ADVERTISEMENT

ನಿವೇಶನಕ್ಕಾಗಿ ನಿರಾಶ್ರಿತ ಮಹಿಳೆ ಧರಣಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:04 IST
Last Updated 24 ಜೂನ್ 2025, 16:04 IST
ಹೂವಿನಹಡಗಲಿ ತಾಲ್ಲೂಕು ಹಿರೇಹಡಗಲಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮಹಿಳೆ ಧರಣಿ ನಡೆಸುತ್ತಿರುವುದು.
ಹೂವಿನಹಡಗಲಿ ತಾಲ್ಲೂಕು ಹಿರೇಹಡಗಲಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮಹಿಳೆ ಧರಣಿ ನಡೆಸುತ್ತಿರುವುದು.   

ಹೂವಿನಹಡಗಲಿ: ತಾಲ್ಲೂಕಿನ ಹಿರೇಹಡಗಲಿ ಗ್ರಾಮದ ನಿರಾಶ್ರಿತ ಬಡ ಮಹಿಳೆಯೊಬ್ಬರು ನಿವೇಶನಕ್ಕೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮಂಗಳವಾರ ಧರಣಿ ನಡೆಸಿದರು.

ಗ್ರಾಮದ ಮಹಿಳೆ ಕೊರವರ ದೇವಕ್ಕ ತನ್ನ ಮಗನೊಂದಿಗೆ ಪಂಚಾಯಿತಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು. ಅಡುಗೆ ಪಾತ್ರೆ, ಸಾಮಗ್ರಿಗಳನ್ನು ಕಟ್ಟಿಕೊಂಡು ಬಂದಿದ್ದ ಮಹಿಳೆ, ವಾಸಕ್ಕೆ ಜಾಗ ನೀಡುವವರೆಗೆ ಪಂಚಾಯಿತಿಯಲ್ಲೇ ವಾಸಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

‘ನಮಗೆ ಊರಲ್ಲಿ ಸ್ವಂತ ನಿವೇಶನ ಇಲ್ಲ, ಮನೆ ಇಲ್ಲ. ಅನಾರೋಗ್ಯದಿಂದ ಬಳಲುವ ಮಗನೊಂದಿಗೆ 1ನೇ ವಾರ್ಡಿನಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದೆವು. ಗ್ರಾಮದ ಕೆಲವರು ಅದನ್ನು ತೆರವುಗೊಳಿಸಿದರು. ಆಸ್ಪತ್ರೆ ಹಿಂಭಾಗದ ಬಯಲು ಜಾಗಕ್ಕೆ ಹೋದೆವು, ಅಲ್ಲಿಯೂ ಬಿಡಲಿಲ್ಲ. ಗ್ರಾಮಠಾಣಾ ಖಾಲಿ ಜಾಗೆಯಲ್ಲಿ ಹಾಕಿಕೊಂಡಿದ್ದ ಗುಡಿಸಲನ್ನೂ ಕಿತ್ತು ಹಾಕಿದರು. ವಾಸಿಸಲು ಜಾಗವಿಲ್ಲದೇ ಬೀದಿಗೆ ಬಂದಿದ್ದೇವೆ. ನಮಗೆ ನಿವೇಶನ ಗುರುತಿಸಿಕೊಡುವವರೆಗೆ ಪಂಚಾಯಿತಿಯಲ್ಲೇ ಇರುತ್ತೇವೆ’ ಎಂದು ದೇವಕ್ಕ ಪಟ್ಟು ಹಿಡಿದರು.

ADVERTISEMENT

‘ಕೆಲ ಪ್ರಭಾವಿಗಳು, ಪಂಚಾಯಿತಿ ಸದಸ್ಯರು ಸರ್ಕಾರಿ ಜಾಗೆ ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಇಂತಹ ಸಾಕಷ್ಟು ಪ್ರಕರಣಗಳಿವೆ. ನೆಲೆ ಇಲ್ಲದ ಬಡವರನ್ನು ಮಾತ್ರ ಗುರಿಯಾಗಿಸಿ ಒಕ್ಕಲೆಬ್ಬಿಸುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ನಿವೇಶನ ಮಂಜೂರು ಮಾಡಿಸುವುದಾಗಿ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಮನವೊಲಿಸಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು.

‘ಗ್ರಾಮಠಾಣಾ ಜಾಗೆಗಳನ್ನು ಗುರುತಿಸಿ ನಿವೇಶನಗಳನ್ನು ಪರಿವರ್ತಿಸುವ ಪ್ರಸ್ತಾವ ಸಿದ್ದವಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಆದ್ಯತೆ ಮೇರೆಗೆ ಮಹಿಳೆಗೆ ನಿವೇಶನ ನೀಡುತ್ತೇವೆ’
ಶಂಭುಲಿಂಗನಗೌಡ ಪಿಡಿಒ ಹಿರೇಹಡಗಲಿ ಗ್ರಾ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.