸಿಕೊಳ್ಳುವುದರಿಂದ ಹಲವು ಲಾಭಗಳಿವೆ. ನ್ಯಾಯಾಲಯಕ್ಕೆ ಪಾವತಿಸುವ ಶುಲ್ಕ ಮರುಪಾವತಿಯಾಗುತ್ತದೆ. ವಿವಾದ ಅಂತ್ಯಕಾಣುತ್ತದೆ. ಮೇಲ್ಮನವಿಗೆ ಹೋಗುವ ಅವಕಾಶವಿರುವುದಿಲ್ಲ. ಸಮಯ ಉಳಿಯುತ್ತದೆ, ನೆಮ್ಮದಿ ಸಿಗುತ್ತದೆ. ಖರ್ಚು ಕಡಿಮೆಯಾಗುತ್ತದೆ. ಹೀಗಾಗಿ ವ್ಯಾಜ್ಯ ಸುಖಾಂತ್ಯಕ್ಕೆ ಲೋಕ ಅದಾಲತ್‌ ಸಹಕಾರಿ’ ಎಂದು ಶಾಂತಿ ಹೇಳಿದರು.  

ADVERTISEMENT

‘ಲೋಕ ಅದಾಲತ್‌ಗಾಗಿ ಜಿಲ್ಲಾ ನ್ಯಾಯಾಲಯದಲ್ಲಿ 15 ಪೀಠಗಳನ್ನು ರಚಿಸಲಾಗಿದೆ. ಸದ್ಯ ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ನ್ಯಾಯಾಲಯ ಅಸ್ತಿತ್ವಕ್ಕೆ ಬಂದಿದೆ. ಆ ಜಿಲ್ಲೆಗೆ ಸಂಬಂಧಿಸಿದ ಪ್ರಕರಣಗಳು ಪ್ರತ್ಯೇಕವಾಗಿಯೇ ಇತ್ಯರ್ಥಗೊಳ್ಳಲಿವೆ’ ಎಂದೂ ಅವರು ತಿಳಿಸಿದರು. 

ಶೇ 50ರ ರಿಯಾಯಿತಿ: ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ಮತ್ತು ಸಾರಿಗೆ ಇಲಾಖೆಯಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಸರ್ಕಾರ ಲೋಕ್-ಅದಾಲತ್ ಪ್ರಯುಕ್ತ ಶೇ 50ರಷ್ಟು ರಿಯಾಯಿತಿ ಘೋಷಿಸಿದೆ. ಈ ರಿಯಾಯಿತಿ ಇದೇ ಶುಕ್ರವಾರಕ್ಕೆ ಅಂತ್ಯವಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದೂ ನ್ಯಾಯಾಧೀಶೆ ಶಾಂತಿ ಸಲಹೆ ನೀಡಿದರು.

1992ರಿಂದ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನೂ ಈ ಅಭಿಯಾನದಲ್ಲಿ ಬಗೆಹರಿಸಿಕೊಳ್ಳಬಹುದು. ಬಳ್ಳಾರಿಯಲ್ಲಿ ಅಂಥ ಸುಮಾರು ಸಾವಿರ ಪ್ರಕರಣಗಳಿವೆ ಎಂದೂ ಅವರು ತಿಳಿಸಿದರು. 

ಪ್ರತಿ ದಿನ ಪ್ರಕರಣಗಳ ರಾಜೀ: ವ್ಯಾಜ್ಯಗಳನ್ನು ಲೋಕ ಅದಾಲತ್‌ನಲ್ಲಿ ಮಾತ್ರವಲ್ಲದೇ ರಾಜೀ ಮೂಲಕ ನಿತ್ಯ ಬಗೆಹರಿಸಿಕೊಳ್ಳಲು ಅವಕಾಶವಿದೆ. ನ್ಯಾಯಾಲಯದ ಕಾರ್ಯಕಲಾಪಗಳು ಮುಗಿದ ಬಳಿಕ ಸಂಜೆ 5ರಿಂದ ರಾಜೀ ಸಂದಾನಗಳು ನಡೆಯುತ್ತವೆ. ಸಾರ್ವಜನಿಕರು ಈ ಸಮಯದಲ್ಲಿ ನ್ಯಾಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಿ ವ್ಯಾಜ್ಯ ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು. 

19.84 ಲಕ್ಷ ಪ್ರಕರಣ ಇತ್ಯರ್ಥ

 ಈ ವರ್ಷ ಇಲ್ಲಿಯವರೆಗೆ ನಡೆದಿರುವ ಮೂರು ಲೋಕ ಅದಾಲತ್‌ನಲ್ಲಿ ಒಟ್ಟು 1984892 ವ್ಯಾಜ್ಯ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ. ಇದೆಲ್ಲದರಿಂದ ₹7517512521 (₹751.75 ಕೋಟಿ) ದಂಡ ಸಂಗ್ರಹಿಸಲಾಗಿದೆ ಎಂದು ಕೋರ್ಟ್‌ನ ದಾಖಲೆಗಳಿಂದ ಗೊತ್ತಾಗಿದೆ ಎಂದು ನ್ಯಾಯಾಧೀಶರಾದ ಕೆ.ಜಿ.ಶಾಂತಿ ಹೇಳಿದರು. ಮಾರ್ಚ್‌ನಲ್ಲಿ ನಡೆದಿದ್ದ ಲೋಕ ಅದಾಲತ್‌ನಲ್ಲಿ 636685 ಪ್ರಕರಣ ಇತ್ಯರ್ಥಗೊಂಡು ₹188 ಕೋಟಿ ದಂಡ ಸಂಗ್ರಹಿಸಲಾಗಿತ್ತು. ಜುಲೈನಲ್ಲಿ 875786 ಪ್ರಕರಣ ಇತ್ಯರ್ಥವಾಗಿದ್ದವು ₹345 ಕೋಟಿ ದಂಡ ಸಂಗ್ರಹವಾಗಿತ್ತು.  ಸೆಪ್ಟೆಂಬರ್‌ನಲ್ಲಿ 472421 ಪ್ರಕರಣ ಇತ್ಯರ್ಥವಾಗಿ ₹217 ಕೋಟಿ ಸಂಗ್ರಹಿಸಲಾಗಿತ್ತು ಎಂದರು.

ವ್ಯಾಜ್ಯಗಳನ್ನು ರಾಜೀ ಸಂಧಾನ ಮೂಲಕ ಪರಿಹರಿಸಿಕೊಳ್ಳುವುದು ಎಲ್ಲ ಆಯಾಮಗಳಿಂದಲೂ ಒಳ್ಳೆಯದು. ಇದರಿಂದ ಮುಂದಿನ ಪೀಳಿಗೆಗೆ ನೆಮ್ಮದಿ ಸಿಗಲಿದೆ.
ಕೆ.ಜಿ. ಶಾಂತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.