ಹೂವಿನಹಡಗಲಿ: ಪಟ್ಟಣದ ಕಾಯಕ ನಗರದ ಖಾಲಿ ಜಾಗದಲ್ಲಿ ಹಾಕಿಕೊಂಡಿರುವ ತಾತ್ಕಾಲಿಕ ಗುಡಿಸಲು, ಜೋಪಡಿಗಳನ್ನು ತೆರವುಗೊಳಿಸುವಂತೆ ಪುರಸಭೆ ನೋಟಿಸ್ ಜಾರಿ ಮಾಡಿದ್ದು, ಅಲೆಮಾರಿಗಳು ಮತ್ತು ನಿವೇಶನರಹಿತ ಬಡ ಕುಟುಂಬಗಳ ಬದುಕು ಅತಂತ್ರವಾಗಿದೆ.
ಪಟ್ಟಣದ ಸಂತೆ ಮೈದಾನ ಹತ್ತಿರದ ಬಯಲಲ್ಲಿ ಗುಡಿಸಲು ಹಾಕಿಕೊಂಡಿದ್ದ ಅಲೆಮಾರಿ ಕುಟುಂಬಗಳನ್ನು ‘ನೆಮ್ಮದಿ ಊರು’ ಕಾಮಗಾರಿ ಸಲುವಾಗಿ 2016ರಲ್ಲಿ ಕಾಯಕ ನಗರ ಹಿಂಭಾಗದ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿಯೇ ಕಾಯಂ ನಿವೇಶನ ನೀಡುವ ಭರವಸೆ ನೀಡಲಾಗಿತ್ತು. 9 ವರ್ಷಗಳಿಂದ ಇವರಿಗೆ ಸೂರು ಕಲ್ಪಿಸಲು ಯಾರೂ ಇಚ್ಛಾಶಕ್ತಿ ತೋರದ ಕಾರಣ ಬಡ ಕುಟುಂಬಗಳ ಇಲ್ಲೇ ವಾಸವಿವೆ. ಈಗ ತಾತ್ಕಾಲಿಕ ನೆಲೆಗೂ ಕುತ್ತು ಬಂದಿದೆ.
ಕಾಯಕ ನಗರ ಯೋಜನೆಗೆ ಬಳಕೆಯಾಗಿ ಉಳಿದಿದ್ದ ಜಾಗವನ್ನು ಸಣ್ಣ ಕೈಗಾರಿಕೆ ಇಲಾಖೆ ನಿವೇಶನಗಳನ್ನಾಗಿಸಿ, ಗುಡಿ ಕೈಗಾರಿಕೆ ನಡೆಸುವ ಪರಿಶಿಷ್ಟ ಪಂಗಡ ಸಮುದಾಯದ 100 ಫಲಾನುಭವಿಗಳಿಗೆ ಹಂಚಿಕೆ ಮಾಡಿದೆ. ಇದೇ ಜಾಗದಲ್ಲೇ ಅಲೆಮಾರಿಗಳು, ನಿರಾಶ್ರಿತ ಬಡ ಕುಟುಂಬಗಳು ತಾತ್ಕಾಲಿಕವಾಗಿ ಜೋಪಡಿ ಹಾಕಿಕೊಂಡಿವೆ.
‘ಅಧಿಕೃತವಾಗಿ ಈ ಜಾಗ ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಹಂಚಿಕೆಯಾಗಿರುವುದರಿಂದ 30 ದಿನದೊಳಗೆ ಗುಡಿಸಲು ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಪುರಸಭೆ ಮುಖ್ಯಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ತಾತ್ಕಾಲಿಕ ಗುಡಿಸಲು, ಜೋಪಡಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ, ಮುಸ್ಲಿಂ, ಸಿಂಧೋಳಿ ಸಮುದಾಯದವರಿಗೆ ಹಲವು ದಶಕದಿಂದ ಸೂರು ಮರೀಚಿಕೆಯಾಗಿದೆ. ಜಿಪ್ ಹಾಕುವುದು, ಸ್ಟೇಷನರಿ, ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಕೆಲವರು ಹೈನುಗಾರಿಕೆ, ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ.
‘ದಿನದ ದುಡಿಮೆಯಲ್ಲೇ ಹೊಟ್ಟೆ ತುಂಬಿಸಿಕೊಳ್ಳುವ ನಮಗೆ ನಿವೇಶನ, ಮನೆ ಕನಸಿನ ಮಾತಾಗಿದೆ. ಚುನಾವಣೆಯಲ್ಲಿ ಮಾತ್ರ ನಾವು ನೆನಪಾಗುತ್ತೇವೆ. ನಂತರ ನಮ್ಮ ಕಷ್ಟ ಯಾರೂ ಕೇಳುವುದಿಲ್ಲ’ ಎಂದು ರೇಷ್ಮಾ, ರಮಿಜಾಬೀ, ಎಚ್.ನೀಲಮ್ಮ, ಮಹಾಂತೇಶ ಅಳಲು ತೋಡಿಕೊಂಡರು.
‘ಸಂತೆ ಮೈದಾನದಿಂದ ಸ್ಥಳಾಂತರಿಸುವಾಗ ಇಲ್ಲೇ ಕಾಯಂ ನಿವೇಶನ ನೀಡುವುದಾಗಿ ಆಗಿನ ಶಾಸಕರು, ಪುರಸಭೆ ಅಧಿಕಾರಿಗಳು ಭರವಸೆ ನೀಡಿದ್ದರು. ಈಗ ಗುಡಿಸಲು ತೆರವುಗೊಳಿಸುವಂತೆ ನೋಟಿಸ್ ನೀಡಿದರೆ ನಾವು ಎಲ್ಲಿಗೆ ಹೋಗಬೇಕು? ಇದೇ ಪ್ರದೇಶದಲ್ಲಿ ನಿವೇಶನ ಹಕ್ಕು ಪತ್ರ ನೀಡುವವರೆಗೆ ನಾವು ಕದಲುವುದಿಲ್ಲ. ಹೋರಾಟಕ್ಕೂ ಸಿದ್ದರಾಗುತ್ತೇವೆ’ ಎಂದು ಅವರು ಹೇಳಿದರು.
ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಮತ್ತೆಲ್ಲಿಗೆ?: ‘ನಮ್ಮನ್ನು ಅಲ್ಲಿಂದ (ಸಂತೆ ಮೈದಾನ) ಇಲ್ಲಿಗೆ ಕಳಿಸಿದ್ರು. ಇಲ್ಲಿಂದ ಮತ್ತೆಲ್ಲಿಗೆ ಹೋಗಬೇಕು’ ಎಂದು ಸಿಂಧೊಳ್ಳಿ ಸಮುದಾಯದ ಮಹಿಳೆ ಲಕ್ಷ್ಮಮ್ಮ ಪ್ರಶ್ನಿಸಿದರು.
‘ಅಡವಿಯಲ್ಲಿ ಹೊಲ ಇಲ್ಲ, ಊರಾಗ ಮನೆ ಇಲ್ಲ. ಹಿರಿಯರ ಕಾಲದಿಂದ್ಲೂ ಜೋಂಪಡಿ ಕಟ್ಟಿಕೊಂಡು ಜೀವನ ಮಾಡ್ತಾ ಇದೀವಿ. ಈ ಜಾಗವನ್ನೂ ಬಿಡಿ ಅಂದ್ರೆ ಎಲ್ಲಿಗೆ ಹೋಗಬೇಕು? ಸರ್ಕಾರ ನಮಗೆ ನಿವೇಶನ, ಮನೆ ಮಂಜೂರು ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು’ ಎಂದು ಅಲವತ್ತುಕೊಂಡರು.
ಕೆಲವರಿಗೆ ಬೇರೆಡೆ ನಿವೇಶನ ನೀಡಿದ್ದರೂ ಇಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ. 22 ಕುಟುಂಬಗಳಿಗೆ ಮಾತ್ರ ನಿವೇಶನ ನೀಡಬೇಕಿದ್ದು ವಸತಿ ಯೋಜನೆಯಲ್ಲಿ ಅವರಿಗೆ ಆದ್ಯತೆ ನೀಡುತ್ತೇವೆಇಮಾಮ್ ಸಾಹೇಬ್ ಪುರಸಭೆ ಮುಖ್ಯಾಧಿಕಾರಿ ಹೂವಿನಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.