ADVERTISEMENT

‘ಪಹಲ್ಗಾಮ್ ಪ್ರಕರಣ: ಮುನ್ನೆಚ್ಚರಿಕೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 4 ಮೇ 2025, 14:52 IST
Last Updated 4 ಮೇ 2025, 14:52 IST
ಬಸವರಾಜ ಹೊರಟ್ಟಿ 
ಬಸವರಾಜ ಹೊರಟ್ಟಿ    

ಕಂಪ್ಲಿ: ‘ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಕೃತ್ಯ ಅಮಾನವೀಯ. ಇಂಥ ಘಟನೆ ಮರುಕಳಿಸಿದಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,‘ಪಹಲ್ಗಾಮ್ ವಿಚಾರದಲ್ಲಿ ರಾಜಕೀಯ ಸಲ್ಲದು’ ಎಂದರು.

‘ಪ್ರವೇಶ ಪರೀಕ್ಷೆಗಳಲ್ಲಿ ಜನಿವಾರ, ತಾಳಿ ತೆಗೆಸೋದು ತಪ್ಪು. ಪರೀಕ್ಷೆ ಸಂದರ್ಭದಲ್ಲಿ ನಕಲು ಮಾಡಿದವರನ್ನು ಡಿಬಾರ್ ಮಾಡಿ ಪರೀಕ್ಷೆಗಳ ಪಾವಿತ್ರ್ಯತೆ ಕಾಪಾಡಿ’ ಎಂದು ತಿಳಿಸಿದರು.

ADVERTISEMENT

‘ಪ್ರಸ್ತುತ ರಾಜಕೀಯ ರಂಗದಲ್ಲಿ ನೈತಿಕತೆ ಉಳಿದಿಲ್ಲ. ಹಣದ ಮೇಲೆ ರಾಜಕೀಯ ನಡೆಯುತ್ತಿದೆ. ಇಂದು ಮತಕ್ಕಾಗಿ ಹಣ ಕೊಡುವುದು, ಅದನ್ನು ಪಡೆದು ಮತ ಹಾಕೋದು ಮುಂದುವರಿದಿದೆ. ಈ ವ್ಯವಸ್ಥೆ ಬದಲಾಗುವವರೆಗೂ ಅಭಿವೃದ್ಧಿ ಅಸಾಧ್ಯ. ಇದು ಒಂದು ರೀತಿಯಲ್ಲಿ ಕುದುರೆ ವ್ಯಾಪಾರ’ ಎಂದು ಹೇಳಿದರು.

‘ಎಂ.ಪಿ. ಪ್ರಕಾಶ ಅವರು ಎಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಚುನಾವಣೆಯಲ್ಲಿ ಸೋತರು. ಇದಕ್ಕೆ ಜಾತಿ ಹಾಗೂ ದುಡ್ಡೇ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.

18 ಜನ ಶಾಸಕರ ಅಮಾನತು ವಿಚಾರದ ಕುರಿತು ಪ್ರತಿಕ್ರಿಯಿಸಿ, ‘ಸಭಾಧ್ಯಕ್ಷರಿಗೆ ತಮ್ಮದೇ ಆದ ಗೌರವವಿರುತ್ತದೆ. ಸದನದಲ್ಲಿ ಪ್ರಶ್ನಿಸುವಾಗ ಬೆರಳೆತ್ತುವುದು, ಸಭಾಧ್ಯಕ್ಷರ ಮೇಲೆ ಪೇಪರ್ ಹರಿದು ಎಸೆಯುವುದು ತಪ್ಪಲ್ಲವೇ, ನಾನು ಆ ಸ್ಥಾನದಲ್ಲಿದ್ದರೂ ಇದನ್ನೇ ಮಾಡುತ್ತಿದ್ದೆ. ವಿಧಾನಪರಿಷತ್, ವಿಧಾನಸಭೆಯಲ್ಲಿ ಶಿಸ್ತು ಪಾಲಿಸಬೇಕು’ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷರಾದ ಭಟ್ಟ ಪ್ರಸಾದ್, ಸದಸ್ಯರಾದ ಕೆ.ಎಸ್. ಚಾಂದ್ ಬಾಷಾ, ಮುಖಂಡರಾದ ಧಾರವಾಡ ಬಸವರಾಜ, ಬಿ. ಸಿದ್ದಪ್ಪ, ಕೆ.ಎಸ್. ಶಾರುಖ್, ಆದಿ ಶೇಷ, ವೆಂಕಟರಮಣ, ನಾಗೇಂದ್ರ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.