ADVERTISEMENT

ಮಹಾನಗರ ಪಾಲಿಕೆಗೆ ಸೇರಿಸದಂತೆ ಆಗ್ರಹ

ಕಮಲಾಪುರ ಪಟ್ಟಣ ಪಂಚಾಯಿತಿಯಿಂದ ನಿರ್ಣಯ ಅಂಗೀಕರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 15:06 IST
Last Updated 15 ಸೆಪ್ಟೆಂಬರ್ 2021, 15:06 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರದಲ್ಲಿ ಬುಧವಾರ ಸಂಜೆ ಪ್ರಗತಿಪರ ಸಂಘಗಳ ಒಕ್ಕೂಟದ ಸಭೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು
ಹೊಸಪೇಟೆ ತಾಲ್ಲೂಕಿನ ಕಮಲಾಪುರದಲ್ಲಿ ಬುಧವಾರ ಸಂಜೆ ಪ್ರಗತಿಪರ ಸಂಘಗಳ ಒಕ್ಕೂಟದ ಸಭೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು   

ಹೊಸಪೇಟೆ (ವಿಜಯನಗರ): ಉದ್ದೇಶಿತ ಹೊಸಪೇಟೆ ಮಹಾನಗರ ಪಾಲಿಕೆ ರಚನೆಯ ಕರಡು ಪ್ರಸ್ತಾವದಲ್ಲಿ ಯಾವುದೇ ಕಾರಣಕ್ಕೂ ಕಮಲಾಪುರ ಪಟ್ಟಣದ ಹೆಸರು ಸೇರಿಸಬಾರದು ಎಂದು ಬುಧವಾರ ಸಂಜೆ ತಾಲ್ಲೂಕಿನ ಕಮಲಾಪುರದಲ್ಲಿ ನಡೆದ ಪ್ರಗತಿಪರ ಸಂಘಗಳ ಒಕ್ಕೂಟದ ಸಭೆ ಹಕ್ಕೊತ್ತಾಯ ಮಾಡಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್‌ ಅಮಾನುಲ್ಲಾ, ಹಾಲಿ, ಮಾಜಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ನೂರಾರು ಜನ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ಕರಡು ಪ್ರಸ್ತಾವದಲ್ಲಿ ಕಮಲಾಪುರ ಹೆಸರು ಸೇರಿಸದಂತೆ ಒಮ್ಮತದಿಂದ ಆಗ್ರಹಿಸಿದರು. ನಂತರ ಸೈಯದ್‌ ಅಮಾನುಲ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಕಮಲಾಪುರ ಪಟ್ಟಣವನ್ನು ಮಹಾನಗರ ಪಾಲಿಕೆ ರಚನೆಯ ಕರಡು ಪ್ರಸ್ತಾವದಲ್ಲಿ ಸೇರಿಸಿ, ಅಂಗೀಕಾರಗೊಂಡರೆ ಬಡವರು, ರೈತರು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹೆಚ್ಚುವರಿ ತೆರಿಗೆ ತುಂಬಬೇಕಾಗುತ್ತದೆ. ಕೃಷಿ ಚಟುವಟಿಕೆಗಳಿಗೆ ಹೊಡೆತ ಬೀಳುತ್ತದೆ. ಹಾಗಾಗಿ ಪಟ್ಟಣ ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದರು.

ADVERTISEMENT

‘ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಹಾನಗರ ಪಾಲಿಕೆ ರಚಿಸುವ ಕಸರತ್ತು ನಡೆಯುತ್ತಿದೆ. ಇದರಿಂದ ಬಡವರು, ಕಾರ್ಮಿಕರು, ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಫಲವತ್ತಾದ ಜಮೀನಿನಲ್ಲಿ ಕಟ್ಟಡಗಳು ನಿರ್ಮಾಣವಾದರೆ ಹಸಿರು ಮಾಯವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕರಡು ಪ್ರಸ್ತಾವ ತಯಾರಿಸುವುದಕ್ಕೂ ಮುನ್ನ ಎಲ್ಲರೊಂದಿಗೆ ಸಮಾಲೋಚಿಸಿ ಮುಂದುವರೆಯಬೇಕು. ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಕೆಲಸ ಆರಂಭಿಸಿರುವುದು ಎಷ್ಟರಮಟ್ಟಿಗೆ ಸರಿ. ಸಚಿವ ಆನಂದ್‌ ಸಿಂಗ್‌ ಅವರು ಪಾಲಿಕೆ ರಚನೆ ಮಾಡಿಕೊಳ್ಳಲಿ. ಆದರೆ, ಕಮಲಾಪುರ ಹೆಸರು ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ವಿಜಯನಗರ ಜಿಲ್ಲೆಯಾಗಿರುವುದು ಸಂತೋಷದ ವಿಚಾರ. ಆದರೆ, ಮಹಾನಗರ ಪಾಲಿಕೆ ವ್ಯಾಪ್ತಿಗೆ ಕಮಲಾಪುರ ಸೇರಿಸುವುದಕ್ಕೆ ನನ್ನ ವಿರೋಧವಿದೆ. ಊರ ಹಿತಕ್ಕಿಂತ ಬೇರೇನೂ ಮುಖ್ಯವಲ್ಲ. ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ’ ಎಂದು ಮುಖಂಡ ಸಮೀವುಲ್ಲಾ ಹೇಳಿದರು.

ಮುಖಂಡ ಡಾ.ಬಿ.ಆರ್‌. ಮಳಲಿ ಮಾತನಾಡಿ, ‘ಮಹಾನಗರ ಪಾಲಿಕೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕಮಲಾಪುರ ಸೇರಿಸುವುದು ಬೇಡ. ಒಂದುವೇಳೆ ಸೇರಿಸಿದರೆ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.