ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ನಿರೀಕ್ಷೆಯಂತೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎನ್. ಸತ್ಯನಾರಾಯಣ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅದರಂತೆ ಅವರಿಬ್ಬರೇ ಆಯ್ಕೆಯಾದರು. ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿದ್ದ ಮಾಜಿ ಶಾಸಕ, ಕೆಎಂಎಫ್‌ನ ಮಾಜಿ ಅಧ್ಯಕ್ಷ ಆದ ಭೀಮ ನಾಯ್ಕ, ಚುನಾವಣಾ ಕಣಕ್ಕೆ ಇಳಿಯಲಿಲ್ಲ. ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿ ಮರಳಿದರು.
ಹಿಟ್ನಾಳ್ ಬಣದ ನಿರ್ದೇಶಕರು ಗುರುವಾರವೇ ಬಳ್ಳಾರಿಗೆ ಬಂದು ನಗರದ ಅಲ್ಲಂ ಭವನದಲ್ಲಿ ವಾಸ್ತವ್ಯ ಹೂಡಿದ್ದರು. ಅವರೆಲ್ಲರೊಂದಿಗೆ ಶುಕ್ರವಾರ ಬೆಳಿಗ್ಗೆ ನೇರವಾಗಿ ಒಕ್ಕೂಟದ ಕಚೇರಿಗೆ ತೆರಳಿದ ಹಿಟ್ನಾಳ್ ನಾಮಪತ್ರ ಸಲ್ಲಿಸಿ ಹೊರ ನಡೆದರು. ಅವರ ಬಳಿಕ ಯಾರೊಬ್ಬರೂ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಆವಿರೋಧ ಆಯ್ಕೆ ಜರುಗಿತು.
ಬಳ್ಳಾರಿಗೆ ನ್ಯಾಯದ ವಾಗ್ದಾನ: ಬಳ್ಳಾರಿ ಜಿಲ್ಲೆಗೆ ನಿರ್ದೇಶಕ ಸ್ಥಾನಗಳನ್ನು ಒದಗಿಸಿಕೊಡಬೇಕು, ಮೆಗಾ ಡೇರಿಯನ್ನು ಬಳ್ಳಾರಿಯಲ್ಲೇ ಉಳಿಸಬೇಕು ಎಂಬುದೂ ಸೇರಿದಂತೆ ಹಲವು ಮನವಿಗಳನ್ನು ಮುಂದಿಟ್ಟು ಬಳ್ಳಾರಿ ಜಿಲ್ಲೆಯ ಮೂವರು ಶಾಸಕರು ರಾಘವೇಂದ್ರ ಹಿಟ್ನಾಳ್ ಅವರ ಪರವಾಗಿ ಮುಖ್ಯಮಂತ್ರಿಗೆ ಶಿಫಾರಸು ಪತ್ರ ನೀಡಿದ್ದಾರೆ ಎಂದು ಹೇಳಲಾಗಿದೆ.
ಹಿಟ್ನಾಳ್ ಅವರೂ ಇದಕ್ಕೆ ಪೂರಕವಾಗಿ ಮಾತನಾಡಿದ್ದು, ‘ಬಳ್ಳಾರಿ ಜಿಲ್ಲೆಗೆ ಒಕ್ಕೂಟದಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗುವುದು, ಮೆಗಾ ಡೇರಿಯನ್ನು ಬಳ್ಳಾರಿಯಲ್ಲೇ ಉಳಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.
ಈ ಹಿಂದಿನ ಆಡಳಿತ ಮಂಡಳಿಯ ವಿಳಂಬ ನೀತಿಯಿಂದಾಗಿ ಬಳ್ಳಾರಿ ಜಿಲ್ಲೆಗೆ ಪ್ರತ್ಯೇಕ ನಿರ್ದೇಶಕ ಸ್ಥಾನಗಳು ಸಿಗದಂತಾಗಿತ್ತು. ಜತೆಗೆ ಮೆಗಾ ಡೇರಿಯನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸಲು ಪ್ರಯತ್ನ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಹಿಟ್ನಾಳ್ ಕುಟುಂಬಸ್ಥರ ಜಮಾವಣೆ: ಚುನಾವಣೆ ನಡೆಯುವ ಒಕ್ಕೂಟದ ಕೇಂದ್ರ ಕಚೇರಿ ಬಳಿ ಕೊಪ್ಪಳದ ಹಿಟ್ನಾಳ್ ಕುಟುಂಬಸ್ಥರು ಜಮಾಯಿಸಿದ್ದರು. ಮೊದಲಿಗೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಬಂದರು. ಬಳಿಕ ಅವರ ತಂದೆ ಬಸವರಾಜ ಹಿಟ್ನಾಳ್, ರಾಘವೇಂದ್ರ ಹಿಟ್ನಾಳ್ ಪುತ್ರ ಮತ್ತಿತರರು ರಾಬಕೊವಿ ಕಚೇರಿ ಬಳಿ ಸೇರಿದ್ದರು.
ಇದರ ಜತೆಗೆ ನೂರಾರು ಅಭಿಮಾನಿಗಳು ಒಕ್ಕೂಟದ ಆವರಣದಲ್ಲಿ ಜಮಾಯಿಸಿದ್ದರು. ಹಿಟ್ನಾಳ್ ಆಯ್ಕೆ ಘೋಷಣೆಯಾಗುತ್ತಲೇ ಅಭಿಮಾನಿಗಳು ಅವರನ್ನು ಎತ್ತಿ ಕುಣಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.
’ದಮ್ಮು ತಾಕತ್ತು ತೋರಿಸಿದ್ದೇನೆ’: ಚುನಾವಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್, ‘ಈ ಹಿಂದಿನ ಅಧ್ಯಕ್ಷರು ಒಕ್ಕೂಟಕ್ಕೆ ಬಂದು ನಾಮಪತ್ರ ಸಲ್ಲಿಸಿ ಧಮ್ಮು–ತಾಕತ್ತು ತೋರಿಸು ಎಂದು ಸವಾಲು ಹಾಕಿದ್ದರು. ಅದಕ್ಕಾಗಿಯೇ ಒಕ್ಕೂಟ ಅಧ್ಯಕ್ಷನಾಗಿ ಧಮ್ಮು ತಾಕತ್ತು ಪ್ರದರ್ಶನ ಮಾಡಿದ್ದೇನೆ’ ಎಂದರು.
‘ನನಗೆ ಈ ಒಕ್ಕೂಟದ ಅಧ್ಯಕ್ಷನಾಗಬೇಕೆಂಬ ಬಯಕೆ ಇರಲಿಲ್ಲ. ನಿರ್ದೇಶಕರ ಒತ್ತಾಸೆ, ಸಿದ್ದರಾಮಯ್ಯ ಅವರ ಆಶಯದ ಮೇರೆಗೆ ಅಧ್ಯಕ್ಷನಾಗಿದ್ದೇನೆ. ಈ ಭಾಗದಲ್ಲಿ ಹೈನುಗಾರಿಕೆ ಅಭಿವೃದ್ದಿ ಪಡೆಸುತ್ತೇವೆ. ಮೆಗಾ ಡೇರಿಯನ್ನು ಬಳ್ಳಾರಿಯಲ್ಲೇ ಸ್ಥಾಪಿಸುತ್ತೇವೆ’ ಎಂದರು.
‘ಹಿಂದೆ ಏನಾಗಿದೆಯೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಒಕ್ಕೂಟ ಸಾಲದಲ್ಲಿದೆ ಎಂಬ ವಿಷಯ ಗೊತ್ತಿದೆ. ಅದೇ ಕಾರಣಕ್ಕೆ, ಒಕ್ಕೂಟವನ್ನು ಅಭಿವೃದ್ಧಿ ಮಾಡಲು ನಾನು ಬಂದಿದ್ದೇನೆ. ಒಕ್ಕೂಟದಲ್ಲಿನ ಜಿಲ್ಲಾ ಅಸಮಾತೋಲನ ನಿವಾರಿಸುತ್ತೇನೆ. ನೇಮಕಾತಿಗಳ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.
ಕೊಪ್ಪಳಕ್ಕೆ ಅಧ್ಯಕ್ಷ ಸ್ಥಾನ, ರಾಯಚೂರಿಗೆ ಉಪಾಧ್ಯಕ್ಷ ಸ್ಥಾನ, ವಿಜಯನಗರಕ್ಕೆ ಕೆಎಂಎಫ್ ಪ್ರಾತಿನಿಧ್ಯ (ಡೆಲಿಗೇಷನ್) ಎಂದು ತೀರ್ಮಾನವಾಗಿದೆ ಎಂಬ ಕೆಎಂಎಫ್ ಮಾಜಿ ಅಧ್ಯಕ್ಷ ಭೀಮ ನಾಯ್ಕ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಘವೇಂದ್ರ ಹಿಟ್ನಾಳ್ ಈ ರೀತಿ ಯಾವುದೇ ನಿರ್ಧಾರವನ್ನು ಪಕ್ಷ ನಾಯಕರು ಕೈಗೊಂಡಿಲ್ಲ ಎಂದರು.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವಿರಾ ಎಂಬ ಪ್ರಶ್ನೆಗೆ, ‘ಆ ಕುರಿತು ನಿರ್ಧಾರಗಳು ಇನ್ನೂ ಆಗಿಲ್ಲ. ಕೆಎಂಎಫ್‌ಗೆ ಯಾರನ್ನು ಡೆಲಿಗೇಷನ್ ಕಳುಹಿಸಬೇಕು ಎಂಬುದನ್ನು ಸಭೆಯಲ್ಲಿ ತೀರ್ಮಾನಿಸುತ್ತೇವೆ’ ಎಂದರು.
ಚುನಾವಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ, ‘ಈ ಹಿಂದಿನ ಅಧ್ಯಕ್ಷರು ಒಕ್ಕೂಟಕ್ಕೆ ಬಂದು ನಾಮಪತ್ರ ಸಲ್ಲಿಸಿ ಧಮ್ಮು–ತಾಕತ್ತು ತೋರಿಸು ಎಂದು ಸವಾಲು ಹಾಕಿದ್ದರು. ಅದಕ್ಕಾಗಿಯೇ ಒಕ್ಕೂಟ ಅಧ್ಯಕ್ಷನಾಗಿ ಧಮ್ಮು ತಾಕತ್ತು ಪ್ರದರ್ಶನ ಮಾಡಿದ್ದೇನೆ’ ಎಂದರು.
‘ನನಗೆ ಈ ಒಕ್ಕೂಟದ ಅಧ್ಯಕ್ಷನಾಗಬೇಕೆಂಬ ಬಯಕೆ ಇರಲಿಲ್ಲ. ನಿರ್ದೇಶಕರ ಒತ್ತಾಸೆ, ಸಿದ್ದರಾಮಯ್ಯ ಅವರ ಆಶಯದ ಮೇರೆಗೆ ಅಧ್ಯಕ್ಷನಾಗಿದ್ದೇನೆ. ಈ ಭಾಗದಲ್ಲಿ ಹೈನುಗಾರಿಕೆ ಅಭಿವೃದ್ಧಿಪಡಿಸುತ್ತೇವೆ. ಮೆಗಾ ಡೇರಿಯನ್ನು ಬಳ್ಳಾರಿಯಲ್ಲೇ ಸ್ಥಾಪಿಸುತ್ತೇವೆ’ ಎಂದರು.
‘ಹಿಂದೆ ಏನಾಗಿದೆಯೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಒಕ್ಕೂಟ ಸಾಲದಲ್ಲಿದೆ ಎಂಬ ವಿಷಯ ಗೊತ್ತಿದೆ. ಅದೇ ಕಾರಣಕ್ಕೆ, ಒಕ್ಕೂಟವನ್ನು ಅಭಿವೃದ್ಧಿ ಮಾಡಲು ನಾನು ಬಂದಿದ್ದೇನೆ. ಒಕ್ಕೂಟದಲ್ಲಿನ ಜಿಲ್ಲಾ ಅಸಮಾತೋಲನ ನಿವಾರಿಸುತ್ತೇನೆ. ನೇಮಕಾತಿಗಳ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.