ADVERTISEMENT

ಸಂಡೂರು | ವಿದ್ಯುತ್ ಸಮಸ್ಯೆ: ನೀರಿಗಾಗಿ ಪರದಾಟ

ಸಮಸ್ಯೆ ಪರಿಹರಿಸಲು ಅಧಿಕಾರಿಗಳ ನಿರ್ಲಕ್ಷ್ಯ: ಸಾರ್ವಜನಿಕರು ಬೇಸರ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 6:43 IST
Last Updated 3 ನವೆಂಬರ್ 2025, 6:43 IST
ಕುಡತಿನಿಯಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಸಮಸ್ಯೆ ಉಂಟಾಗಿದ್ದರಿಂದ ಜನರು ಹಣ ನೀಡಿ ಖಾಸಗಿ ಶುದ್ಧ ಕುಡಿಯುವ ನೀರಿನ ಟ್ಯಾಂಕರ್‌ನಿಂದ ನೀರು ಪಡೆದರು
ಕುಡತಿನಿಯಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಸಮಸ್ಯೆ ಉಂಟಾಗಿದ್ದರಿಂದ ಜನರು ಹಣ ನೀಡಿ ಖಾಸಗಿ ಶುದ್ಧ ಕುಡಿಯುವ ನೀರಿನ ಟ್ಯಾಂಕರ್‌ನಿಂದ ನೀರು ಪಡೆದರು   

ಕುಡತಿನಿ (ಸಂಡೂರು): ಪಟ್ಟಣದ ಕಂಪ್ಲಿ ರಸ್ತೆಯಲ್ಲಿನ 11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವಿದ್ಯುತ್ ಪರಿವರ್ತಕದಲ್ಲಿ ಶನಿವಾರ ಬೆಳಿಗ್ಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಸಮಸ್ಯೆಯುಂಟಾಗಿ ಜನರು ನೀರಿಗಾಗಿ ಪರದಾಡಿದರು.

ಕುಡತಿನಿ, ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ವಿದ್ಯುತ್ ಸಮಸ್ಯೆಯಿಂದ ಶನಿವಾರ ರಾತ್ರಿ ಕತ್ತಲಲ್ಲೇ ಕಾಲ ಕಳೆದರು.

ಕುಡಿಯುವ ನೀರಿಗಾಗಿ ತೋರಣಗಲ್ಲು ಗ್ರಾಮದಿಂದ ಬಂದ ಖಾಸಗಿ ವಾಹನಗಳ ಶುದ್ಧ ಕುಡಿಯುವ ನೀರಿನ ಟ್ಯಾಂಕರ್‌ಗಳಿಗೆ ಜನರು ಮುಗಿಬಿದ್ದು ಒಂದು ಕೊಡಕ್ಕೆ ₹10, ಒಂದು ಕ್ಯಾನ್‍ಗೆ ₹20 ನೀಡಿ ನೀರು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ADVERTISEMENT

‘ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ತಾತ್ಕಾಲಿಕವಾಗಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಒದಗಿಸಬೇಕು ಎಂದು ಸಾರ್ವಜನಿಕರು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪಟ್ಟಣದ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ’ ಎಂದು ಕುಡತಿನಿಯ ಕರವೇ ಗ್ರಾಮ ಘಟಕದ ಅಧ್ಯಕ್ಷ ಕಮ್ಮತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಕೆಲ ಜನರು ದೂರದ ಬಿಟಿಪಿಎಸ್ ಕಾರ್ಖಾನೆಯ ಶುದ್ಧ ಕುಡಿಯುವ ನೀರಿನ ಘಟಕ, ಏಳುಬೆಂಚಿ, ಸಿದ್ಧಮ್ಮನಹಳ್ಳಿ ಗ್ರಾಮಗಳ ಬಳಿಯಲ್ಲಿನ ಎಚ್‍ಎಲ್‍ಸಿ ಕಾಲುವೆಗೆ ತೆರಳಿ, ಬೈಕ್, ಸೈಕಲ್, ಆಟೋ, ಇತರೆ ವಾಹನಗಳ ಮೂಲಕ ಬಿಂದಿಗೆ, ಕ್ಯಾನ್‍ಗಳ ಮೂಲಕ ನೀರು ತರುವುದು ಸಾಮಾನ್ಯವಾಗಿತ್ತು.

ಕುಡತಿನಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿನ ನಿರಂತರ ವಿದ್ಯುತ್ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜೆಸ್ಕಾಂ ಇಲಾಖೆ ಅಧಿಕಾರಿಗಳ ಬಳಿ ಚರ್ಚಿಸಿ ಕೂಡಲೇ ವಿದ್ಯುತ್ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮವಹಿಸಲಾಗುವುದು

-ಟಿ.ರೇಖಾ ತಹಶೀಲ್ದಾರ್ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.