ADVERTISEMENT

ಫಲಿತಾಂಶ ಪ್ರಕಟ; ಇಬ್ಬರು ಅವಿರೋಧ ಆಯ್ಕೆ

ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:37 IST
Last Updated 31 ಜುಲೈ 2019, 14:37 IST
ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಬೆಂಬಲಿಗರೊಂದಿಗೆ ಸಂಭ್ರಮಿಸಿದರು
ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಬೆಂಬಲಿಗರೊಂದಿಗೆ ಸಂಭ್ರಮಿಸಿದರು   

ಹೊಸಪೇಟೆ: ತಾಲ್ಲೂಕಿನ ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಬುಧವಾರ ಹೊರಬಿದ್ದಿದ್ದು, ಒಟ್ಟು ಎಂಟು ಸ್ಥಾನಗಳ ಪೈಕಿ ಆರಕ್ಕೆ ಮತದಾನ ನಡೆದಿತ್ತು.

ಎರಡು ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪಂಚಾಯಿತಿ ವ್ಯಾಪ್ತಿಗೆ ಸೀತಾರಾಮ ತಾಂಡದ ನಾಲ್ಕು, ನಲ್ಲಾಪುರದ ಮೂರು ಹಾಗೂ ಹೊಸ ಚಿನ್ನಾಪುರದ ಒಂದು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ನಲ್ಲಾಪುರದ ಎಸ್ಸಿ ಮೀಸಲು ಸ್ಥಾನಕ್ಕೆ ಹರಿಜನ ಹನುಮಕ್ಕ, ನಲ್ಲಾಪುರದ ಎಸ್ಟಿ ಮೀಸಲಿನಿಂದ ಎನ್‌. ಲಕ್ಷ್ಮಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ನಲ್ಲಾಪುರದ ಸಾಮಾನ್ಯ ಕ್ಷೇತ್ರದಿಂದ ಯರಿಸ್ವಾಮಿ ಕುರುಬರ, ಹೊಸಚಿನ್ನಾಪುರ ಸಾಮಾನ್ಯ ಸ್ಥಾನಕ್ಕೆ ಹುಲುಗಪ್ಪ ಹನುಮಂತಪ್ಪ ಹೆಚ್ಚು ಮತ ಪಡೆದು ಆಯ್ಕೆಯಾಗಿದ್ದಾರೆ.

ADVERTISEMENT

ಸೀತಾರಾಮ ತಾಂಡದ ನಾಲ್ಕು ಸ್ಥಾನಗಳಿಗೆ ವಿ. ನೇತ್ರಾಬಾಯಿ, ಸರೋಜ ಕೃಷ್ಣ ನಾಯ್ಕ, ಎಲ್‌. ಭಾಗ್ಯಮ್ಮ ಹಾಗೂ ಗೋವಿಂದ ನಾಯ್ಕ ಹೆಚ್ಚಿನ ಮತ ಗಳಿಸಿ ಚುನಾಯಿತರಾಗಿದ್ದಾರೆ. ಆರು ಸ್ಥಾನಗಳಿಗೆ ಒಟ್ಟು 14 ಜನ ಕಣದಲ್ಲಿದ್ದರು. ಭಾನುವಾರ ಮತದಾನ ನಡೆದಿತ್ತು.

ಫಲಿತಾಂಶ ಹೊರಬಿದ್ದ ಕೂಡಲೇ ಆಯಾ ಸದಸ್ಯರ ಬೆಂಬಲಿಗರು ತಾಲ್ಲೂಕು ಕಚೇರಿ ಎದುರು ಸಂಭ್ರಮಿಸಿದರು. ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಗೆದ್ದ ಸದಸ್ಯರು ಮತ ಎಣಿಕೆ ಕೇಂದ್ರದಿಂದ ಹೊರಬರುತ್ತಿದ್ದಂತೆ ಮಾಲಾರ್ಪಣೆ ಮಾಡಿ, ಸ್ವಾಗತಿಸಿದರು. ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಸಂದೀಪ್‌ ಸಿಂಗ್‌ ಅವರು ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.