ADVERTISEMENT

‘ಉತ್ಸವದ ಮೇಲೆ ಪೊಲೀಸ್‌ ಹದ್ದಿನ ಕಣ್ಣು’

97 ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ; ಫ್ಲೆಕ್ಸ್‌ಗೆ ಅನುಮತಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2019, 13:38 IST
Last Updated 2 ಸೆಪ್ಟೆಂಬರ್ 2019, 13:38 IST
ವಿ. ರಘುಕುಮಾರ, ಡಿ.ವೈ.ಎಸ್ಪಿ.
ವಿ. ರಘುಕುಮಾರ, ಡಿ.ವೈ.ಎಸ್ಪಿ.   

ಹೊಸಪೇಟೆ: ‘ಗಣೇಶ ಉತ್ಸವ ಮುಗಿಯುವವರೆಗೆ ನಗರದಲ್ಲಿನ ಪ್ರತಿಯೊಂದು ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು. ನಗರದ ಪ್ರಮುಖ ಸ್ಥಳಗಳಲ್ಲಿ ಈ ಮೊದಲೇ 54 ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಈಗ ಹೆಚ್ಚುವರಿಯಾಗಿ 43 ಹಾಕಲಾಗಿದೆ’ ಎಂದು ಡಿ.ವೈ.ಎಸ್ಪಿ. ವಿ. ರಘುಕುಮಾರ ತಿಳಿಸಿದರು.

ಭಾನುವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಪ್ರಮುಖ ವೃತ್ತಗಳು, ಮೆರವಣಿಗೆ ಹಾದು ಹೋಗುವ ಮಾರ್ಗ, ಗಣೇಶ ವಿಸರ್ಜನೆ ಸ್ಥಳ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ನಮ್ಮ ಸಿಬ್ಬಂದಿ ದಿನದ 24 ಗಂಟೆ ಅಲ್ಲಿನ ಚಲನವಲನಗಳ ಮೇಲೆ ನಿಗಾ ಇಡುವರು’ ಎಂದು ಮಾಹಿತಿ ನೀಡಿದರು.

‘ಉತ್ಸವದ ಪ್ರಯುಕ್ತ ಭದ್ರತೆಗೆ ಇಬ್ಬರು ಡಿ.ವೈ.ಎಸ್ಪಿ, ಎಂಟು ಜನ ಸಿ.ಪಿ.ಐ., 26 ಪಿ.ಎಸ್‌.ಐ., 53 ಎ.ಎಸ್‌.ಐ, 120 ಹೆಡ್‌ ಕಾನ್‌ಸ್ಟೆಬಲ್‌, 360 ಕಾನ್‌ಸ್ಟೆಬಲ್‌, 250 ಗೃಹರಕ್ಷಕ ದಳ ಸಿಬ್ಬಂದಿ, ತಲಾ ಎರಡು ಕೆ.ಎಸ್‌.ಆರ್‌.ಪಿ. ಹಾಗೂ ಡಿ.ಎ.ಆರ್‌. ತುಕಡಿ ನಿಯೋಜಿಸಲಾಗಿದೆ’ ಎಂದರು.

ADVERTISEMENT

‘ಉತ್ಸವ ಮುಗಿಯುವವರೆಗೆ ಭಾರಿ ವಾಹನಗಳು ನಗರದ ಒಳಗಿನಿಂದ ಸಂಚರಿಸುವುದರ ಮೇಲೆ ನಿರ್ಬಂಧ ಹೇರಲಾಗಿದ್ದು, ವರ್ತುಲ ರಸ್ತೆ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಗಣಪನ ಮೂರ್ತಿಗಳ ಮೆರವಣಿಗೆ ದಿನ ಜನದಟ್ಟಣೆ ನೋಡಿಕೊಂಡು ಕೊನೆಯ ಕ್ಷಣದಲ್ಲಿ ಕೆಲವು ಮಾರ್ಗಗಳಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಫ್ಲೆಕ್ಸ್‌ಗೆ ಅನುಮತಿ ಕಡ್ಡಾಯ:

‘ಉತ್ಸವದ ಪ್ರಯುಕ್ತ ಈಗಾಗಲೇ ಕೆಲವರು ನಗರದ ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್‌, ಬ್ಯಾನರ್‌ ಹಾಕಿದ್ದಾರೆ. ಅದಕ್ಕೆ ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಸೋಮವಾರ (ಸೆ.2) ಸಂಜೆ 5ರ ಒಳಗೆ ಅನುಮತಿ ಪಡೆಯಲೇಬೇಕು. ಇಲ್ಲವಾದಲ್ಲಿ ಅವುಗಳನ್ನು ತೆರವುಗೊಳಿಸಿ, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಪೌರಾಯುಕ್ತರಾದ ಜಯಲಕ್ಷ್ಮಿ ತಿಳಿಸಿದರು.

‘ಮೆರವಣಿಗೆ ಹಾದು ಹೋಗುವ ಮಾರ್ಗಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲಾಗಿದೆ. ಹಾಳಾಗಿದ್ದ ಬೀದಿ ದೀಪಗಳನ್ನು ಬದಲಿಸಿ ಹೊಸದನ್ನು ಅಳವಡಿಸಲಾಗಿದೆ. ಗಣೇಶ ವಿಸರ್ಜನೆಯ ಸ್ಥಳದಲ್ಲಿ ಜನರೇಟರ್‌, ಕ್ರೇನ್‌ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಸಿಪಿಐಗಳಾದ ನಾರಾಯಣ, ಪರಸಪ್ಪ ಭಜಂತ್ರಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಪ್ರಸಾದ ಗೋಖಲೆ, ಸುಪ್ರೀತ್‌ ಪಾಟೀಲ, ಸಂಚಾರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಯ್ಯನಗೌಡ ಪಾಟೀಲ, ಪಿ.ಎಸ್‌.ಐ.ಗಳಾದ ಶಶಿಧರ್‌, ಶರಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.