ADVERTISEMENT

ಪಾಲಿಕೆಗೆ ಕಮಲಾಪುರ ಸೇರ್ಪಡೆಗೆ ವಿರೋಧ

ಪ್ರಗತಿಪರ ಸಂಘಟನೆಗಳ ವೇದಿಕೆಯ ಸಭೆಯಲ್ಲಿ ಒಮ್ಮತದ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 5:18 IST
Last Updated 14 ಸೆಪ್ಟೆಂಬರ್ 2021, 5:18 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಸೋಮವಾರ ಸಂಜೆ ಪ್ರಗತಿಪರ ಸಂಘಟನೆಗಳ ವೇದಿಕೆಯ ಸಭೆಯಲ್ಲಿ ಮುಖಂಡರು ಪಾಲ್ಗೊಂಡಿದ್ದರು
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಸೋಮವಾರ ಸಂಜೆ ಪ್ರಗತಿಪರ ಸಂಘಟನೆಗಳ ವೇದಿಕೆಯ ಸಭೆಯಲ್ಲಿ ಮುಖಂಡರು ಪಾಲ್ಗೊಂಡಿದ್ದರು   

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಮಹಾನಗರ ಪಾಲಿಕೆಗೆ ಒಪ್ಪಿಗೆ ಪಡೆಯಲು ಉದ್ದೇಶಿತ ಕರಡು ಪ್ರಸ್ತಾವ ಇನ್ನಷ್ಟೇ ಸಿದ್ಧಗೊಳ್ಳಬೇಕಿದೆ. ಅಷ್ಟರಲ್ಲಾಗಲೇ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ತಾಲ್ಲೂಕಿನ ಹೋಬಳಿ ಕೇಂದ್ರವಾಗಿರುವ ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ಒಳಗೊಂಡಂತೆ ನಗರಸಭೆಯು ಕರಡು ಪ್ರಸ್ತಾವ ಸಿದ್ಧಪಡಿಸುತ್ತಿದೆ. ಆದರೆ, ಉದ್ದೇಶಿತ ಪ್ರಸ್ತಾವದಲ್ಲಿ ಕಮಲಾಪುರ ಹೆಸರು ಯಾವುದೇ ಕಾರಣಕ್ಕೂ ಸೇರಿಸಬಾರದು ಎಂದು ಸೋಮವಾರ ಸಂಜೆ ಪಟ್ಟಣದಲ್ಲಿ ನಡೆದ ಪ್ರಗತಿಪರ ಸಂಘಟನೆಗಳ ವೇದಿಕೆಯ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಈಗಷ್ಟೇ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಇನ್ನಷ್ಟೇ ಜಿಲ್ಲಾ ಮಟ್ಟದ ಕಚೇರಿಗಳು ಆರಂಭಗೊಳ್ಳಬೇಕಿದೆ. ಅದಕ್ಕೂ ಮುನ್ನವೇ ಯಾರೊಂದಿಗೂ ಚರ್ಚಿಸದೆ ಉದ್ದೇಶಿತ ಮಹಾನಗರ ಪಾಲಿಕೆ ರಚನೆಗೆ ಸಂಬಂಧಿಸಿದ ಕರಡು ಪ್ರಸ್ತಾವದಲ್ಲಿ ಕಮಲಾಪುರ ಹೆಸರು ಸೇರಿಸುವುದು ಸರಿಯಲ್ಲ. ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಬದಲಿಸಿದರೆ ಸಾಕು. ಇದು ಬಹುವರ್ಷಗಳ ಬೇಡಿಕೆ. ಇದು ಮೊದಲು ಈಡೇರಬೇಕು ಎಂದು ಸಭೆಯಲ್ಲಿ ಪಾಲ್ಗೊಂಡವರು ಅಭಿಪ್ರಾಯಪಟ್ಟರು.

ADVERTISEMENT

ಒಂದುವೇಳೆ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಕಮಲಾಪುರ ಸೇರಿಸಿದರೆ ಕೃಷಿ ಮಾಡುವವರಿಗೆ ಬಹಳ ತೊಂದರೆಯಾಗುತ್ತದೆ. ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಹೆಚ್ಚಾಗುತ್ತವೆ. ಸಣ್ಣ ರೈತರು ಹಣದಾಸೆಗೆ ಕೃಷಿ ಜಮೀನು ಮಾರಾಟ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಫಲವತ್ತಾದ ಹಸಿರಿನಿಂದ ಕೂಡಿರುವ ಜಮೀನು ಕಾಂಕ್ರೀಟ್‌ ಕಾಡಾಗಿ ಬದಲಾಗಬಹುದು. ಅಲ್ಲದೇ ಎಲ್ಲ ರೀತಿಯ ತೆರಿಗೆ ಹೆಚ್ಚಾಗುತ್ತದೆ. ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪಟ್ಟಣ ನಿವಾಸಿಗಳ ಮೇಲೆ ತೆರಿಗೆ ಭಾರ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಪಾಲಿಕೆ ಕರಡು ರಚನೆ ಚುರುಕು’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಸೆಪ್ಟೆಂಬರ್‌ 9ರಂದು ವರದಿ ಪ್ರಕಟಿಸಿತ್ತು. ಪತ್ರಿಕೆಯ ವರದಿ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಸೋಮವಾರ ಸಭೆ ಸೇರಿ ಚರ್ಚಿಸಿದ್ದಾರೆ. ಸಭೆಯಲ್ಲಿ ಮುಖಂಡರಾದ ಮಾಳಗಿ ರಾಮಸ್ವಾಮಿ, ಡಾ.ಬಿ.ಆರ್.ಮಳಲಿ, ಖಾಜಾ ಹುಸೇನ್, ಕೊಟ್ಟಾಲ್ ವೀರೇಶ್, ಮಾಳಗಿ ವಿಶ್ವನಾಥ್, ಅಬ್ಬುಲ್ ಜಂತೆ, ಸುರೇಶ್ ಗೌಡ, ನಾಗಯ್ಯ, ಗುರುನಾಥ, ಹನುಮಂತ, ಭರಮಪ್ಪ ನಾಯಕ‌, ಸಣ್ಣೀರಪ್ಪ, ಗೋಪಾಲ ಶೆಟ್ಟಿ, ಮಲ್ಲಿಕಾರ್ಜುನ, ಹುಲುಗಪ್ಪ, ಪರಶುರಾಮ, ಕೊರವರ ಭೀಮಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.