ADVERTISEMENT

ದಶಕಗಳುರುಳಿದರೂ ತಪ್ಪದ ಜೋಪಡಿ ವಾಸ!

ನಗರ, ಪಟ್ಟಣ ಪ್ರದೇಶಗಳಲ್ಲಿ ಕುಂಟುತ್ತಿರುವ ವಸತಿ ಯೋಜನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 8:20 IST
Last Updated 9 ನವೆಂಬರ್ 2020, 8:20 IST
ತೋರಣಗಲ್ಲು ಸಮೀಪದ ಕುರೆಕುಪ್ಪ ಪುರಸಭೆಯ 23ನೇ ವಾರ್ಡ್‍ನಲ್ಲಿ ಅಪೂರ್ಣಗೊಂಡ ಮನೆ.
ತೋರಣಗಲ್ಲು ಸಮೀಪದ ಕುರೆಕುಪ್ಪ ಪುರಸಭೆಯ 23ನೇ ವಾರ್ಡ್‍ನಲ್ಲಿ ಅಪೂರ್ಣಗೊಂಡ ಮನೆ.   

ಬಳ್ಳಾರಿ: ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ನಿವೇಶನ ಮತ್ತು ಮನೆ ಇಲ್ಲದ ಬಡವರಿಗೆ ದಶಕಗಳುರುಳಿದರೂ ಸ್ವಂತ ಸೂರಿನ ಕನಸು ನನಸಾಗದೇ ಜೋಪಡಿ ವಾಸವೇ ಗತಿಯಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳು ಬಡವರಿಗಾಗಿ ವಸತಿ ನಿರ್ಮಿಸಿ ಕೊಡುವಲ್ಲಿ ಹಿಂದೆ ಉಳಿದಿವೆ. ಖಾಸಗಿ ಬಡಾವಣೆಗಳ ನಿವೇಶನಗಳ ದರ ಮುಗಿಲುಮುಟ್ಟಿದೆ.

ಫಲಾನುಭವಿ ವಂತಿಕೆಯನ್ನು ಆಧರಿಸಿದ ಯೋಜನೆಗಳು ನಿಧಾನವಾಗಲು ಫಲಾನುಭವಿಗಳ ಅಸಹಾಯಕತೆ ಮತ್ತು ನಿರಾಸಕ್ತಿಯೂ ಕಾರಣವಾಗಿರುವ ಸನ್ನಿವೇಶಗಳೂ ಜಿಲ್ಲೆಯಲ್ಲಿವೆ. ಎರಡು ವರ್ಷದಿಂದ ಅನುದಾನ ಬಿಡುಗಡೆಯಾಗದೇ ಇರುವುದು ಕೂಡ ಮನೆಗಳ ನಿರ್ಮಾಣ ಯೋಜನೆಗಳಿಗೆ ತೊಡಕಾಗಿದೆ. ಈ ಸಮಸ್ಯೆಗಳ ನಡುವೆ ಕೆಲವೆಡೆ ಆಶ್ರಯ ಸಮಿತಿಗಳೇ ರಚನೆಯಾಗಿಲ್ಲ!

ಕೆಲವು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಚುನಾವಣೆ ಮುಗಿದು ವರ್ಷಗಳಾದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದೇ ಇರುವುದು ನಿವೇಶನ ಹಂಚಿಕೆಗೆ ಅಡ್ಡಿಯಾಗಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ಸೇರಿದಂತೆ ವಿವಿಧ ಕಾರಣಗಳಿಗಾಗಿ ಆಯ್ಕೆ ಪ್ರಕ್ರಿಯೆಯನ್ನೇ ರಾಜೀವಗಾಂಧಿ ವಸತಿ ನಿಗಮ ಸ್ಥಗಿತಗೊಳಿಸಿದೆ.

ADVERTISEMENT

ಜಿಲ್ಲಾ ಕೇಂದ್ರವಾದ ನಗರದಲ್ಲಿ ಆಶ್ರಯ ಯೋಜನೆ ದಶಕದಿಂದ ಅನುಷ್ಠಾನವಾಗಿಲ್ಲ. ಫಲಾನುಭವಿ ವಂತಿಕೆ ಸಮರ್ಪಕವಾಗಿ ಪಾವತಿಯಾಗದೇ ಇರುವುದರಿಂದ ಅರ್ಧದಷ್ಟು ಜಿ+2 ಮನೆಗಳ ನಿರ್ಮಾಣವನ್ನು ಪಾಲಿಕೆ ಕೈಬಿಟ್ಟಿದೆ. ಫಲಾನುಭವಿಗಳ ವಂತಿಕೆಯು ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿ ಮೀಸಲಿದ್ದರೂ ಸಂಡೂರಿನಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರನಿವೇಶನಗಳನ್ನು ವಿತರಿಸಿ ದಶಕಗಳಾಗಿವೆ.

ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಇದುವರೆಗೆ ಸರ್ಕಾರದ ವತಿಯಿಂದ ಎಷ್ಟು ನಿವೇಶನ ವಿತರಿಸಲಾಗಿದೆ, ಮನೆಗಳನ್ನು ನಿರ್ಮಿಸಲಾಗಿದೆ ಎಂಬ ಅಂಕಿ ಅಂಶ ಜಿಲ್ಲಾ ನಗರಾಭಿವೃದ್ಧಿ ಕೋಶದ ಬಳಿ ಇಲ್ಲ. 2015ರಿಂದ ಈಚೆಗಿನ ಯೋಜನೆಗಳ ಅಂಕಿ ಅಂಶವಷ್ಟೇ ಲಭ್ಯವಿದೆ.

ಕೂಡ್ಲಿಗಿಯಲ್ಲಿ 1992ರಲ್ಲಿ ಸುಮಾರು 250 ಮನೆ, 2001ರಲ್ಲಿ 350ಕ್ಕೂ ಹೆಚ್ಚು ಮನೆಗಳ ಹಂಚಿಕೆಯಾಗಿತ್ತು.‘ನಮ್ಮ ಮನೆ’ ಯೋಜನೆಯಲ್ಲಿ ಅನುದಾನವಿದ್ದರೂ, ಹಣವಿಲ್ಲದೆ ಅನೇಕರು ಮನೆ ನಿರ್ಮಿಸಿಕೊಂಡಿಲ್ಲ. ’ಎರಡು ಕಡೆ ಜಮೀನು ಗುರುತಿಸಿದರೂ ಅನುಮೋದನೆ ಸಿಕ್ಕಿಲ್ಲ’ ಎಂದು ತಹಶೀಲ್ದಾರ್ ಎಸ್. ಮಹಾಬಲೇಶ್ವರ ತಿಳಿಸಿದ್ದಾರೆ.

ಕಂಪ್ಲಿಯ ಶಿಬಿರದಿನ್ನಿ ಪ್ರದೇಶದ ನಿವೇಶನಕ್ಕೆ 35 ವರ್ಷಗಳ ಹಿಂದೆ ₹ 350 ಪಾವತಿಸಿದ 640 ಫಲಾನುಭವಿಗಳಲ್ಲಿ 310 ಮಂದಿಗೆ ನಿವೇಶನ ದೊರಕಿದೆ. 330 ಮಂದಿ ಕಾಯುತ್ತಿದ್ದಾರೆ. 23ನೇ ವಾರ್ಡ್‍ನ ಸುಮಾರು 640 ಮಂದಿ ಸರ್ಕಾರಿ, ಹಳ್ಳ, ಪೊರಂಪೋಕು ಸ್ಥಳದಲ್ಲಿ ಗುಡಿಸಲು ಹಾಕಿಕೊಂಡು ಅಕ್ರಮ ಸಕ್ರಮ ಅಡಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 170 ಮಂದಿಗಷ್ಟೇ ಪಟ್ಟಾ ದೊರಕಿದೆ.

‘ವಸತಿ ಯೋಜನೆಯ ಹಣದ ಜೊತೆಗೆ ಸಾಲ ಮಾಡಿ ಮನೆಯ ಬುನಾದಿ ಮತ್ತು ಲಿಂಟಲ್ ಮಟ್ಟವನ್ನು ಪೂರ್ಣಗೊಳಿಸಿ ನಾಲ್ಕು ವರ್ಷಗಳಾದರೂ ಇನ್ನೆರಡು ಕಂತುಗಳ ಹಣ ಬರಲೇ ಇಲ್ಲ. ಮನೆಯೂ ಪೂರ್ಣಗೊಳ್ಳಲಿಲ್ಲ’ ಎಂದು ಸಂಡೂರು ತಾಲ್ಲೂಕಿನ ಕುರೇಕುಪ್ಪ ಪಟ್ಟಣದ 23ನೇ ವಾರ್ಡ್‌ ಫಲಾನುಭವಿ ಸರಸ್ವತಿ ವಿಷಾದಿಸಿದರು.

20 ವರ್ಷಗಳಿಂದ ಸಿರುಗುಪ್ಪದ 16 ಮತ್ತು 17 ನೇ ವಾರ್ಡಿನ ಆಶ್ರಯ, ಡ್ರೈವರ್ ಕಾಲೊನಿ ಮತ್ತು ಯಲ್ಲಾಲಿಂಗ ನಗರದ ವಾಸಿಗಳಿಗೆ ಹಕ್ಕುಪತ್ರಗಳೇ ಸಿಕ್ಕಿಲ್ಲ ಎಂದು ಸರ್ದಾರ್‌ಗೌಡ, ಪಂಪನಗೌಡ, ನರಸಿಂಹ ದೂರುತ್ತಾರೆ.

‘22 ಎಕರೆ ಜಮೀನು ಖರೀದಿಸಲಾಗಿದೆ. ರಾಜೀವಗಾಂಧಿ ವಸತಿ ನಿಗಮದಿಂದ ಮಂಜೂರಾದ 1,300 ಆಶ್ರಯ ಮನೆಗಳನ್ನು ನಿರ್ಮಿಸುವ ಗುರಿಯಿದ್ದರೂ, ಆಶ್ರಯ ಸಮಿತಿ ಇಲ್ಲದಿರುವುದರಿಂದ ಫಲಾನುಭವಿಗಳನ್ನು ಆಯ್ಕೆಯಾಗಿಲ್ಲ’ ಎಂದು ಪೌರಾಯುಕ್ತ ಪ್ರೇಮ್‍ಚಾರ್ಲ್ಸ್‌ ಹೇಳಿದರು.

ಮನೆಯ ಹಣ ನೆರೆ ಪರಿಹಾರಕ್ಕೆ!

ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಆಯ್ಕೆಯಾಗಿದ್ದ 140 ಕುಟುಂಬಗಳ ಮನೆಗಳನ್ನು ಕೆಡವಿ ಹೊಸದಾಗಿ ನಿರ್ಮಿಸಲು ಮುಂದಾದಾಗಲೇ ಅನುದಾನವನ್ನು ಸರ್ಕಾರ ನೆರೆ ಪರಿಹಾರಕ್ಕೆ ಬಳಸಿದ್ದರಿಂದ ಹಳೆಯ ಗುಡಿಸಲೂ ಇಲ್ಲ, ಹೊಸ ಮನೆಯೂ ಇಲ್ಲ ಎಂಬಂತಾಗಿದೆ.

‘ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿದ್ದರಿಂದ ವಾಸದ ಮನೆ ಕೆಡವಿ ಹೊಸಮನೆ ನಿರ್ಮಿಸಲು ಮುಂದಾದಾಗ ಮೊದಲ ಕಂತು ₹ 50 ಸಾವಿರ ಮಾತ್ರ ಬಿಡುಗಡೆಯಾಯಿತು. ಎರಡು ವರ್ಷವಾದರೂ ಅನುದಾನ ಬಿಡುಗಡೆಯಾಗಿಲ್ಲ’ ಎಂದು ಫಲಾನುಭವಿ ಚಂದಾನೀಲಮ್ಮ ಅಳಲು ತೋಡಿಕೊಂಡರು.

40 ವರ್ಷಗಳಲ್ಲಿ 1,202 ನಿವೇಶನ ಹಂಚಿಕೆ

ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರವು 1979–80ರಿಂದ ಇದುವರೆಗೆ ನಗರದಲ್ಲಿ ಏಳು ಬಡಾವಣೆಗಳನ್ನು ನಿರ್ಮಿಸಿ, 1,202 ನಿವೇಶನಗಳನ್ನು ಹಂಚಿದೆ. 1989–90ರಲ್ಲಿ ಅತಿ ಹೆಚ್ಚು ನಿವೇಶನಗಳನ್ನು ಹಂಚಿದೆ. 2007–08ರಲ್ಲಿ ಮಾರುತಿ ನಗರ ಬಡಾವಣೆಯಲ್ಲಿ ‌ 26 ನಿವೇಶನಗಳನ್ನು ಮಾರಿದೆ.

ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನ ಇಂಗಳಗಿ ಸಮೀಪ ವಿಜಯನಗರ ಲೇಔಟ್‌ ನಿರ್ಮಿಸಲಾಗುತ್ತಿದೆ. ಖಾಸಗಿ ಹಾಗೂ ಹುಡಾ ಸಹಭಾಗಿತ್ವದ ಯೋಜನೆಯಡಿ 302 ನಿವೇಶನ ರಚನೆಯಾಗಲಿದೆ. ಪ್ರಸಕ್ತ ಸಾಲಿನಲ್ಲಿ 2,432 ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಹಣ ಕೂಡ ಠೇವಣಿ ಇರಿಸಿದ್ದಾರೆ’ ಎಂದು ಪ್ರಾಧಿಕಾರದ ಆಯುಕ್ತ ಎಚ್‌.ಎನ್‌. ಗುರುಪ್ರಸಾದ್‌ ತಿಳಿಸಿದ್ದಾರೆ.

ಮನಿ ಆಸೆದಾಗ ಕಣ್ಣು ಮುಚ್ಕೊತೀವೊ...

‘ಅಜ್ಜ, ಮುತ್ತಜ್ಜನ ಕಾಲದಿಂದ ಜೋಪಡಿಯಲ್ಲಿಯೇ ಜೀವನ ಮಾಡ್ತಿದೀವಿ. ಸರ್ಕಾರ ನಮ್ಮ ಮ್ಯಾಗ ಕಣ್ಣು ತೆರೆತದೋ ಇಲ್ಲಾ ಮನಿ ಆಸೆದಾಗ ನಾವು ಕಣ್ಣು ಮುಚ್ಕೊತೀವೊ..’ ಎಂದು ಹೂವಿನಹಡಗಲಿಯ ಕಾಯಕ ನಗರ ಹಿಂಭಾಗದ ಜೋಡಿಯಲ್ಲಿ ವಾಸಿಸುತ್ತಿರುವ ಸಿಂಧೋಳಿ ಕುಟುಂಬದ ಮಹಿಳೆ ಗಾಳೆಮ್ಮ ನೋವಿನಿಂದ ನುಡಿದರು.

ಸಂತೆ ಮೈದಾನದಿಂದ 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳನ್ನು ‘ನೆಮ್ಮದಿ ಊರು’ ಕಾಮಗಾರಿಗಾಗಿ ನಾಲ್ಕು ವರ್ಷದ ಹಿಂದೆ ಸ್ಥಳಾಂತರಿಸಿದ್ದು ಯಾತನೆಯೇ ಅವರ ಜೀವನವಾಗಿದೆ. ಪಟ್ಟಣದ ಹುಲಿಗುಡ್ಡ ಪ್ರದೇಶದ 60 ಎಕರೆಯಲ್ಲಿ ಟೌನ್ ಶಿಪ್‌ ನಿರ್ಮಿಸುವ ಯೋಜನೆಗೆ ಅನುಮೋದನೆ ದೊರಕಿಲ್ಲ.

ಪ್ರಜಾವಾಣಿ ತಂಡ: ಕೆ.ನರಸಿಂಹಮೂರ್ತಿ, ಶಶಿಕಾಂತ ಎಸ್‌.ಶೆಂಬೆಳ್ಳಿ, ಸಿ.ಶಿವಾನಂದ, ಎಂ,ಬಸವರಾಜಯ್ಯ, ಕೆ..ಸೋಮಶೇಖರ್‌, ಎ.ಎಂ.ಸೋಮಶೇಖರಯ್ಯ, ಬಿ.ಎರ್ರಿಸ್ವಾಮಿ, ಎಚ್‌.ಎಂ.ಪಂಡಿತಾರಾಧ್ಯ, ಎ.ವಾಗೀಶ ವಿ.ಎಂ.ನಾಗಭೂಷಣ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.