
ಬಳ್ಳಾರಿ: ಆಡಳಿತ ವ್ಯವಸ್ಥೆಯಲ್ಲಿನ ಅಕ್ರಮ, ಭ್ರಷ್ಟಾಚಾರಗಳ ಮೇಲೆ ಕಣ್ಣಿಡಬೇಕಾಗಿದ್ದ, ಅಧಿಕಾರಿಗಳಿಗೆ ಕಾಲ ಕಾಲಕ್ಕೆ ಚುರುಕು ಮುಟ್ಟಿಸಬೇಕಾಗಿದ್ದ ಲೋಕಾಯುಕ್ತ ಸಂಸ್ಥೆ ಬಳ್ಳಾರಿಯಲ್ಲಿ ಕಳೆದೊಂದು ವರ್ಷದಿಂದ ಸದ್ದಿಲ್ಲದಂತಾಗಿದೆ. ಸದ್ಯ ನಾವಿಕನಿಲ್ಲದ ನಾವೆಯಂತಾಗಿದೆ.
ಪೂರ್ಣಕಾಲಿಕ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ)ಗಳು ಬಾರದೇ ಅದಾಗಲೇ ಸಂಸ್ಥೆ ಸೊರಗಿತ್ತು. ಈಗ ಎಸ್‌ಪಿಯೇ ಇಲ್ಲದಂತಾಗಿದೆ. ಹೀಗಾಗಿ ಹೊಸ ದಾಳಿಗಳೂ ನಡೆಯುತ್ತಿಲ್ಲ. ಜತೆಗೆ, ಹಿಂದಿನ ಪ್ರಕರಣಗಳ ತನಿಖೆಯೂ ಹಳ್ಳ ಹಿಡಿಯುವ ಆತಂಕ ಎದುರಾಗಿದೆ.
ಬಳ್ಳಾರಿಗೂ ಲೋಕಾಯುಕ್ತ ಸಂಸ್ಥೆಗೂ ಬಹುದೊಡ್ಡ ನಂಟಿದೆ. ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳೆದಿದ್ದ ಅಕ್ರಮ ಗಣಿಗಾರಿಕೆಗೆ ಅಂತ್ಯಹಾಡಲು ಕಾರಣವಾಗಿದ್ದೇ ಲೋಕಾಯುಕ್ತ ಸಂಸ್ಥೆ.
ಬಳ್ಳಾರಿ ಮಟ್ಟಿಗೆ ಕಳೆದ ಮೂರು ವರ್ಷಗಳ ಪ್ರಕರಣ ಅಂಕಿ ಸಂಖ್ಯೆಗಳು ಹೀಗಿವೆ; 2023ರಲ್ಲಿ 9 ಪ್ರಕರಣಗಳು ದಾಖಲಾಗಿದ್ದವು. 2024ರಲ್ಲಿ 7 ಪ್ರಕರಣಗಳು ದಾಖಲಾಗಿದವು. 2025ರಲ್ಲಿ ದಾಖಲಾಗಿದ್ದು 5 ಪ್ರಕರಣ. 2025ರ ಪ್ರಕರಣ ಸಂಖ್ಯೆ 4 ಮತ್ತು ಪ್ರಕರಣ ಸಂಖ್ಯೆ 5ರ ನಡುವಿನ ಅಂತರ ಕನಿಷ್ಠ 4 ತಿಂಗಳು.
2024 ಮತ್ತು 2025ರ ಜುಲೈ ನಡುವಿನ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆ ಜಿಲ್ಲೆಯಲ್ಲಿ ಸದಾ ಸುದ್ದಿಯಲ್ಲಿತ್ತು. ಕೇವಲ 6 ತಿಂಗಳಲ್ಲಿ ಐವರು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದ ಹಿಂದಿನ ಎಸ್‌ಪಿ ಸಿದ್ದರಾಜು ಅವರು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದರು. 2025ರ ಜುಲೈನಲ್ಲಿ ಸಿದ್ದರಾಜು ವರ್ಗಾವಣೆಗೊಂಡರು. ಅದಾದ ಬಳಿಕ ಚಿತ್ರದುರ್ಗ ಎಸ್‌ಪಿಗೆ ಹೆಚ್ಚುವರಿ ಹೊಣೆ ಹೊರಿಸಲಾಯಿತು. ಬಳಿಕ ಐಪಿಎಸ್ ಅಧಿಕಾರಿ ಪವನ್ ನೆಜ್ಜೂರ್ ಎಸ್‌ಪಿಯಾಗಿ ಬಂದರಾದರೂ, ಸಂಸ್ಥೆ ಅಷ್ಟೇನೂ ಸದ್ದು ಮಾಡಲೇ ಇಲ್ಲ.
2025ರ ಡಿಸೆಂಬರ್ ಕೊನೇ ದಿನ ಪವನ್ ನೆಜ್ಜೂರ್ ಅವರು ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡರು. ಮರುದಿನ ಅಮಾನತುಗೊಂಡರು. ಸರ್ಕಾರ ಎಸ್‌ಪಿ ಜಾಗಕ್ಕೆ ಬೇರೊಬ್ಬ ಅಧಿಕಾರಿಯನ್ನೇನೋ ಹಾಕಿದೆ. ಆದರೆ, ಲೋಕಾಯುಕ್ತ ಪೊಲೀಸ್ ಇಲಾಖೆಗೆ ಹೊಸ ಎಸ್‌ಪಿ ಬಂದೇ ಇಲ್ಲ. ಇದರೊಂದಿಗೆ, ಅದಾಗಲೇ ಜಡ್ಡುಗಟ್ಟಿದ್ದ ಸಂಸ್ಥೆಗೆ ಇನ್ನಷ್ಟು ಹಿನ್ನಡೆಯಾಗಿದೆ.
ಹಿಂದಿನ ವರ್ಷಗಳಲ್ಲಿ ಬಳ್ಳಾರಿ ಲೋಕಾಯುಕ್ತ ಸಂಸ್ಥೆಯು ಜಿಲ್ಲೆಯ ಉನ್ನತ ಅಧಿಕಾರಿಗಳಿಗೇ ಬಿಸಿ ಮುಟ್ಟಿಸಿದೆ. ಸರ್ಕಾರಿ ಜಮೀನು ವರ್ಗಾವಣೆಯಲ್ಲಿ ನಡೆದಿದ್ದ ಅಕ್ರಮದಲ್ಲಿ ಬಳ್ಳಾರಿಯ ಈ ಹಿಂದಿನ ತಹಶೀಲ್ದಾರ್ ವಿರುದ್ಧ, ಸಿರುಗುಪ್ಪದಲ್ಲಿ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಅವರ ವಿರುದ್ಧ, ಬಳ್ಳಾರಿಯ ಉಪ ವಿಭಾಗಾಧಿಕಾರಿ (ಎಸಿ) ವಿರುದ್ಧ ಈ ಹಿಂದಿನ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಪ್ರಕರಣ ದಾಖಲಿಸಿದ್ದರು. ಈ ಕಾರಣಕ್ಕೆ ಇಬ್ಬರು ತಹಶೀಲ್ದಾರರು ಅಮಾನತುಗೊಂಡರೆ, ಎಸಿ ಪ್ರಮೋದ್ ವರ್ಗಾವಣೆಗೊಂಡಿದ್ದರು.
ಜ. 1ರಂದು ಬಳ್ಳಾರಿ ನಗರದಲ್ಲಿ ನಡೆದ ಗಲಭೆ ಪ್ರಕರಣವು ಜಿಲ್ಲೆಯಲ್ಲಿ ಕಾರ್ಯಾಂಗದ ಕಾರ್ಯನಿರ್ವಹಣೆಯ ಕುರಿತು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ’ಗಲಭೆಗೆ ಕಾರ್ಯಾಂಗದ ವೈಫಲ್ಯವೇ ಕಾರಣ’ ಎಂದು ಸ್ವತಃ ಬಳ್ಳಾರಿ ಸಂಸದ ಇ. ತುಕಾರಾಂ ಅವರು ಮಾಧ್ಯಮಗಳಿಗೆ ಹೇಳಿದ್ದರು. ಹೀಗಿರುವ ಜಿಲ್ಲೆಗೆ ದಕ್ಷ ಲೋಕಾಯುಕ್ತ ಎಸ್‌ಪಿಯೊಬ್ಬರ ಅಗತ್ಯವಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ.
ಕಳೆದ ವರ್ಷ ಕೇವಲ ಒಂದೇ ಒಂದು ದಾಳಿ ಸಂಘಟಿಸಿರುವುದು ಬಳ್ಳಾರಿ ಲೋಕಾಯುಕ್ತ ಸಂಸ್ಥೆಯ ಶೋಚನೀಯ ಸ್ಥಿತಿಯನ್ನು ಎತ್ತಿತೋರಿಸುತ್ತಿರುವುದು ನಿಜ. ಈ ಕುರಿತು ಶುಕ್ರವಾರ ನಡೆದ ಕಲಬುರಗಿ ವಿಭಾಗದ ಸಭೆಯಲ್ಲಿ ಪರಾಮರ್ಶೆಯನ್ನೂ ಮಾಡಿದ್ದೇವೆ. ಎಸ್‌ಪಿಯನ್ನು ನಿಯೋಜಿಸಿವುದು ರಿಜಿಸ್ಟ್ರಾರ್ ಅವರಿಗೆ ಸಂಬಂಧಿಸಿದ್ದು. ಆದರೂ ನಾವೂ ಕೂಡ ಈ ವಿಷಯವನ್ನು ಅವರ ಗಮನಕ್ಕೆ ತರುತ್ತೇವೆ. ಎಸ್‌ಪಿ ನಿಯೋಜಿಸಲು ಕೂಡಲೇ ಕ್ರಮ ಕೈಗೊಳ್ಳಲು ಶಿಫಾರಸು ಮಾಡುತ್ತೇವೆ.
– ಸುಬ್ರಹ್ಮಣ್ಯೇಶ್ವರ ರಾವ್, ಲೋಕಾಯುಕ್ತ ಐಜಿಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.