ADVERTISEMENT

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 13:26 IST
Last Updated 4 ಜನವರಿ 2021, 13:26 IST
ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡರು ಸೋಮವಾರ ಹೊಸಪೇಟೆಯಲ್ಲಿ ಶಿರಸ್ತೇದಾರ ರಮೇಶ ಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡರು ಸೋಮವಾರ ಹೊಸಪೇಟೆಯಲ್ಲಿ ಶಿರಸ್ತೇದಾರ ರಮೇಶ ಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತಪಡಿಸಿರುವ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು, ವಿಭಜನೆಯ ನಿರ್ಧಾರವನ್ನು ಸರ್ಕಾರ ಕೈಬಿಟ್ಟು ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಒತ್ತಾಯಿಸಿದೆ.

ಈ ಸಂಬಂಧ ಸಮಿತಿಯ ಮುಖಂಡರು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ಸೋಮವಾರ ನಗರದಲ್ಲಿ ತಹಶೀಲ್ದಾರ್‌ಗೆ ಸಲ್ಲಿಸಿದರು.

ಬೆಳಗಾವಿ, ತುಮಕೂರು ಹಾಗೂ ಶಿವಮೊಗ್ಗ ಕೂಡ ದೊಡ್ಡ ಜಿಲ್ಲೆಗಳಾಗಿವೆ. ಆದರೆ, ಅವುಗಳ ವಿಭಜನೆ ಮಾಡುತ್ತಿಲ್ಲ. ಆದರೆ, ಬಳ್ಳಾರಿ ಜಿಲ್ಲೆಯೇಕೆ ವಿಭಜಿಸಲಾಗುತ್ತಿದೆ. ಕಾನೂನು ಪ್ರಕಾರ, ಜಲಾಶಯದ ಕೆಳಭಾಗದಲ್ಲಿ ನಗರ ನಿರ್ಮಿಸಬಾರದು. ಹೊಸಪೇಟೆ ಜಿಲ್ಲಾ ಕೇಂದ್ರವಾಗಿ ಬೆಳೆಯಲು ಸಾಕಷ್ಟು ಅಡೆತಡೆಗಳಿವೆ. ಒಂದು ಕಡೆ ಜಲಾಶಯ, ಇನ್ನೊಂದೆಡೆ ಬೆಟ್ಟಗುಡ್ಡ, ಮತ್ತೊಂದೆಡೆ ಹಂಪಿ ಇದೆ. ಯಾವುದೇ ಪೂರ್ವಾಪರ ಯೋಚಿಸದೆ ಜಿಲ್ಲೆ ವಿಭಜನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಸಮಿತಿಯ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಹಂಪಿಯನ್ನು ಬಳ್ಳಾರಿಯಿಂದ ಬೇರ್ಪಡಿಸಿದರೆ ಪ್ರವಾಸೋದ್ಯಮ, ಸ್ಥಳೀಯ ಸಾಹಿತಿಗಳು, ಕಲಾವಿದರಿಗೆ ತೊಂದರೆ ಉಂಟಾಗುತ್ತದೆ. ಜಿಲ್ಲೆ ವಿಭಜನೆಯಿಂದ ಜಲಾಶಯದ ಮೇಲ್ಮಟ್ಟದಲ್ಲಿ ನೀರಿನ ಬಳಕೆ ಹೆಚ್ಚಾಗಿ ಕಂಪ್ಲಿ, ಸಂಡೂರು, ಕುರುಗೋಡು, ಸಿರುಗುಪ್ಪ ಹಾಗೂ ಬಳ್ಳಾರಿಯ ರೈತರಿಗೆ ನೀರಿಗೆ ತೊಂದರೆಯಾಗಲಿದೆ. ಕೈಗಾರಿಕೆಗಳಿಗೂ ನೀರಿನ ಕೊರತೆಯಾಗಿ, ಬಳ್ಳಾರಿಯಲ್ಲಿ ಉದ್ಯೋಗಾವಕಾಶಗಳು ಕುಂಠಿತಗೊಳ್ಳಲು ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಮಿತಿಯ ಮುಖಂಡರಾದ ಕುಡುತಿನಿ ಶ್ರೀನಿವಾಸರಾವ್‌, ಪುರುಷೋತ್ತಮಗೌಡ, ಚಾನಾಳ್‌ ಶೇಖರ್‌, ಸಿದ್ಮಲ್‌ ಮಂಜುನಾಥ, ಬಂಡೇಗೌಡ, ಜಗದೀಶಕುಮಾರ್‌, ಗೋವಿಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.