ಬಳ್ಳಾರಿ: ಡಿವೈಎಫ್‌ಐ ಸಂಘಟನೆಯ ಕಾರ್ಯಕರ್ತರೊಬ್ಬರಿಗೆ ಮಾಲಿನ್ಯ ನಿಯಂತ್ರಣಾ ಮಂಡಳಿಯ ಪರಿಸರ ಅಧಿಕಾರಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಸಂಘಟನೆ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಡಿವೈಎಫ್‌ಐ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಯರ‍್ರಿಸ್ವಾಮಿ ಮಾತನಾಡಿ, ‘ಕಾರೆಕಲ್ಲು ಮತ್ತು ಶಿಡಿಗಿನಮೊಳ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳಿಂದ ಸುತ್ತಲ ಕೃಷಿ ಜಮೀನುಗಳ ಮೇಲೆ ಆಗುತ್ತಿರುವ ಪರಿಣಾಮದ ಕುರಿತು ಸಂಘಟನೆಯ ಕಾರ್ಯಕರ್ತ ಆಲಂ ಬಾಷ ಎಂಬುವವರು ದೂರು ನೀಡಿದ್ದರು. ಜತೆಗೆ ಕೆಲವು ಮಾಹಿತಿಯನ್ನು ಆರ್‌ಟಿಐನಲ್ಲಿ ಕೇಳಿದ್ದರು. ಇದರಿಂದ ಆಕ್ರೋಶಗೊಂಡ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಅಧಿಕಾರಿ ಸಿದ್ದೇಶ್ವರ ಬಾಬು ವಾಟ್ಸ್‌ಆ್ಯಪ್ ಕರೆ ಮಾಡಿ ನಿಂದಿಸಿದ್ದಾರೆ’ ಎಂದು ಆರೋಪಿಸಿದರು.
‘ಸಿದ್ದೇಶ್ವರ ಬಾಬು ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಕಾರೆಕಲ್ಲು, ಶಿಡಿಗಿನಮೊಳ ಗ್ರಾಮದಲ್ಲಿರುವ ಕಾರ್ಖಾನೆಗಳಿಂದಾಗುತ್ತಿರುವ ಮಾಲಿನ್ಯ ತಪ್ಪಿಸಬೇಕು. ಸುತ್ತಮುತ್ತಲಿನ ರೈತರಿಗೆ ಪರಿಹಾರ ಪಾವತಿಸಬೇಕು’ ಎಂದು ಸಂಘಟನೆ ಸದಸ್ಯರು ಆಗ್ರಹಿಸಿದರು.
ಕಾನೂನಾತ್ಮಕವಾಗಿ ಎದುರಿಸುವೆ: ಇನ್ನು ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿರುವ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಅಧಿಕಾರಿ ಸಿದ್ದೇಶ್ವರ ಬಾಬು, ಆರೋಪಗಳನ್ನು ನಿರಾಕರಿಸಿದ್ದಾರೆ.
‘ಆಲಂ ಬಾಷಾ ಅವರು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಕಾನೂನಿನ ಪರಿಮಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ನಾನು ಕೈಗೊಂಡಿದ್ದೇನೆ. ಈ ಮಧ್ಯೆ ಅವರು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿಯೊಂದನ್ನು ಕೇಳಿದ್ದರು. ಈ ಕುರಿತು ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಅವಾಚ್ಯವಾಗಿ ಮಾತನಾಡಿಲ್ಲ. ಅಷ್ಟಕ್ಕೂ ಅವರು ಕೇಳಿದ್ದ ಮಾಹಿತಿಗೂ, ಅವರ ಸಮಸ್ಯೆಗೂ ಸಂಬಂಧವೇ ಇರಲಿಲ್ಲ. ಆರೋಪಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಉತ್ತರಿಸುವೆ’ ಎಂದು ಸಿದ್ದೇಶ್ವರ ಬಾಬು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.