ADVERTISEMENT

ಹೊರವರ್ತುಲ ರಸ್ತೆಯಲ್ಲಿ ಗುಂಡಿಗಳೇ ಗುಂಡಿ, ಎಲ್ಲೆಡೆ ದೂಳಿನ ಅಬ್ಬರ

ಅನಂತಶಯನಗುಡಿಯಿಂದ ಬಳ್ಳಾರಿ ರಸ್ತೆ ವರೆಗೆ ಸಂಪೂರ್ಣ ಹಾಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ನವೆಂಬರ್ 2018, 19:30 IST
Last Updated 25 ನವೆಂಬರ್ 2018, 19:30 IST
ಹೊಸಪೇಟೆಯ ಹೊರವರ್ತುಲ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸುತ್ತಿರುವುದು–ಪ್ರಜಾವಾಣಿ ಚಿತ್ರ
ಹೊಸಪೇಟೆಯ ಹೊರವರ್ತುಲ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸುತ್ತಿರುವುದು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಅನಂತಶಯನಗುಡಿಯಿಂದ ಬಳ್ಳಾರಿ ರಸ್ತೆ ವರೆಗೆ ಸಂಪರ್ಕ ಕಲ್ಪಿಸುವ ಹೊರವರ್ತುಲ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ನಿತ್ಯ ಪರದಾಟ ನಡೆಸುವಂತಾಗಿದೆ.

ದ್ವಿಪಥ ಹೊಂದಿರುವ ಹೊರವರ್ತುಲ ರಸ್ತೆಯ ಎರಡೂ ಕಡೆಗಳಲ್ಲಿ ಒಂದರಿಂದ ಎರಡು ಅಡಿ ಆಳದ ವರೆಗೆ ಗುಂಡಿಗಳು ಬಿದ್ದಿವೆ. ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿರುವುದರಿಂದ ಹಗಲು–ರಾತ್ರಿ ವಾಹನಗಳ ದಟ್ಟಣೆ ಇರುತ್ತದೆ. ರಸ್ತೆ ಹಾಳಾಗಿರುವುದರಿಂದ ಸದಾ ದೂಳು ಆವರಿಸಿಕೊಂಡಿರುತ್ತದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನಗಳು ಅಪಘಾತಕ್ಕೆ ಈಡಾಗುತ್ತಿವೆ.

ಸ್ವಲ್ಪ ಮಳೆ ಬಂದರೂ ರಸ್ತೆ ತುಂಬೆಲ್ಲ ನೀರು ನಿಂತುಕೊಳ್ಳುತ್ತದೆ. ಒಳ್ಳೆಯ ರಸ್ತೆ ಯಾವುದು, ಗುಂಡಿಗಳು ಎಲ್ಲಿವೆ ಎನ್ನುವುದೇ ಗೊತ್ತಾಗುವುದಿಲ್ಲ. ಇದರಿಂದಾಗಿ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ADVERTISEMENT

ವಿದ್ಯುದ್ದೀಪಗಳು ಹಾಳಾಗಿ ತಿಂಗಳುಗಳೇ ಕಳೆದರೂ ಅವುಗಳನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಕತ್ತಲಲ್ಲಿ ಈ ರಸ್ತೆಯಲ್ಲಿ ವಾಹನ ಓಡಿಸುವುದೇ ಸವಾಲಿನ ಕೆಲಸವಾಗಿ ಮಾರ್ಪಟ್ಟಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಇದೆ.
‘ಕಾಮಗಾರಿ ಕೈಗೊಂಡಾಗಲೇ ಅಪಸ್ವರ ಕೇಳಿ ಬಂದಿತ್ತು. ಗುಣಮಟ್ಟಕ್ಕೆ ಆದ್ಯತೆ ಕೊಟ್ಟಿಲ್ಲ ಎಂದು ದೂರುಗಳು ಬಂದಿದ್ದವು. ಈ ಕುರಿತು ನಗರಸಭೆಗೆ ತಿಳಿಸಿದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದುವೇಳೆ ಆಗ ಗುಣಮಟ್ಟಕ್ಕೆ ಒತ್ತು ಕೊಟ್ಟಿದ್ದರೆ ನಿರ್ಮಿಸಿದ ನಾಲ್ಕೈದು ವರ್ಷಗಳಲ್ಲೇ ರಸ್ತೆ ಹಾಳಾಗುತ್ತಿರಲಿಲ್ಲ’ ಎನ್ನುತ್ತಾರೆ ವಿದ್ಯಾರ್ಥಿ ಮುಖಂಡ ಬಿಸಾಟಿ ಮಹೇಶ್‌.

‘ಬಳ್ಳಾರಿ ರಸ್ತೆಯಲ್ಲಿ ಹಲವು ಶಾಲಾ, ಕಾಲೇಜುಗಳಿವೆ. ಅನೇಕ ವಿದ್ಯಾರ್ಥಿಗಳು ಬಸ್ಸಿನಲ್ಲಿ ಶಾಲೆಗಳಿಗೆ ಹೋಗುತ್ತಾರೆ. ಗುಂಡಿಗಳಿಂದ ಕೆಲ ವಿದ್ಯಾರ್ಥಿಗಳು ಬಸ್ಸಿನಲ್ಲೇ ಗಾಯಗೊಂಡಿದ್ದಾರೆ. ಇನ್ನು ಕೆಲ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಹೊಸದಾಗಿ ರಸ್ತೆ ನಿರ್ಮಿಸುವವರೆಗೆ ಕನಿಷ್ಠ ಗುಂಡಿಗಳನ್ನಾದರೂ ಮುಚ್ಚುವ ಕೆಲಸ ನಗರಸಭೆ ಮಾಡಬೇಕು’ ಎಂದು ಟೀಕಿಸಿದರು.

‘ಈ ಕುರಿತು ಈಗಾಗಲೇ ನಗರಸಭೆಯ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೊಮ್ಮೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುವ ಕೆಲಸ ಮಾಡಲಾಗುವುದು. ಬಳಿಕ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

‘ಬಳ್ಳಾರಿ ರಸ್ತೆಯಲ್ಲಿ ಅದಿರು ಸಾಗಣೆ, ಸರಕು ಸಾಗಿಸುವ ಭಾರಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಇದು ಗೊತ್ತಿದ್ದು ಗುಣಮಟ್ಟದ ರಸ್ತೆ ನಿರ್ಮಿಸಿಲ್ಲ. ಹೀಗಾಗಿ ಇಡೀ ರಸ್ತೆ ಹಾಳಾಗಿದೆ. ಜನಸಾಮಾನ್ಯರಿಗೆ ಓಡಾಡಲು ಬಹಳ ತೊಂದರೆಯಾಗುತ್ತಿದೆ. ಸ್ವಲ್ಪ ಎಡವಿದರೂ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಇದೆ’ ಎನ್ನುತ್ತಾರೆ ಆಟೊ ಯೂನಿಯನ್‌ ಮುಖಂಡ ಕೆ.ಎಂ. ಸಂತೋಷ್‌ ಕುಮಾರ್‌.

‘ಬಳ್ಳಾರಿ ರಸ್ತೆಯಿಂದ ಹುಬ್ಬಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್‌ ನಿರ್ಮಾಣ ಕಾಮಗಾರಿ ಬಹಳ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಅದು ಪೂರ್ಣಗೊಳ್ಳುವವರೆಗೆ ವಾಹನಗಳು ಹೊರವರ್ತುಲ ರಸ್ತೆಯಿಂದಲೇ ಓಡಾಡುತ್ತವೆ. ಅನ್ಯ ಮಾರ್ಗವಿಲ್ಲ. ಮೊದಲು ಗುಂಡಿಗಳನ್ನು ಮುಚ್ಚಬೇಕು. ನಂತರ ಹೊಸದಾಗಿ ರಸ್ತೆ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.