ADVERTISEMENT

‘ಕೋಮು ದ್ವೇಷಕ್ಕೆ ಬಲಿಯಾಗದಿರಿ’

ಎಐಡಿವೈಒನಿಂದ ಹಲವೆಡೆ ಏಕಕಾಲಕ್ಕೆ ನೇತಾಜಿ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 13:28 IST
Last Updated 23 ಜನವರಿ 2021, 13:28 IST
ಹೊಸಪೇಟೆಯ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಶನಿವಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮ ದಿನ ಆಚರಿಸಲಾಯಿತು
ಹೊಸಪೇಟೆಯ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಶನಿವಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮ ದಿನ ಆಚರಿಸಲಾಯಿತು   

ಹೊಸಪೇಟೆ: ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಒ) ವತಿಯಿಂದ ಶನಿವಾರ ನಗರದಲ್ಲಿ ಏಕಕಾಲಕ್ಕೆ ಹಲವು ಕಡೆ ನೇತಾಜಿ ಸುಭಾಷಚಂದ್ರ ಬೋಸ್‌ ಅವರ 125ನೇ ಜನ್ಮ ದಿನ ಆಚರಿಸಲಾಯಿತು.

ನಗರದ ಬಾಸ್ಕೆಟ್‌ಬಾಲ್‌ ಕ್ರೀಡಾಂಗಣ, ಮುನ್ಸಿಪಲ್‌ ಕಾಲೇಜು ಮೈದಾನ, ಟಿಎಂಎಇ ಐಟಿಐ ಕಾಲೇಜು ಹಾಗೂ ತಾಲ್ಲೂಕಿನ ಬಸವನದುರ್ಗಾ ಗ್ರಾಮದಲ್ಲಿ ನೇತಾಜಿಯವರ ಭಾವಚಿತ್ರಕ್ಕೆ ಹೂಮಳೆಗರೆದು ಗೌರವ ಸಲ್ಲಿಸಲಾಯಿತು.

ಮುನ್ಸಿಪಲ್‌ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಮಲ್ಲಿಕಾರ್ಜುನ ಕೆಂಚರೆಡ್ಡಿ, ‘ಉತ್ತಮ ಸಮಾಜಕ್ಕಾಗಿ ಕೆಲಸ ಮಾಡುವುದು ಎಲ್ಲರ ಜವಾಬ್ದಾರಿ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಿಚಾರಗಳ ಆಧಾರದ ಮೇಲೆ ಸಮಾಜ ಬದಲಾವಣೆಯ ಕೆಲಸಗಳು ನಡೆಯಬೇಕಿದೆ’ ಎಂದು ಹೇಳಿದರು.

ADVERTISEMENT

ಎಐಡಿಎಸ್ಒ ಅಖಿಲ ಭಾರತ ಉಪಾಧ್ಯಕ್ಷ ಡಾ. ಪ್ರಮೋದ್ ಮಾತನಾಡಿ, ‘ದೆಹಲಿ ಗಡಿಗಳಲ್ಲಿ ಸುಮಾರು ಎರಡು ತಿಂಗಳಿಂದ ‌ಯಾವುದೇ ರಾಜಿ ಇಲ್ಲದೇ ರೈತರು ಹೋರಾಟ ನಡೆಸುತ್ತಿದ್ದಾರೆ. ಅವರು ನೇತಾಜಿಯವರ ಉತ್ತರಾಧಿಕಾರಿಗಳು. ಏಕೆಂದರೆ ನೇತಾಜಿಯವರು ಜೀವನದುದ್ದಕ್ಕೂ ರಾಜಿ ರಹಿತ ಹೋರಾಟ ಮಾಡಿದ್ದರು. ಬ್ರಿಟಿಷರು ಅವರಿಗೆ ಬಹಳ ಹೆದರುತ್ತಿದ್ದರು’ ಎಂದರು.

‘ದೇಶದಲ್ಲಿ ನಿರುದ್ಯೋಗ, ಆಹಾರದ ಕೊರತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಮಟ್ಟ ಕುಸಿದಿದೆ. ಅನೇಕ ಜ್ವಲಂತ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಆದರೆ, ಅವುಗಳನ್ನು ಮರೆಮಾಚಿ ಕೋಮುದ್ವೇಷ ಬಿತ್ತಲಾಗುತ್ತಿದೆ. ಅದಕ್ಕೆ ಜನ ಬಲಿಯಾಗಬಾರದು’ ಎಂದು ಹೇಳಿದರು.

ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ಎಚ್‌. ಯರ್ರಿಸ್ವಾಮಿ, ಕಲ್ಮೇಶ್ ಗುದಿಗೇನವರ್, ಹುಲುಗಪ್ಪ, ಬಾಷಾ ಬೆನಕಾಪುರ, ಪ್ರಕಾಶ್‍ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.