
ಹರಪನಹಳ್ಳಿ: ನಗರದ ಗೌಳೇರ ಓಣಿ, ಗೋವೆರಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಗೌಳಿಗರು ಎಮ್ಮೆ ಬೆದರಿಸುವ ಸ್ಪರ್ಧೆ ಮೂಲಕ ಗುರುವಾರ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದರು.
ಪಾಂಡವರು 14 ವರ್ಷ ವನವಾಸ ಮುಗಿಸಿ ಕೌರವರಿಗೆ ಒಂದು ವರ್ಷ ಸಿಗದಂತೆ ವಿರಾಟರಾಜನ ಅರಮನೆಯಲ್ಲಿ ದನ ಕಾಯುತ್ತಾ, ಸಗಣಿ ಹೋರುತ್ತಾರೆ. ಇದರ ನೆನಪಿಗಾಗಿ ಗೌಳಿಗರು ಆಚರಿಸುವ ಪಾಂಡವರ ಹಬ್ಬ ದೀಪಾವಳಿಯಲ್ಲಿ ಗಮನ ಸೆಳೆಯುತ್ತದೆ. ಗೌಳಿಗರ ಮನೆಗಳಲ್ಲಿ ದಸರಾ ಹಬ್ಬದ ದಿನ ಅರಿಶಿಣದ ಘಟ ಸ್ಥಾಪಿಸುವ ಮೂಲಕ ಪಾಂಡವರ ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಅಮವಾಸ್ಯೆ ದಿನ ಎಮ್ಮೆಗಳಿಗೆ ಮಜ್ಜನ ಮಾಡಿಸಿ, ಮರುದಿನ ಎಮ್ಮೆಗಳಿಗೆ ಅರಿಸಿಣ, ನವಿಲುಗರಿ, ಕೊರಳಗೆಜ್ಜೆ, ಮುತ್ತಿನಹಾರ, ಕುಂಕುಮ ಲೇಪಿಸಿದಾಗ ಹಬ್ಬ ರಂಗೇರುತ್ತದೆ.
‘ಹೊಸ ಕಟ್ಟಿಗೆಯ ಎರಡು ತುಂಡುಗಳನ್ನು ತಂದು ಎಮ್ಮೆ ಕಟ್ಟುವ ಕೊಟ್ಟಿಗೆಯಲ್ಲಿ ನೆಟ್ಟು, ಸಗಣಿಯಿಂದ ತಯಾರಿಸಿದ ಪಾಂಡವರ ಘಟ್ಟದ ಎದುರು ಸ್ಥಾಪಿಸಿದ ಒಲೆಯ ಮೇಲೆ ಹೊಸ ಮಡಕೆಯಲ್ಲಿ ಸ್ಯಾವಿಗೆ, ಹಾಲು, ತುಪ್ಪ ಹಾಕಿ ಬೇಯಿಸುತ್ತೇವೆ. ಒಲೆಯ ಮೇಲೆ ಹಾಲು ಉಕ್ಕುತ್ತಿದ್ದಂತೆಯೇ ಆ ಬೆಂಕಿಯಲ್ಲಿ ಕಾದು ಕೆಂಡವಾಗಿರುವ ಸಲಾಕೆಯಿಂದ ಎಮ್ಮೆಗಳಿಗೆ ಗುಲ್ (ಮುದ್ರೆ) ಹಾಕುತ್ತೇವೆ. ದನ ಕಾಯುವ ವ್ಯಕ್ತಿ ಪಾಂಡವರ ಎಡೆಗೆ ಆರತಿ ಬೆಳಗಿದ ಬಳಿಕ ಎಮ್ಮೆ ಬೆದರಿಸಲಾಗುವುದು’ ಎಂದು ಗೌಳಿಗರ ಹಿರಿಯರಾದ ಸಾವಿತ್ರಮ್ಮ ತಿಳಿಸಿದರು.
ಪುರಸಭೆ ಸದಸ್ಯ ಗೌಳಿ ವಿನಯ್ ಕುಮಾರ ಮಾತನಾಡಿ, ನಗರ ಪ್ರದೇಶ ಹಾಗೂ ಗೋವೆರಹಳ್ಳಿಯಲ್ಲಿ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿರುವ ಗೌಳಿಗರ ನೂರಾರು ಕುಟುಂಬಗಳು ಹಾಲುಮಾರಿ ಜೀವನ ಕಂಡುಕೊಂಡಿದ್ದು, ಸರ್ಕಾರ ಗುರುತಿಸಬೇಕು ಎಂದು ಒತ್ತಾಯಿಸಿದರು.
ವರ್ಷದ 365 ದಿನವೂ ಎಮ್ಮೆಗಳ ಪಾಲನೆ, ಪೋಷಣೆ ಮಾಡಿದ ವ್ಯಕ್ತಿಯನ್ನೇ ಎಮ್ಮೆಗಳು ಹಿಂಬಾಲಿಸುತ್ತವೆ. ಮಧ್ಯೆ ಕೆಲವರು ಪಟಾಕಿ ಸಿಡಿಸುತ್ತಾರೆ. ಇನ್ನೂ ಕೆಲವರು ಮಾಲೀಕನ ಮೇಲಿನ ಎಮ್ಮೆ ದೃಷ್ಟಿ ತಪ್ಪಿಸಲು ಆತನನ್ನೆ ಬಚ್ಚಿಡಲು ಮುಂದಾಗುತ್ತಾರೆ, ಆದರೆ ಆತನ ಶೈಲಿಯಲ್ಲಿಯೇ ಎಮ್ಮೆಯ ಗಮನ ಸೆಳೆಯುಲು ಯತ್ನಿಸುತ್ತಾರೆ. ಆದರೆ ಎಮ್ಮೆಗಳು ಮಾತ್ರ ಮಾಲೀಕನ ಕಂಠದಿಂದ ಹೊರಹೊಮ್ಮುವ ಧ್ವನಿಯನ್ನೆ ಹಿಂಬಾಲಿಸುತ್ತವೆ.
ಚಿನ್ನಾಭರಣ, ಬಟ್ಟೆ ಅಂಗಡಿಯೊಳಗೆ ಹೋದರೆ, ಅವು ಸಹ ಆತನನ್ನೆ ಹಿಂಬಾಲಿಸುತ್ತವೆ. ಯಾವುದೇ ಅಪಾಯ ಮಾಡದೇ ಸುರಕ್ಷಿತವಾಗಿ ಹೊರಗಡೆ ಬರುತ್ತವೆ. ಒಂದು ಎಮ್ಮೆಗೆ ಕಣ್ಣಿಗೆ ಬಟ್ಟೆ ಕಟ್ಟುತ್ತಾರೆ, ಮಾಲಕ ದೂರ ನಿಂತು ಚಪ್ಪಾಳೆ ತಟ್ಟಿ, ಕೌ ಎನ್ನುತ್ತಿದ್ದಂತೆ ಎಮ್ಮೆ ಆತನಲ್ಲಿರುವಲ್ಲಿಗೆ ತೆರಳಿ ನೆರೆದವರಿಂದ ಚಪ್ಪಾಳೆ ಗಿಟ್ಟಿಸಿತು. ಒಬ್ಬ ಯುವಕ ತನ್ನ ಬೈಕ್ ಮೇಲೆ ಮಾಲೀಕನನ್ನು ಕೂರಿಸಿಕೊಂಡು ಜೋರಾಗಿ ಬೈಕ್ ಓಡಿಸುತ್ತಾನೆ, ಬೈಕ್ ಹಿಂದೆಯೇ ಓಡುವ ಎಮ್ಮೆಗಳು ಮಾಲೀಕನ ಮೇಲಿನ ಪ್ರೀತಿ ಸೋರಿಸುವ ದೃಶ್ಯ ರೋಮಾಂಚನಗೊಳಿಸಿತು. ಹೀಗೆ ವಿಶಿಷ್ಟ ಶೈಲಿಯಲ್ಲಿ ಎಮ್ಮೆಗಳ ಓಡಾಟ ವೀಕ್ಷಿಸಲು ನೂರಾರು ಜನರು ನೆರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.