ADVERTISEMENT

ಲೆಕ್ಕಕ್ಕೆ ಸಿಗದಷ್ಟು ‘ಅಸುರಕ್ಷಿತ’ ಕಟ್ಟಡಗಳು

ಪಾಲನೆಯಾಗದ ನಿಯಮ; ಧಾರವಾಡ ಕಟ್ಟಡ ದುರಂತದಿಂದ ಕಲಿಯಬೇಕಿದೆ ಪಾಠ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಮಾರ್ಚ್ 2019, 13:41 IST
Last Updated 24 ಮಾರ್ಚ್ 2019, 13:41 IST

ಹೊಸಪೇಟೆ: ನಗರದಲ್ಲೂ ಅನೇಕ ಅಸುರಕ್ಷಿತ ಕಟ್ಟಡಗಳಿವೆ. ಆದರೆ, ನಗರಾಭಿವೃದ್ಧಿ ಪ್ರಾಧಿಕಾರವಾಗಲಿ, ನಗರಸಭೆ ಬಳಿಯಾಗಲಿ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ನಗರದ ಬಡಾವಣೆ ರಸ್ತೆಗಳಾಗಲಿ, ಮುಖ್ಯರಸ್ತೆಗಳಲ್ಲಾಗಲಿ ಒಮ್ಮೆ ಸುತ್ತಾಡಿ ಕಣ್ಣು ಹಾಯಿಸಿದರೆ ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅದಕ್ಕೆ ಕಾರಣ ನಿಯಮಗಳನ್ನು ಪಾಲಿಸದೇ ಇರುವುದು. ಈ ವಿಷಯ ನಗರಸಭೆಯ ಗಮನಕ್ಕೆ ಬಂದರೂ ತೆರವುಗೊಳಿಸುವ ಗೋಜಿಗೆ ಹೋಗಿಲ್ಲ.

ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೂ ಪೂರ್ವದಲ್ಲಿ ಅನುಮತಿ ಪಡೆಯಬೇಕು. ಇಂತಿಷ್ಟೇ ಸೆಟ್‌ಬ್ಯಾಕ್‌ ಬಿಡಬೇಕು. ಇಷ್ಟೇ ಎತ್ತರದ ಕಾಂಪೌಂಡ್‌ ನಿರ್ಮಿಸಬೇಕು. ಪಾರ್ಕಿಂಗ್‌ಗೆ ಇಷ್ಟೇ ಜಾಗ ಬಿಡಬೇಕು. ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವಾಗ ಮರಳು, ಕಬ್ಬಿಣ, ಸಿಮೆಂಟ್‌ ಇಂತಿಷ್ಟೇ ಗುಣಮಟ್ಟ ಹೊಂದಿರುವುದನ್ನು ಬಳಸಬೇಕೆಂಬ ನಿಯಮ ಇದೆ. ಆದರೆ, ಬಹುತೇಕ ಸಂದರ್ಭದಲ್ಲಿ ಈ ನಿಯಮ ಪಾಲನೆ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಕಟ್ಟಡಗಳು ಅವಧಿಗೂ ಮುನ್ನವೇ ಕುಸಿದು ಬಿದ್ದು, ಅನಾಹುತ ಸಂಭವಿಸುತ್ತವೆ. ಅದಕ್ಕೆ ತಾಜಾ ನಿದರ್ಶನ ಧಾರವಾಡದಲ್ಲಿ ಕುಸಿದು ಬಿದ್ದ ಬಹುಅಂತಸ್ತಿನ ಕಟ್ಟಡ.

ADVERTISEMENT

ಅಂದಹಾಗೆ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು ಶ್ರಮಿಸುತ್ತಾರೆ. ಆದರೆ, ಅಧಿಕಾರಸ್ಥರು, ರಾಜಕಾರಣಿಗಳ ರಾಜಕೀಯ ಪ್ರಭಾವಕ್ಕೆ ಅವರು ಅನಿವಾರ್ಯವಾಗಿ ತಲೆಬಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇನ್ನು, ಕೆಲ ಅಧಿಕಾರಿಗಳು ಹಣಕ್ಕಾಗಿ ಬೇಕಾಬಿಟ್ಟಿಯಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡುತ್ತಾರೆ. ಕಟ್ಟಡದ ವಿನ್ಯಾಸ ಸೇರಿದಂತೆ ಯಾವ ವಿಷಯವನ್ನು ಪರಿಶೀಲಿಸದೆ ತರಾತುರಿಯಲ್ಲಿ ಅನುಮತಿ ಕೊಡಿಸುತ್ತಾರೆ. ಒಂದೆಡೆ ಅಧಿಕಾರಸ್ಥರ ಪ್ರಭಾವ, ಮತ್ತೊಂದೆಡೆ ಹಣದ ಆಮಿಷಕ್ಕೆ ಒಳಗಾಗಿ ಸಿಕ್ಕಸಿಕ್ಕವರಿಗೆಲ್ಲ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಾರೆ. ಇದರಿಂದ ಅವುಗಳು ಕುಸಿದು ಬಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

ವೇಗವಾಗಿ ಬೆಳೆಯುತ್ತಿರುವ ನಗರ:

ವಿಶ್ವವಿಖ್ಯಾತ ಹಂಪಿ ಸನಿಹದಲ್ಲೇ ಇರುವುದರಿಂದ ನಿತ್ಯ ದೇಶ–ವಿದೇಶಗಳಿಂದ ನೂರಾರು ಪ್ರವಾಸಿಗರು ನಗರಕ್ಕೆ ಬಂದು ಹೋಗುತ್ತಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಹೋಟೆಲ್‌ ಉದ್ದಿಮೆ ಬೆಳೆಯುತ್ತಿದೆ. ತುಂಗಭದ್ರಾ ಜಲಾಶಯ, ಅದಿರಿನ ಗಣಿಗಳು ಇರುವುದರಿಂದ ಹೊಸ ಹೊಸ ಕೈಗಾರಿಕೆಗಳು ತಲೆ ಎತ್ತುತ್ತಿವೆ. ಇದರಿಂದ ಉದ್ಯೋಗ ಸೃಷ್ಟಿಯಾಗಿ, ವಸತಿ ಸಮುಚ್ಚಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಈಗ ಅಪಾರ್ಟ್‌ಮೆಂಟ್‌ ಸಂಸ್ಕೃತಿ ಬೆಳೆಯುತ್ತಿದೆ. ರಿಯಲ್‌ ಎಸ್ಟೇಟ್‌ ಉದ್ದಿಮೆ ವೇಗವಾಗಿ ಬೆಳೆಯುತ್ತಿದೆ.

ಹೆಚ್ಚಿನ ಹಣ ಗಳಿಕೆಗಾಗಿ ದಿನ ಕಳೆಯುವುದರಲ್ಲಿ ಅನೇಕ ಕಟ್ಟಡಗಳು ತಲೆ ಎತ್ತುತ್ತಿವೆ. ಅದೆಷ್ಟೋ ಕಟ್ಟಡಗಳು ಅನುಮತಿ ಪಡೆಯದೆ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳಂತೂ ಅವರಿಗೆ ಲೆಕ್ಕಕ್ಕಿಲ್ಲದಂತಾಗಿದೆ. ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸಿದ ಪ್ರಕರಣಗಳು ಬಹಳ ಅಪರೂಪವೆನ್ನಬಹುದು. ಬೀದಿ ಬದಿ ವ್ಯಾಪಾರಿಗಳನ್ನು ತಕ್ಷಣವೇ ತೆರವುಗೊಳಿಸಲು ಕಾಳಜಿ ತೋರಿಸುವ ನಗರಸಭೆ ಬಲಾಢ್ಯರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತದೆ ಎಂಬ ಆರೋಪ ಸಾರ್ವಜನಿಕರದ್ದು.

ಈ ಕುರಿತು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅಹಮ್ಮದ್‌ ಅವರನ್ನು ಪ್ರಶ್ನಿಸಿದರೆ, ‘ನಿಯಮ ಮೀರಿ ಕಟ್ಟಡ ಕಟ್ಟಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತ ಬರಲಾಗಿದೆ. ಆಯುಷ ಮುಗಿದ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಕೆಲವರು ಸ್ವಯಂಪ್ರೇರಣೆಯಿಂದ ಅರ್ಜಿ ಸಲ್ಲಿಸುತ್ತಾರೆ. ಕಳೆದ 15 ವರ್ಷಗಳಿಂದ ನಗರ ವೇಗವಾಗಿ ಬೆಳೆಯುತ್ತಿದೆ. ಈಗಷ್ಟೇ ಬಹುಮಹಡಿ ಕಟ್ಟಡಗಳು ನಗರದಲ್ಲಿ ನಿರ್ಮಾಣವಾಗುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.