ADVERTISEMENT

ಸಮಸ್ಯೆ ಹೊದ್ದ ಬಳ್ಳಾರಿ ಜಿಲ್ಲಾಡಳಿತ ಭವನ

ನಿರ್ವಹಣೆಗಿಲ್ಲ ಸಮಿತಿ; ದುಸ್ಥಿತಿಯಲ್ಲಿ ಶೌಚಾಲಯ: ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್

ಆರ್. ಹರಿಶಂಕರ್
Published 10 ಡಿಸೆಂಬರ್ 2025, 5:35 IST
Last Updated 10 ಡಿಸೆಂಬರ್ 2025, 5:35 IST
ಜಿಲ್ಲಾಡಳಿತ ಭವನದ ಎದುರು ವಾಹನಗಳನ್ನು ಹೇಗೆಂದರೆ ಹಾಗೆ ನಿಲ್ಲಿಸಿರುವುದು
ಜಿಲ್ಲಾಡಳಿತ ಭವನದ ಎದುರು ವಾಹನಗಳನ್ನು ಹೇಗೆಂದರೆ ಹಾಗೆ ನಿಲ್ಲಿಸಿರುವುದು   

ಬಳ್ಳಾರಿ: ಬಳ್ಳಾರಿಯ ನೂತನ ಜಿಲ್ಲಾಡಳಿತ ಭವನ ಉದ್ಘಾಟನೆಗೊಂಡು ಮೂರು ವರ್ಷಗಳಷ್ಟೇ ಕಳೆದಿವೆ. ಆದರೆ, ಅಷ್ಟರೊಳಗೆ ಹಲವು ಸಮಸ್ಯೆಗಳನ್ನು ಹೊದ್ದು ಕೂತಿದೆ.

ನಗರದ ಡಾ. ರಾಜ್‌ಕುಮಾರ್‌ (ಅನಂತಪುರ) ರಸ್ತೆಯ 17.13 ಎಕರೆ ಪ್ರದೇಶದಲ್ಲಿರುವ ಈ  ಭವನವನ್ನು ಕರ್ನಾಟಕ ಗೃಹ ಮಂಡಳಿ ₹25 ಕೋಟಿ ವೆಚ್ಚದಲ್ಲಿ ನಿರ್ಮಿಸಿತ್ತು. ಆವರಣದೊಳಗಿನ ರಸ್ತೆಗಳಿಗೆ ₹5 ಕೋಟಿ ಖರ್ಚು ಮಾಡಲಾಗಿತ್ತು. ಸದ್ಯ 14 ಇಲಾಖೆಗಳು ಇಲ್ಲಿವೆ. ಜಿಲ್ಲಾಧಿಕಾರಿ ಈ ಕಟ್ಟಡದಲ್ಲಿಯೂ ಒಂದು ಕಚೇರಿಯನ್ನೂ ಹೊಂದಿದ್ದು, ಪ್ರಮುಖ ಸಭೆಗಳು ಇಲ್ಲಿಯೇ ನಡೆಯುತ್ತಿವೆ. 

ಇಡೀ ಭವನಕ್ಕೆ ಮೂವರೇ ಹೋಮ್‌ಗಾರ್ಡ್‌ಗಳಿದ್ದಾರೆ. ಸೂಕ್ತ ಭದ್ರತೆ ಇಲ್ಲದ ಕಾರಣ ಕಳ್ಳತನ ಪ್ರಕರಣಗಳು ಈಗಾಗಲೇ ನಡೆದಿವೆ. ಭವನದ ಒಂದು ಕಡೆ ಮಾತ್ರ ವಾಟರ್‌ ಪ್ಯೂರಿಫೈಯರ್‌ ಇದೆ. ಆದರೆ, ಇದು ಸಾಲುತ್ತಿಲ್ಲ. ಇಡೀ ಕಟ್ಟಡದ ಮೂರು ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಅನುಸ್ಥಾಪಿಸಬೇಕು ಎಂದು ಅಲ್ಲಿನ ಸಿಬ್ಬಂದಿ, ಜನರು ಒತ್ತಾಯಿಸುತ್ತಿದ್ದಾರೆ.

ADVERTISEMENT

ಭವನದಲ್ಲಿ ಅವ್ಯವಸ್ಥಿತ ಪಾರ್ಕಿಂಗ್‌ ಪರಿಪಾಠವಿದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ, ಅಧಿಕಾರಿಗಳ ಕಾರುಗಳಿಗೆ, ಸಾರ್ವಜನಿಕರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಇನ್ನು ಸಾರ್ವಜನಿಕರಿಗೆಂದು ಮೀಸಲಿಟ್ಟಿರುವ ಶೌಚಾಲಯಗಳು ಈಗಾಗಲೇ ದುಸ್ಥಿತಿಗೆ ತಲುಪಿವೆ. ಅದರ ನಿರ್ವಹಣೆ ಸರಿಯಾಗಿ ಆಗಬೇಕು. ಭವನದ ಒಂದು ಮತ್ತು ಎರಡನೇ ಅಂತಸ್ಥಿತಿನಲ್ಲಿ ಮಾತ್ರ ಕಸ ಗುಡಿಸಿ ಶುಚಿಯಾಗಿ ಇಡಲಾಗಿದೆ. ಮೇಲಿನ ಅಂತಸ್ಥಿತಿನಲ್ಲಿ ದೂಳು ತಾಂಡವವಾಡುತ್ತಿದೆ.

ನಿತ್ಯ ಸಾವಿರಾರು ಜನ ಓಡಾಡುವ ಈ ಜಾಗದಲ್ಲಿ ಒಂದೇ ಒಂದು ಕ್ಯಾಂಟಿನ್‌ ಇಲ್ಲ. ತಿಂಡಿ, ಚಹ, ನೀರೂ ಕೂಡ ಸಿಗದಂಥ ಪರಿಸ್ಥಿತಿ ಇಲ್ಲಿದೆ. ಇದಕ್ಕಾಗಿ ಭವನದಿಂದ ಹೊರಗೆ ಹೋಗಬೇಕಾದ ಪರಿಸ್ಥಿತಿ. ಇಲ್ಲಿ ಒಂದು ‘ನಂದಿನಿ ಬೂತ್‌’ ಬೇಕು ಎಂಬ ಒತ್ತಾಯ ಅಧಿಕಾರಿಗಳಿಂದ ಕೇಳಿಬಂದಿದೆ. ಆದರೆ, ತಮ್ಮ ಬೆಂಬಲಿಗರಿಗೆ ‘ನಂದಿನಿ ಬೂತ್‌’ ಹಾಕಿಸಲು ರಾಜಕಾರಣಿಗಳು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ.

ನಿರ್ವಹಣೆಗಿಲ್ಲ ಸಮಿತಿ: ಪ್ರತಿ ಜಿಲ್ಲೆಗಳಲ್ಲಿಯೂ ಜಿಲ್ಲಾಡಳಿತ ಭವನದ ನಿರ್ವಹಣೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ಇದೆ. ಆದರೆ, ಇಲ್ಲಿ ಅಂಥ ಸಮಿತಿಯೇ  ಇಗಿಲ್ಲ. ಆದರೆ, ನಿರ್ವಹಣೆಗೆಂದು ಕಂದಾಯ ಇಲಾಖೆ ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ. ಆದರೆ, ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. 

ಬಾಕಿ ಉಳಿಸಿಕೊಂಡ ಇಲಾಖೆಗಳು: ಜಿಲ್ಲಾಡಳಿತ ಭವನದಲ್ಲಿರುವ ಬಹುತೇಕ ಎಲ್ಲ ಇಲಾಖೆಗಳೂ ನಿರ್ವಹಣಾ ವೆಚ್ಚ ಸಂದಾಯ ಮಾಡುತ್ತಿವೆ. ಅದರೆ, ತಹಶೀಲ್ದಾರ್‌ ಕಚೇರಿ ₹32 ಲಕ್ಷ ಬಾಕಿ ಉಳಿಸಿಕೊಂಡಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ₹96 ಸಾವಿರ, ದೇವರಾಜ ಅರಸು ನಿಗಮ ₹2.94 ಲಕ್ಷ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. 

New dc office
ಕಟ್ಟಡ ಹೊಸದಿದೆ. ಅದಾಗಲೇ ಲಿಫ್ಟ್‌ ಕೆಟ್ಟು ಹೋಗಿವೆ. ಕಟ್ಟಡವನ್ನು ವ್ಯವಸ್ಥಿವಾಗಿ ನಿರ್ವಹಿಸಿಕೊಂಡು ಹೋಗಬೇಕು. ಸಾರ್ವಜನಿಕರಿಗೆ ಸಿಬ್ಬಂದಿಗೆ ವ್ಯವಸ್ಥೆ ಕಲ್ಪಿಸಬೇಕು
ಸುರೇಶ್‌ ಹೋರಾಟಗಾರ 
ಸುರೇಶ್‌ 
ಭವನದಲ್ಲಿಲ್ಲ ಸಿಸಿ ಟಿ.ವಿ ಕ್ಯಾಮೆರಾ
ಮೂರು ಬ್ಲಾಕ್‌ಗಳನ್ನು ಹೊಂದಿರುವ ವಿಶಾಲವಾದ ಕಟ್ಟಡದಲ್ಲಿ ಎಲ್ಲಿ ಹುಡುಕಿದರೂ ಒಂದೇ ಒಂದು ಸಿ.ಸಿ ಟಿ.ವಿ ಕ್ಯಾಮೆರಾ ಇಲ್ಲ. ಇದೂ ಕೂಡ ಭದ್ರತೆಗೆ ದೊಡ್ಡ ಬೆದರಿಕೆ ಎಂಬಂತಾಗಿದೆ. ಮೊದಲು ಕಟ್ಟಡದ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾಗಳನ್ನು ಹಾಕಿಸಬೇಕು. ಆಗ ಗೋಡೆ ಹಾರಿ ಬರುತ್ತಿರುವ ನೆರೆಹೊರೆಯ ಕಿಡಿಗೇಡಿಗಳನ್ನು ತಪ್ಪಿಸಿದಂತೆ ಆಗುತ್ತದೆ. ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ. ಪ್ರತಿಯೊಂದು ಚಲನವಲನದ ಮೇಲೆ ಕಣ್ಣಿಟ್ಟಂತೆ ಆಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಳ್ಳಾರಿಯ ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿರುವ ಹೊಸ ಜಿಲ್ಲಾಡಳಿತ ಭವನದ ಹೊರಾಂಗಣ 
ಲಿಫ್ಟ್‌ ದುಸ್ಥಿತಿ: ಅಂಗವಿಕಲರ ಫಜೀತಿ 
ಭವನ ಮೂರು ಕಡೆಗಳಲ್ಲಿ ಲಿಫ್ಟ್‌ಗಳಿವೆ. ಜಿಲ್ಲಾಧಿಕಾರಿ ಕಚೇರಿ ಇರುವಲ್ಲಿ ಅಳವಡಿಸಿರುವ ಲಿಫ್ಟ್‌ ಬಿಟ್ಟರೆ ಇನ್ನುಳಿದ ಎರಡು ಲಿಫ್ಟ್‌ಗಳ ಸಲಕರಣೆಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದು ಐದು ತಿಂಗಳಿಂದ ಕೆಟ್ಟು ನಿಂತಿವೆ. ಹೀಗಾಗಿ ಅಂಗವಿಕಲರು ಒದ್ದಾಡುತ್ತಾ ಕಚೇರಿಗಳಿಗೆ ಮೆಟ್ಟಿಲು ಹತ್ತಿ ಹೋಗುವ ದೃಶ್ಯಗಳು ಬೇಸರ ಮೂಡಿಸುತ್ತಿವೆ. ಇದು ನಿತ್ಯದ ಗೋಳು ಎಂಬಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.