ADVERTISEMENT

ವೈದ್ಯರ ನಿರ್ಲಕ್ಷ್ಯ, ಚಿಕಿತ್ಸಾ ಸೌಲಭ್ಯದ ಕೊರತೆ

ಅಮಾಯಕರ ಸಾವು–ನೋವಿಗೆ ಬೀಳದ ಕಡಿವಾಣ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 31 ಅಕ್ಟೋಬರ್ 2022, 8:54 IST
Last Updated 31 ಅಕ್ಟೋಬರ್ 2022, 8:54 IST
ಹೊಸಪೇಟೆಯ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಕಟ್ಟಡ
ಹೊಸಪೇಟೆಯ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಕಟ್ಟಡ   

ಹೊಸಪೇಟೆ (ವಿಜಯನಗರ): ಅದು ಅಕ್ಟೋಬರ್‌ 19, 2022. ಹೆರಿಗೆಗೂ ಮೊದಲೇ ಮಗು ತಾಯಿಯ ಗರ್ಭದಲ್ಲೇ ಮೃತಪಟ್ಟಿದೆ. ಹೆರಿಗೆಗೆ ವಿಳಂಬ ಮಾಡಿದ್ದರಿಂದ ಮಗು ತಾಯಿಯ ಗರ್ಭದಲ್ಲೇ ಸಾವನ್ನಪ್ಪಿದೆ. ಪ್ರತಿಯೊಂದಕ್ಕೂ ವೈದ್ಯರು, ಸಿಬ್ಬಂದಿ ಹಣ ಕೇಳುತ್ತಾರೆ. ಹಣ ಕೊಡದಿದ್ದರೆ ವಿಳಂಬ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಮಗು ಮೃತಪಟ್ಟಿದೆ ಎಂದು ಸಂಬಂಧಿಕರು ಆರೋಪಿಸಿ ಆ ದಿನ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದರು. ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟ ನಂತರ ಪ್ರತಿಭಟನೆ ಕೈಬಿಟ್ಟರು.

ಅ. 19ರಂದು ನಡೆದ ಘಟನೆ ಹೊಸದೇನಲ್ಲ. ಈ ರೀತಿಯ ಘಟನೆಗಳು ಹಿಂದೆಯೂ ನಡೆದಿವೆ. ಆದರೆ, ಯಾರ ವಿರುದ್ಧವೂ ಕಾನೂನು ಕ್ರಮ ಜರುಗಿಸಿಲ್ಲ. ಈ ಪ್ರಕರಣದ ಸತ್ಯಾಸತ್ಯತೆಯ ತನಿಖೆ ನಡೆದು ವಾಸ್ತವಾಂಶ ಹೊರಬರಬೇಕಿದೆ. ಆದರೆ, ಹಿಂದಿನ ಪ್ರಕರಣಗಳಲೆಲ್ಲ ವೈದ್ಯರ ಪರವಾಗಿಯೇ ವರದಿ ಕೊಟ್ಟಿರುವುದರಿಂದ ಈ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆ ಎಂಬ ಭರವಸೆ ತಮಗಿಲ್ಲ ಎನ್ನುತ್ತಾರೆ ಮೃತ ಮಗುವಿನ ಪೋಷಕರು, ಸಂಬಂಧಿಕರು.

ತಾಲ್ಲೂಕಿನ ಪಿ.ಕೆ. ಹಳ್ಳಿಯ ಜ್ಯೋತಿ ಅವರು ಹೆರಿಗೆ ನೋವಿನಿಂದ ಬಳಲುತ್ತ ಅ. 18ರಂದೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸಂಬಂಧಿಕರ ಪ್ರಕಾರ, ಅವರ ಹೊಟ್ಟೆಯಿಂದ ಸತತ ನೀರು ಹರಿದು ಹೋಗಿ, ತೀವ್ರ ನಿಶ್ಯಕ್ತರಾಗಿದ್ದರು. ಸಿಸೇರಿಯನ್‌ ಮಾಡಿಯಾದರೂ ಹೆರಿಗೆ ಮಾಡಬೇಕೆಂದು ಜ್ಯೋತಿ ಸಂಬಂಧಿಕರು ವೈದ್ಯರು, ನರ್ಸ್‌ಗಳ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ, ಅವರ ಮಾತು ನಿರ್ಲಕ್ಷಿಸಿದ್ದಾರೆ. ಒಂದು ದಿನ ತಡವಾಗಿ ಹೆರಿಗೆಗೆ ಕೊಂಡೊಯ್ದಾಗ ಮಗು ಗರ್ಭದಲ್ಲೇ ಮೃತಪಟ್ಟಿದೆ. ಮೇಲ್ನೋಟಕ್ಕೆ ಇದು ವೈದ್ಯಕೀಯ ಸಿಬ್ಬಂದಿಯ ಬೇಜವಾಬ್ದಾರಿ ತೋರಿಸುತ್ತದೆ.

ADVERTISEMENT

ಈ ರೀತಿಯ ನಿರ್ಲಕ್ಷ್ಯದಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ಒಂದೆಡೆ ಸಿಬ್ಬಂದಿಯ ನಿರ್ಲಕ್ಷ್ಯವಾದರೆ ಇನ್ನೊಂದು ಕಡೆ ಗಂಭೀರ ಸ್ವರೂಪದ ಪ್ರಕರಣಗಳು ಬಂದರೆ ನಗರದ ಸರ್ಕಾರಿ ಆಸ್ಪತ್ರೆ ಪ್ರಾಥಮಿಕ ಚಿಕಿತ್ಸೆಗೆ ಸೀಮಿತವಾಗಿದೆ. ಉದಾಹರಣೆಗೆ ಹಾವು ಕಡಿತ, ಹೃದಯಾಘಾತ ಸೇರಿದಂತೆ ಇತರೆ ಪ್ರಕರಣಗಳು. ನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಪಕ್ಕದ ಜಿಲ್ಲೆಗಳಾದ ಬಳ್ಳಾರಿ ವಿಮ್ಸ್‌, ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ. ನಗರದಿಂದ ಬಳ್ಳಾರಿ, ಕೊಪ್ಪಳಕ್ಕೆ ಕೊಂಡೊಯ್ಯುವವರೆಗೆ ಅನೇಕರು ಜೀವ ಕಳೆದುಕೊಂಡ ಉದಾಹರಣೆಗಳಿವೆ. ಹೀಗಿದ್ದರೂ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ಗಂಭೀರ ಸ್ವರೂಪದ ಕೆಲಸಗಳಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

‘ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸ್ಟಾಫ್‌ ನರ್ಸ್‌, ಡಿ ಗ್ರುಪ್‌ ನೌಕರರ ಕೊರತೆ ಇದೆ. ತುರ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ನುರಿತ ವೈದ್ಯರಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು ಬಂದ್‌ ಆಗಿದೆ. ಎಂ.ಸಿ.ಎಚ್‌. ಆಸ್ಪತ್ರೆ ಒಪಿಡಿಗಷ್ಟೇ ಸೀಮಿತವಾಗಿದೆ. ಅಲ್ಲಿ ತಾಯಿ ಮತ್ತು ಮಕ್ಕಳ ಸಾವು ನೋವು ಆಗದಂತೆ ತಡೆಯುವ ಕೆಲಸ ಮಾಡಬೇಕಿದೆ. ಆದರೆ, ಆ ಕೆಲಸವಾಗುತ್ತಿಲ್ಲ. ಜಿಲ್ಲಾಡಳಿತ ಅದನ್ನು ಸರಿಪಡಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಕೆ.ಎಂ. ಸಂತೋಷ್‌ ಕುಮಾರ್‌ ಆಗ್ರಹಿಸಿದರು.

‘ಹೆರಿಗೆ ವಾರ್ಡ್‌ನಲ್ಲಿ ಸಹಜ ಹೆರಿಗೆ, ಸಿಸೇರಿಯನ್‌ ಹೆರಿಗೆಗೆ ಒಬ್ಬರೇ ವೈದ್ಯರಿದ್ದಾರೆ. ಎರಡಕ್ಕೂ ಪ್ರತ್ಯೇಕವಾಗಿರಬೇಕು. ಒಂದು ಹೆರಿಗೆಗೆ ಇಂತಿಷ್ಟು ಹಣ ನಿಗದಿಪಡಿಸಿದ್ದಾರೆ. ಹಣ ಕೊಡುವವರೆಗೆ ಮಗು ಜನಿಸಿದ ಪ್ರಮಾಣ ಪತ್ರವೇ ನೀಡುವುದಿಲ್ಲ. ಹಣ ಕೊಡದವರ ಬಗ್ಗೆ ಗಮನ ಹರಿಸುವುದಿಲ್ಲ. ಇದೆಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಬಡವರು ತೊಂದರೆ ಅನುಭವಿಸುತ್ತಿದ್ದಾರೆ. ಜೀವ ಕಳೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

/ಬಾಕ್ಸ್‌/

ಜಿಲ್ಲಾ ಆಸ್ಪತ್ರೆ ಕೆಲಸ ಆರಂಭ:

ನಗರದ ಜಂಬುನಾಥಹಳ್ಳಿ ರಸ್ತೆಯಲ್ಲಿ 250 ಹಾಸಿಗೆ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಎಲ್ಲ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ಸಿಗುವಂತೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಆದರೆ, ವಾಸ್ತವದಲ್ಲಿ ಹಾಗಾದರೆ ಸ್ಥಳೀಯರಿಗೆ ಬಹಳ ಪ್ರಯೋಜನವಾಗಲಿದೆ. ಸಣ್ಣಪುಟ್ಟ ಕಾಯಿಲೆಗೂ ಬಳ್ಳಾರಿ, ಕೊಪ್ಪಳಕ್ಕೆ ಹೋಗುವುದು ತಪ್ಪಲಿದೆ. ಇನ್ನು, ಗಂಭೀರ ಸ್ವರೂಪದ ಕಾಯಿಲೆಗಳಿಗೆ ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್‌ಗೆ ಅಲೆದಾಡುವುದು ತಪ್ಪುತ್ತದೆ. ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಸರ್ಕಾರ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ಕೊಟ್ಟಿದೆ. ನಿಗದಿತ ಅವಧಿಯಲ್ಲಿ ಅದರ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯ ಸಿಗುತ್ತದೆಯೋ ಅಥವಾ ಇದು ಕೂಡ ಏಳುತ್ತ ಬೀಳುತ್ತ ನಡೆಯುತ್ತದೆಯೋ ನೋಡಬೇಕಿದೆ.


ಪ್ರಾಣ ಹೋದರೂ ಕಲಿಯದ ಪಾಠ...

ಬಳ್ಳಾರಿ: ಸೆಪ್ಟೆಂಬರ್‌ 14ರಂದು ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ವಿಮ್ಸ್) ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕರೆಂಟ್‌, ಜನರೇಟರ್‌ ಕೈಕೊಟ್ಟು ಮೂವರು ಮೃತಪಟ್ಟ ಘಟನೆ ನಡೆದು ಒಂದೂವರೆ ತಿಂಗಳು ಕಳೆಯಿತು. ಈ ಕುರಿತು ಬೆಂಗಳೂರು ಮೆಡಿಕಲ್‌ ಕಾಲೇಜು (ಬಿಎಂಸಿ) ಪ್ಲ್ಯಾಸ್ಟಿಕ್‌ ಸರ್ಜರಿ ವಿಭಾಗದ ಪ್ರಾಧ್ಯಾಪಕಿ ಡಾ. ಸ್ಮಿತಾ ನೇತೃತ್ವದ ಸಮಿತಿ ವಿಚಾರಣೆ ಮುಗಿಸಿ ಸರ್ಕಾರಕ್ಕೆ ವರದಿ ಕೊಟ್ಟು ತಿಂಗಳು ಕಳೆಯಿತು.

ವರದಿ ಒಂದು ತಿಂಗಳಿಂದ ದೂಳು ಹಿಡಿಯುತ್ತಿದೆ. ವಿಧಾನಸಭೆಯಲ್ಲಿ ವಿಮ್ಸ್‌ ಸಾವಿನ ಪ್ರಕರಣ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾದ ಬಳಿಕ ಸರ್ಕಾರ ವಿಚಾರಣೆಗೆ ಸಮಿತಿ ರಚಿಸಿದ್ದು ಇತಿಹಾಸ. ಈ ವಿಷಯವೀಗ ಅಪ್ರಸ್ತುತ. ಆದರೆ, ಸಾವು ಹೇಗೆ ಸಂಭವಿಸಿತು ಎಂಬ ಬಗ್ಗೆ ತಜ್ಞರ ಸಮಿತಿ ಖಚಿತ ನಿರ್ಧಾರಕ್ಕೆ ಬಂದಿದೆ. ಈ ಕಾರಣಕ್ಕೆ ವರದಿ ಬಹಿರಂಗಪಡಿಸಬೇಕಿತ್ತು. ಪ್ರಾಣ ಕಳೆದುಕೊಂಡ ರೋಗಿಗಳ ಸಂಬಂಧಿಕರಿಗಾದರೂ ಸತ್ಯ ಗೊತ್ತಾಗಬೇಕಿತ್ತು.

ಈ ಘಟನೆ ಬಳಿಕ ವಿಮ್ಸ್‌ಗೆ ಭೇಟಿ ನೀಡಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ‘ಐಸಿಯುನಲ್ಲಿ ವಿದ್ಯುತ್‌ ಕಡಿತಗೊಂಡಿದ್ದು ನಿಜ. ಇದಕ್ಕೂ ಸಾವಿಗೂ ಸಂಬಂಧವಿಲ್ಲ‘ ಎಂದು ವೈದ್ಯರ ಪ್ರಾಥಮಿಕ ವರದಿ ಆಧರಿಸಿ ಹೇಳಿಕೆ ನೀಡಿದಾಗಲೇ ವರದಿಯಲ್ಲಿ ಏನಿರಬಹುದು ಎಂಬುದನ್ನು ಯಾರಾದರೂ ಊಹಿಸಬಹುದು. ಸಚಿವರು ಹೇಳಿಕೆ ನೀಡಿದ್ದು ಪತ್ರಿಕಾ ಗೋಷ್ಠಿಯಲ್ಲಿ.

ಇದಕ್ಕೂ ಮುನ್ನ ಸಂಸ್ಥೆ ನಿರ್ದೇಶಕರು– ವೈದ್ಯಾಧಿಕಾರಿಗಳ ಸಭೆಯಲ್ಲಿ, ’ಐಸಿಯುಗಳಲ್ಲಿರುವ ವೆಂಟಿಲೇಟರ್‌ಗಳಿಗೆ ಬ್ಯಾಟರಿ ಬ್ಯಾಕಪ್‌ ಇದ್ದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅರ್ಧ ಗಂಟೆಯೂ ಪವರ್‌ ಇರುವುದಿಲ್ಲ ಒಂದು ಬ್ಯಾಟರಿ ಬ್ಯಾಕಪ್‌ ಹೆಚ್ಚುವರಿಯಾಗಿರಬೇಕು. ಯುಪಿಎಸ್‌ ಇರಬೇಕು. ಹೆಚ್ಚುವರಿ ಬ್ಯಾಕಪ್ಪೂ ಇಲ್ಲ. ಯುಪಿಎಸ್ಸೂ ಇಲ್ಲ‘ ಎಂಬ ಆತಂಕಕಾರಿ ಸಂಗತಿಗಳು ಬಹಿರಂಗಗೊಂಡವು.

ಈಗ ವಿಮ್ಸ್‌ನೊಳಗೆ ಒಂದು ಸುತ್ತು ಹಾಕಿದರೆ ಒಂದೂವರೆ ತಿಂಗಳ ಹಿಂದೆ ಸ್ಥಿತಿಗತಿ ಹೇಗಿತ್ತೋ ಹಾಗೇ ಇದೆ. ಕಿಂಚಿತ್ತೂ ಬದಲಾವಣೆ ಆಗಿಲ್ಲ. ’ಫ್ಯೂಸ್‌ ಬ್ರೇಕರ್‌ ಸರ್ಕ್ಯೂಟ್‌ ಬೋರ್ಡ್‌ ಬಾಕ್ಸ್‌‘ಗೆ ಸುರಕ್ಷಿತ ಕೊಠಡಿ ನಿರ್ಮಿಸುವಂತೆ ವಿಚಾರಣಾ ಸಮಿತಿಯಲ್ಲಿದ್ದ ತಜ್ಞ ಎಂಜಿನಿಯರ್‌ ಸೂಚಿಸಿದ್ದರು. ಇದುವರೆಗೂ ಆಗಿಲ್ಲ. ಈ ಬಾಕ್ಸ್‌ನಿಂದ ಐಸಿಯುಗೆ ಪ್ರತ್ಯೇಕ ಕೇಬಲ್‌ ಅಳವಡಿಸುವಂತೆ ಹೇಳಲಾಗಿತ್ತು. ಆ ಕೆಲಸವೂ ನಡೆದಿಲ್ಲ. ಅಲ್ಲೀಪುರದಿಂದ ವಿಮ್ಸ್‌ಗೆ ಎಕ್ಸ್‌ಪ್ರೆಸ್‌ ಫೀಡರ್ ಲೈನ್‌ ಹಾಕುವ ‍ಯೋಜನೆಯೂ ಮರೀಚಿಕೆ...

’ವಿಮ್ಸ್‌ ವೈರಿಂಗ್‌ ಕೆಲಸ 40ವರ್ಷಗಳ ಹಿಂದೆ ಮಾಡಿದ್ದು. ಹೊಸದಾಗಿ ವೈರಿಂಗ್‌ ಮಾಡುವ ಪ್ರಸ್ತಾವ ಇದೆ. ಬೆಂಗಳೂರಿಂದ ತಜ್ಞರ ತಂಡವೊಂದು ಬಂದು ಪರಿಶೀಲಿಸಿ ವರದಿ ಕೊಟ್ಟಿದೆ. ವರದಿ ಸರ್ಕಾರದ ಮುಂದಿದೆ. ಅನುಮತಿ ಸಿಕ್ಕ ತಕ್ಷಣ ಕೆಲಸ ಆರಂಭವಾಗಲಿದೆ‘ ಎಂದು ವಿಮ್ಸ್‌ ನಿರ್ದೇಶಕ ಡಾ. ಗಂಗಾಧರಗೌಡ ಹೇಳುತ್ತಾರೆ. ಅಮಾಯಕರ ಪ್ರಾಣ ಹೋದ ಮೇಲೂ ಸರ್ಕಾರ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಏನನ್ನಬೇಕು? ಜನರ ಪ್ರಾಣಕ್ಕೂ ಇಲ್ಲಿ ಬೆಲೆ ಇಲ್ಲ ಎನ್ನದೆ ಬೇರೆ ವಿಧಿಯಿಲ್ಲ.

’ವಿಮ್ಸ್‌ನಲ್ಲಿರುವುದು ಮೂರು ಐಸಿ ಘಟಕಗಳು. ಇದರಲ್ಲಿ ಎರಡಕ್ಕೆ ಬೀಗ ಹಾಕಲಾಗಿದೆ. ಒಂದನ್ನು ಮಾತ್ರ ತೆರೆಯಲಾಗಿದೆ. ಐಸಿಯುಗೆ ಟ್ರಾಮಾ ಕೇರ್‌ ಅಥವಾ ಹೊಸ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಹೋಗಬೇಕು. ವಿಮ್ಸ್‌ ಐಸಿ ಘಟಕಗಳ ಕೆಳಗೇ ತುರ್ತು ಚಿಕಿತ್ಸಾ ಘಟಕ, ರಕ್ತನಿಧಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೌಲಭ್ಯವಿದೆ. ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಕೊಠಡಿ ಇರುವುದು ಇಲ್ಲೇ. ಹೀಗಾಗಿ, ವಿಮ್ಸ್‌ನಲ್ಲಿರುವ ಎಲ್ಲ ಐಸಿಯುಗಳನ್ನು ತೆರೆದರೆ ಎಲ್ಲರಿಗೂ ಅನುಕೂಲ‘ ಎಂಬ ಅಭಿಪ್ರಾಯ ವೈದ್ಯಕೀಯ ವಲಯದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.