ADVERTISEMENT

ನವವಿವಾಹಿತೆಯ ಸಾವುವ್ಯವಸ್ಥಿತ ಕೊಲೆ, ಆರೋಪ

ತನಿಖೆಗೆ ಜನವಾದಿ ಮಹಿಳಾ ಸಂಘಟನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 16:42 IST
Last Updated 10 ಸೆಪ್ಟೆಂಬರ್ 2020, 16:42 IST

ಹೊಸಪೇಟೆ: ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಇಲ್ಲಿನ ಚಿತ್ತವಾಡ್ಗಿಯ ಗೌಸಿಯಾ (18) ಎನ್ನುವವರು ಇತ್ತೀಚೆಗೆ ಮೃತಪಟ್ಟಿದ್ದು, ಆಕೆಯ ಮನೆಯವರು ‘ಇದೊಂದು ವ್ಯವಸ್ಥಿತ ಕೊಲೆ’ ಎಂದು ಆರೋಪಿಸಿದ್ದಾರೆ.

‘ವರದಕ್ಷಿಣೆಗಾಗಿ ಆಕೆಯ ಗಂಡನ ಮನೆಯವರು ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ’ ಎಂದು ಮೃತರ ಸಹೋದರ ಸಿಕಂದರ್‌ ಚಿತ್ತವಾಡ್ಗಿ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಕಂಪ್ಲಿ ನಿವಾಸಿಯಾದ ಗೌಸಿಯಾ ಅವರನ್ನು ಚಿತ್ತವಾಡ್ಗಿಯ ರಫೀಕ್‌ ಎನ್ನುವವರಿಗೆ ಕೊಟ್ಟು ಜೂ. 28ರಂದು ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆಗಾಗಿ ಗಂಡನ ಮನೆಯವರು ಪೀಡಿಸುತ್ತಿದ್ದರು. ಸೆ. 3ರಂದು ಗೌಸಿಯಾಗೆ ಚಿತ್ರಹಿಂಸೆ ನೀಡಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸೆ. 5ರಂದು ಸಾವನ್ನಪ್ಪಿದ್ದಾರೆ. ಮನೆಯ ಮೆಟ್ಟಿಲಿನಿಂದ ಬಿದ್ದು ಗೌಸಿಯಾ ಗಾಯಗೊಂಡಿದ್ದರು ಎಂದು ಆಕೆಯ ಗಂಡನ ಮನೆಯವರು ತಿಳಿಸಿದ್ದಾರೆ. ಆದರೆ, ಆಕೆಯ ಕತ್ತಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಹಾಗಾಗಿ ಆಕೆಯ ಸಾವಿನ ಕುರಿತು ತನಿಖೆ ನಡೆಸಿ, ಅದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಿಕಂದರ್‌ ದೂರು ಕೊಟ್ಟಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತನಿಖೆಗೆ ಆಗ್ರಹ:ಗೌಸಿಯಾ ಅನುಮಾನಾಸ್ಪದ ಸಾವಿನ ಕುರಿತು ತನಿಖೆ ನಡೆಸುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲ್ಲೂಕು ಘಟಕ ಆಗ್ರಹಿಸಿದೆ.

‘ಗೌಸಿಯಾ ಗಾಯಗೊಂಡು ಮೂರು ದಿನ ಆಸ್ಪತ್ರೆಯಲ್ಲಿದ್ದರೂ ಪೊಲೀಸರು ಆಕೆಯ ಹೇಳಿಕೆಯನ್ನು ಪಡೆದುಕೊಂಡಿಲ್ಲ. ಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಅದು ಸರಿಯಾದ ಕ್ರಮವಲ್ಲ. ದಕ್ಷ ಅಧಿಕಾರಿಯಿಂದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು’ ಎಂದು ಸಂಘಟನೆಯ ಮುಖಂಡರಾದ ಆರ್. ಭಾಸ್ಕರ್‌ ರೆಡ್ಡಿ, ಕರುಣಾನಿಧಿ, ನಾಗರತ್ನಮ್ಮ, ಮಹೇಶ ಅವರು ಡಿವೈಎಸ್ಪಿ ವಿ. ರಘುಕುಮಾರ ಅವರಿಗೆ ಗುರುವಾರ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.