ಬಳ್ಳಾರಿ: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (ಎನ್‌ಎಂಡಿಸಿ) ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ‘ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್‌ಸಿ–ವಿಮ್ಸ್)’ಕ್ಕೆ ಒಟ್ಟು ₹8.33 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಒದಗಿಸಿದೆ.
‘ಐಸಿಯು ವೆಂಟಿಲೇಟರ್‌ಗಳು, ನವಜಾತ ಶಿಶುಗಳಿಗೆ ಸರ್ಕ್ಯೂಟ್‌ಗಳು, ಉಸಿರಾಟದ ತೊಂದರೆಯನ್ನು ಸರಾಗಗೊಳಿಸುವ ಬಬಲ್ ಸಿಪಿಎಪಿ ಮತ್ತು ಮಕ್ಕಳ ಬಿಪ್ಯಾಪ್ ಸಾಧನಗಳು ಮತ್ತು ಆಮ್ಲಜನಕ ಒದಗಿಸುವ ‘ಹೈ ಫ್ಲೋ ನಾಸಲ್ ಕ್ಯಾನುಲಾ’ಗಳನ್ನು ಆಸ್ಪತ್ರೆಗೆ ನೀಡಲಾಗಿದೆ. ಇದರ ಜತೆಗೆ, ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ನವೀಕರಿಸಲಾಗಿದೆ, ಎಚ್‌ಡಿ ಲ್ಯಾಪ್ರೊಸ್ಕೋಪ್‌ಗಳು, ಇಆರ್‌ಸಿಪಿ ಸ್ಕೋಪ್‌ಗಳು ಮತ್ತು ಶಸ್ತ್ರಚಿಕಿತ್ಸೆಗೆ ಬಳಸಲಾಗುವ ಲೇಸರ್ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ನೂತನ ಶಸ್ತ್ರಚಿಕಿತ್ಸಾ ಮೇಜುಗಳು ಮತ್ತು ಸುಧಾರಿತ ಎಲ್‌ಇಡಿ ದೀಪಗಳನ್ನು ಒದಗಿಸಲಾಗಿದೆ. ಇದು ಶಸ್ತ್ರಚಿಕಿತ್ಸಾ ಕೊಠಡಿಯನ್ನು ಮತ್ತಷ್ಟು ಬಲಪಡಿಸಿದೆ’ ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ಕುರಿತು ಮಾತನಾಡಿರುವ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ, ‘ಹೆಚ್ಚಿನ ವೈದ್ಯಕೀಯ ಉಪಕರಣಗಳು, ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಲು ನೆರವಾಗುತ್ತವೆ. ಇದನ್ನು ಒದಗಿಸಿದ ಎನ್‌ಎಂಡಿಸಿಯ ಕಾರ್ಯ ಶ್ಲಾಘನೀಯ’ ಎಂದಿದ್ದಾರೆ.
‘ಬಳ್ಳಾರಿ ವೈದ್ಯಕೀಯ ಕಾಲೇಜಿಗೆ ನೆರವು ನೀಡುವುದು ನಮ್ಮ ಜವಾಬ್ದಾರಿ. ಅಭಿವೃದ್ಧಿ ಎಂಬುದು ಅತ್ಯಂತ ಹಿಂದುಳಿದವರನ್ನೂ ತಲುಪಬೇಕು ’ ಎಂದು ಎನ್‌ಎಂಡಿಸಿಯ ಸಿಎಂಡಿ ಅಮಿತವ ಮುಖರ್ಜಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.