ಬಳ್ಳಾರಿ: ಆಂಧ್ರ ಪ್ರದೇಶದಲ್ಲಿ ಒಎಂಸಿಯು ಮೂರು ಗಣಿಗಳನ್ನು ಹೊಂದಿರುತ್ತದೆ. ಅದರಲ್ಲಿ ಮಲಪನಗುಡಿಯ ಅಂತರಗಂಗಮ್ಮ ಕೊಂಡ ಎಂಬಲ್ಲಿದ್ದ 68 ಹೆಕ್ಟೇರ್ ಪ್ರದೇಶದ ಗಣಿಯೂ ಒಂದು. ಈ ಗಣಿಯೂ ಮೂಲತಃ ಟಪಾಲ್ ಗಣೇಶ್ ಕುಟುಂಬದ್ದಾಗಿದ್ದು, ಒಎಂಸಿಗೆ ಮರು ಮಂಜೂರಾಗಿರುತ್ತದೆ.
2008ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿ ಉಸ್ತುವಾರಿ ಸಚಿವರು ಆಗುತ್ತಾರೆ. ತಮ್ಮ ಪ್ರಭಾವ ಬಳಸಿಕೊಂಡು, ಮಲಪನಗುಡಿಯಲ್ಲಿರುವ ತಮ್ಮ ಗಣಿ ಸುತ್ತಮುತ್ತಲ ಗಣಿ ಕಂಪನಿಗಳಾದ ಹಿಂದ್ ಟ್ರೇಡರ್ಸ್, ಮೆಹಬೂಟ್ ಟ್ರಾನ್ಸ್‌ಪೋರ್ಟ್ ಕಂಪನಿ, ಎನ್ ರತ್ನಯ್ಯ ಇವರೊಂದಿಗೆ ಅಕ್ರಮವಾಗಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಮಧ್ಯೆ, ಕೆಲ ಗಣಿ ಗುತ್ತಿಗೆಗಳ ಜಿಪಿಎಸ್ ರೀಡಿಂಗ್‌ಗಳನ್ನು, ಎಲ್ಲೆಗಳನ್ನು ಅಧಿಕಾರಿಗಳ ಸಹಕಾರದೊಂದಿಗೆ ಬದಲಾವಣೆ ಮಾಡಿದ ಆರೋಪ ವ್ಯಕ್ತವಾಗುತ್ತದೆ.
ಕರ್ನಾಟಕದ ಭಾಗದಲ್ಲಿದ್ದ ಟಪಾಲ್ ಗಣೇಶ್ ಅವರ ಕುಟುಂಬದ ಒಡೆತನದ ಟಿಎನ್‌ಆರ್ ಗಣಿಯ ಎಲ್ಲೆಗಳು ಬದಲಾಗುತ್ತವೆ. ಇದರ ವಿರುದ್ಧ ಟಪಾಲ್ ಕುಟುಂಬ ಹೈಕೋರ್ಟ್ ಮೆಟ್ಟಿಲೇರುತ್ತದೆ. ಅಲ್ಲಿ ಸರ್ವೆಗೆ ಆದೇಶವಾದರೂ, ಜನಾರ್ದನ ರೆಡ್ಡಿ ಅಲ್ಲಿಯೂ ಪ್ರಭಾವ ಬೀರಿದ ಆರೋಪವಿದೆ.
ಕೊನೆಗೆ, ಮಲಪನಗುಡಿಯ ಅಂತರಗಂಗಮ್ಮ ಕೊಂಡ ಎಂಬಲ್ಲಿದ್ದ ಗಣಿಯ ಮೂಲ ದಾಖಲೆ, ನಕ್ಷೆಗಳ ಮಾಹಿತಿ ಸಂಗ್ರಹಿಸುವ ಟಪಾಲ್ ಕುಟುಂಬ ಅದರಲ್ಲಿ ಕಂಡು ಬರುವ ವ್ಯತ್ಯಾಸಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕೇಂದ್ರದ ಉನ್ನತಾಧಿಕಾರ ಸಮಿತಿಯ ಮೊರೆ ಹೋಗುತ್ತದೆ.
ಈ ವಿಚಾರ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತದೆ. ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ವಿಧಾನಸಭೆಯಲ್ಲಿ ತೀವ್ರವಾಗಿ ಖಂಡಿಸುತ್ತಾರೆ. ತನಿಖೆಗೆ ಆಗ್ರಹಿಸುತ್ತಾರೆ. ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದ ಸರ್ಕಾರ ತನಿಖೆಗೆ ತ್ರಿಸದಸ್ಯ ಸಮಿತಿಯೊಂದನ್ನು ರಚಿಸುತ್ತದೆ.
ತನಿಖೆ ನಡೆಸುವ ಸಮಿತಿಯು, ಜನಾರ್ದನ ರೆಡ್ಡಿ ಅವರ ಒಎಂಸಿ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಅಕ್ರಮ ನಡೆಸುತ್ತಿರುವುದಾಗಿ ಸರ್ಕಾರಕ್ಕೆ ವರದಿ ನೀಡುತ್ತದೆ. ವರದಿ ಆಧರಿಸಿದ ಸಿಎಂ ರೋಸಯ್ಯ 2009ರ ಸೆ. 11ರಂದು ಸಿಬಿಐ ತನಿಖೆಗೆ ಆದೇಶಿಸುತ್ತಾರೆ. ಇದೇ ಪ್ರಕರಣದಲ್ಲಿ ಸದ್ಯ ತೀರ್ಪು ಪ್ರಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.