ADVERTISEMENT

ತೆಕ್ಕಲಕೋಟೆ | ಪಡಿತರ ಅಕ್ಕಿ ನುಚ್ಚಾಗಿ ಪರಿವರ್ತನೆ: ಗಿರಣಿ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 16:25 IST
Last Updated 21 ಡಿಸೆಂಬರ್ 2023, 16:25 IST

ತೆಕ್ಕಲಕೋಟೆ: ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ಬೇರೆ ಬೇರೆ ಬ್ರಾಂಡ್‌ಗಳ ಹೆಸರಿನಲ್ಲಿ ಮಾರುವುದು ಒಂದೆಡೆಯಾದರೆ, ಮತ್ತೊಂದೆಡೆ ಹಿಟ್ಟಿನ ಗಿರಣಿಗಳು ಪಡಿತರ ಅಕ್ಕಿಯನ್ನು ನುಚ್ಚಾಗಿ ಪರಿವರ್ತಿಸಿ ಮಾರಾಟ ಮಾಡುವ ದಂಧೆ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.

ಈ ಮಧ್ಯೆ ಪಟ್ಟಣದ 7ನೇ ವಾರ್ಡಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ನುಚ್ಚಾಗಿ ಪರಿವರ್ತಿಸುತ್ತಿದ್ದ ಹಿಟ್ಟಿನ ಗಿರಣಿಯ ಮೇಲೆ ಪೊಲೀಸರು ಹಾಗೂ ಆಹಾರ ಇಲಾಖೆ ಸಿಬ್ಬಂದಿ ದಾಳಿ ಮಾಡಿದ ಘಟನೆ ಬುಧವಾರ ನಡೆದಿದೆ.

7ನೇ ವಾರ್ಡಿನ ಎಂ. ಜಲಾಲ್ ಸಾಬ್ ಹಾಗೂ ಎಂ. ಮಾಬುಸಾಬ್ ಇವರು ಆಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಹಿಟ್ಟಿನ ಗಿರಣಿಯಲ್ಲಿ ನುಚ್ಚಾಗಿ ಪರಿವರ್ತಿಸಿ ಮಾರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಮಹಾರುದ್ರಗೌಡ ಹಾಗೂ ಪಿಎಸ್‌ಐ ಶಾಂತಮೂರ್ತಿ ದಾಳಿ ನಡೆಸಿದ್ದಾರೆ.

ADVERTISEMENT

ದಾಳಿ ಸಂದರ್ಭದಲ್ಲಿ ನಾಲ್ಕು ಮೂಟೆ ಪಡಿತರ ಅಕ್ಕಿ, ಅಕ್ಕಿಯನ್ನು ನುಚ್ಚಾಗಿ ಪರಿವರ್ತಿಸುವ ಯಂತ್ರ ಹಾಗೂ ₹900 ನಗದು ವಶಪಡಿಸಿಕೊಂಡಿದ್ದು, ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.