ADVERTISEMENT

‘ಜಾತಿ, ಮತದಿಂದ ಮನುಷ್ಯ ಹೊರಬರಲಿ’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 13:19 IST
Last Updated 29 ಡಿಸೆಂಬರ್ 2019, 13:19 IST
ಹೊಸಪೇಟೆಯಲ್ಲಿ ಭಾನುವಾರ ನಡೆದ ವಿಶ್ವಮಾನವ ಜಯಂತಿಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು
ಹೊಸಪೇಟೆಯಲ್ಲಿ ಭಾನುವಾರ ನಡೆದ ವಿಶ್ವಮಾನವ ಜಯಂತಿಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು   

ಹೊಸಪೇಟೆ: ‘ಜಾತಿ, ಮತ ಜನಾಂಗಗಳಿಂದ ಮನುಷ್ಯ ಹೊರಬರಬೇಕಿದೆ’ ಎಂದು ಕಲಬುರ್ಗಿ ಕೇಂದ್ರಿಯ ವಿದ್ಯಾಲಯದ ಅಳವಿನಂಚಿನ ಭಾಷೆಗಳ ಅಧ್ಯಯನ ಕೇಂದ್ರದ ಯೋಜನಾ ಸಂಯೋಜಕ ಪ್ರೊ.ಚೆ.ರಾಮಸ್ವಾಮಿ ಹೇಳಿದರು.

ಭಾನುವಾರ ನಗರದಲ್ಲಿ ತಾಲ್ಲೂಕು ಆಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಸ್ಥಳೀಯ ಚೇತನ ಸಾಹಿತ್ಯ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಅವರ 116ನೇ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಮುಖ್ಯ ಉಪನ್ಯಾಸ ನೀಡಿದರು.

‘ಬದುಕಿನ ನಿಯಮಗಳೆ ಧರ್ಮ ಎಂಬುದು ಎಲ್ಲರೂ ತಿಳಿಯಬೇಕು. ಯಾವುದೇ ನಿಯಮಗಳನ್ನು ಮೀರಿದಾಗ ಅದು ಅಧರ್ಮವೆನಿಸುತ್ತದೆ. ಕುವೆಂಪು ಅವರು ಮಹಾವೀರ, ಗೌತಮ ಬುದ್ದ, ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿ ಅವರದೇ ಆದ ದೃಷ್ಟಿಕೋನದಲ್ಲಿ ಚಿಂತನೆಗಳನ್ನು ಬಿತ್ತಿದವರು’ ಎಂದು ಹೇಳಿದರು.

ADVERTISEMENT

‘ಮಗು ಹುಟ್ಟಿದಾಗ ಅದು ವಿಶ್ವಮಾನವನಾಗಿರುತ್ತದೆ. ಆದರೆ, ತಾಯಿ ಮಗುವನ್ನು ಹೇಗೆ ಬೆಳೆಸುತ್ತಾಳೆ ಎಂಬುದರ ಮೇಲೆ ಮಗುವಿನ ಭವಿಷ್ಯ ನಿಂತಿರುತ್ತದೆ. ಮಕ್ಕಳು ತಪ್ಪು ಮಾಡಿದಾಗ ತಪ್ಪೆಂದು ಗುರುತಿಸಿ ತಿಳಿ ಹೇಳದಿದ್ದರೆ ಸಮಾಜಕ್ಕೆ ಕಂಟಕರಾಗುತ್ತಾರೆ. ಮನೆತನ, ಸಮಾಜ ಹಾಗೂ ವ್ಯವಸ್ಥೆ ಸರಿಯಿದ್ದರೆ ಬದುಕು ಬದಲಾಗುತ್ತದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಡಾ.ಯತ್ನಳ್ಳಿ ಮಲ್ಲಯ್ಯ, ರಂಗಪ್ರಕಾಶ ಸಂಸ್ಥೆ ಅಧ್ಯಕ್ಷ ಟಿ.ಎಂ.ನಾಗಭೂಷಣ, ಎಚ್‌.ಎಂ. ಜಂಬುನಾಥ, ವಿಜಯನಗರ ಬರಹಗಾರರ ವೇದಿಕೆ ಅಧ್ಯಕ್ಷೆ ಡಾ.ಎಸ್.ಡಿ.ಸುಲೋಚನ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಟಿ.ಯಮುನಪ್ಪ, ಕರ್ನಾಟಕ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷೆ ಅಂಜಲಿ ಬೆಳಗಲ್, ಭಾರತ ಜ್ಷಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಎಚ್‌.ಸೌಭಾಗ್ಯಲಕ್ಷ್ಮಿ, ತಹಶೀಲ್ದಾರ್ ಎಚ್.ವಿಶ್ವನಾಥ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ಕೆ. ಶ್ರೀಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಷಿ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮವನ್ನು ಮೊಟಕುಗೊಳಿಸಿ ಉಪನ್ಯಾಸಕ್ಕಷ್ಟೇ ಸೀಮಿತಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.