ADVERTISEMENT

ಬಳ್ಳಾರಿಗೆ ಹೊಸ ಪ್ರಯಾಣಿಕ ರೈಲಿಲ್ಲ

ಸಂಸದ ತುಕಾರಾಂ ಅವರಿಗೆ ರೈಲ್ವೆ ಇಲಾಖೆ ನೀಡಿರುವ ಉತ್ತರದಿಂದ ವಿಷಯ ಬಹಿರಂಗ

ಆರ್. ಹರಿಶಂಕರ್
Published 14 ಡಿಸೆಂಬರ್ 2025, 4:33 IST
Last Updated 14 ಡಿಸೆಂಬರ್ 2025, 4:33 IST
ಇ.ತುಕಾರಾಂ
ಇ.ತುಕಾರಾಂ   

ಬಳ್ಳಾರಿ: ಬಳ್ಳಾರಿ ರೈಲು ಜಂಕ್ಷನ್‌ ಸಂಪರ್ಕಿಸುವ ಹೊಸ ಪ್ರಯಾಣಿಕ ರೈಲು ಅಥವಾ ವಂದೇ ಭಾರತ್ ರೈಲುಗಳ ಆರಂಭ ಸದ್ಯಕ್ಕಿಲ್ಲ ಎಂದು ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯ  ಒದಗಿಸಿರುವ ದಾಖಲೆಗಳಿಂದ ಬಹಿರಂಗವಾಗಿದೆ.

ಬಳ್ಳಾರಿಗೆ ದೀರ್ಘಕಾಲದಿಂದಲೂ ಬಾಕಿ ಉಳಿದಿರುವ ಪ್ರಯಾಣಿಕ ರೈಲುಗಳ ಬೇಡಿಕೆ ಕುರಿತು ಬಳ್ಳಾರಿ–ವಿಜಯನಗರ ಸಂಸದ ಇ. ತುಕಾರಾಂ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದರು. 

‘ಹೊಸ ಪ್ರಯಾಣಿಕ ರೈಲು ಮಾರ್ಗಗಳಿಗೆ ಬೇಡಿಕೆ ಬಂದಿರುವುದು ಕೇಂದ್ರದ ಗಮನದಲ್ಲಿದೆಯೇ, ಆ ಬೇಡಿಕೆಗಳಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು, ಚೆನ್ನೈ-ಬಳ್ಳಾರಿ-ಹೊಸಪೇಟೆ-ಮುಂಬೈ ಮಾರ್ಗದಲ್ಲಿ ದೈನಂದಿನ ರೈಲುಗಳು, ಮುಂಬೈ-ಗದಗ ಮತ್ತು ಸೋಲಾಪುರ-ಗದಗ ರೈಲುಗಳನ್ನು ಬಳ್ಳಾರಿ ಅಥವಾ ಹೊಸಪೇಟೆಗೆ ವಿಸ್ತರಿಸಲಾಗುತ್ತದೆಯೇ, ಹೊಸಪೇಟೆ, ಬಳ್ಳಾರಿ ಮತ್ತು ಬೆಂಗಳೂರಿನ ನಡುವೆ ಎಕ್ಸ್‌ಪ್ರೆಸ್ ಅಥವಾ ವಂದೇ ಭಾರತ್ ಸೇವೆಗಳನ್ನು ಆರಂಭಿಸಲಾಗುತ್ತದೆಯೇ’ ಎಂದು ಅವರು ಕೇಂದ್ರವನ್ನು ಪ್ರಶ್ನಿಸಿದ್ದರು.  

ADVERTISEMENT

ಇದಕ್ಕೆ ಲಿಖಿತ ಉತ್ತರ ನೀಡಿರುವ ರೈಲ್ವೆ ಇಲಾಖೆ, ‘ಯಾವುದೇ ಹೊಸ ರೈಲು ಯೋಜನೆ ಅಥವಾ ಕಾರ್ಯಾಚರಣೆಯು ‘ಕಾರ್ಯ ಸಾಧ್ಯತೆ’ಗಳನ್ನು ಅವಲಂಬಿಸಿರುತ್ತದೆ. ನಿರ್ದಿಷ್ಟ ಮಾರ್ಗದಲ್ಲಿ ಹೊಸ ರೈಲು ಸೇವೆಗಳನ್ನು ಪ್ರಾರಂಭಿಸುವುದು ಅಲ್ಲಿನ ಮಾರ್ಗ ಸಾಮರ್ಥ್ಯ, ರೈಲು ಮಾರ್ಗಗಳ ಲಭ್ಯತೆ, ರೈಲು ವಾಹನಗಳ ಲಭ್ಯತೆ, ಮೂಲಸೌಕರ್ಯ ಮತ್ತು ಹಳಿ ನಿರ್ವಹಣೆ ಅಗತ್ಯತೆಗಳು ಸೇರಿದಂತೆ ಬಹು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಸಮಜಾಯಿಷಿ ನೀಡಿದೆ. 

‘ಬಳ್ಳಾರಿ ಜಂಕ್ಷನ್‌ನಲ್ಲಿ ಪ್ರಸ್ತುತ 30 ಮೇಲ್/ಎಕ್ಸ್‌ಪ್ರೆಸ್ ರೈಲುಗಳು ಮತ್ತು 12 ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿವೆ. ಇವುಗಳು ಚೆನ್ನೈ, ಹೊಸಪೇಟೆ, ಮುಂಬೈ, ಗದಗ ಮತ್ತು ಸೋಲಾಪುರದಂತಹ ಪ್ರಮುಖ ನಗರಗಳಿಗೆ ಸಂಪರ್ಕ ಒದಗಿಸುತ್ತವೆ. ಹೊಸಪೇಟೆ-ಬಳ್ಳಾರಿ-ಬೆಂಗಳೂರು ವಲಯದಲ್ಲಿ ಏಳು ಜೋಡಿ ರೈಲು ಸೇವೆಗಳಿವೆ’ ಎಂದು ಸಚಿವಾಲಯ ತಿಳಿಸಿದೆ.

ಇಷ್ಟು ಹೇಳಿದ ರೈಲ್ವೆ ಇಲಾಖೆ ಯಾವುದಾದರೂ ಹೊಸ ಪ್ರಯಾಣಿಕ ರೈಲು ಸೇವೆ ಆರಂಭವಾಗಲಿದೆಯೇ ಎಂಬುದಕ್ಕೆ ಮಾತ್ರ ಉತ್ತರ ನೀಡಿಲ್ಲ. 

ಪ್ರಮುಖ ಗಣಿ ಚಟುವಟಿಕೆಗಳ ಕೇಂದ್ರವಾಗಿರುವ ಬಳ್ಳಾರಿ ಜಿಲ್ಲೆ ಮತ್ತು ಭಾರತೀಯ ರೈಲ್ವೆಗೆ ಸರಕು ಸಾಗಣೆ ಮೂಲಕ ಗಮನಾರ್ಹ ಆದಾಯ ತಂದು ಕೊಡುತ್ತಿದೆ. ಜಿಲ್ಲೆಯ ಆರ್ಥಿಕ ಚಟುವಟಿಕೆ ಮತ್ತು ಚಲನಶೀಲತೆಯನ್ನು ಬೆಂಬಲಿಸಲು ಹೆಚ್ಚಿನ ಪ್ರಯಾಣಿಕರ ಸೇವೆಗಳನ್ನು ಜಿಲ್ಲೆ ಎದುರು ನೋಡುತ್ತಿದೆ ಎಂದು ತುಕಾರಾಂ ಅವರು ಕೇಂದ್ರಕ್ಕೆ ಆಗ್ರಹಿಸಿದ್ದರು. ಆದರೆ, ಅವರು ಪ್ರಸ್ತಾಪಿಸಿರುವ ವಿಷಯಗಳನ್ನೆಲ್ಲ ಪಕ್ಕಕ್ಕೆ ಸರಿಸಿದಂತೆ ಕಾಣುತ್ತಿರುವ ರೈಲ್ವೆ ಇಲಾಖೆ ಯಾವುದೇ ಹೊಸ ರೈಲುಗಳು ಇಲ್ಲ ಎಂದು ಹೇಳಿದೆ. 

ballari railway station 
ಕೇಂದ್ರ ಸರ್ಕಾರ ನನಗೆ ನೀಡಿರುವ ಪ್ರತಿಕ್ರಿಯೆಯು ನನಗೆ ತೃಪ್ತಿ ತಂದಿಲ್ಲ. ಹೊಸ ರೈಲುಗಳ ಅಗತ್ಯತೆ ಬಳ್ಳಾರಿಗೆ ಇದೆ. ನಾನು ಈ ವಿಚಾರವಾಗಿ ಸಚಿವಾಲಯವನ್ನು ಇನ್ನಷ್ಟು ಬೆನ್ನುಹತ್ತುತ್ತೇನೆ
ಇ. ತುಕಾರಾಂ ಬಳ್ಳಾರಿ–ವಿಜಯನಗರ ಸಂಸದ 

ದಾಖಲೆ ನಿರ್ವಹಿಸಿಲ್ಲ

ಹೊಸ ರೈಲುಗಳಿಗಾಗಿ ಮತ್ತು ರೈಲು ಮಾರ್ಗಗಳ ವಿಸ್ತರಣೆಗಾಗಿ ಸಂಸದರು ಚುನಾಯಿತ ಪ್ರತಿನಿಧಿಗಳು ಮತ್ತು ರೈಲು ಬಳಕೆದಾರರಿಂದ ಕಾಲಕಾಲಕ್ಕೆ ಮನವಿಗಳು ನಿಯಮಿತವಾಗಿ ರೈಲ್ವೆ ಇಲಾಖೆ ಸಲ್ಲಿಕೆಯಾಗುತ್ತಲೇ ಇರುತ್ತವೆ. ಇದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಅಂಥ ಮನವಿಗಳ ಕೇಂದ್ರೀಕೃತ ದಾಖಲೆಯನ್ನು ರೈಲ್ವೆ ಇಲಾಖೆ ನಿರ್ವಹಿಸುವುದಿಲ್ಲ. ಪ್ರತಿಯೊಂದು ಪ್ರಸ್ತಾವನೆಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ. ಕಾರ್ಯಸಾಧ್ಯತೆ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ’ ಎಂದು ರೈಲ್ವೆ ಇಲಾಖೆ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.