ಬಳ್ಳಾರಿ: ಜಿಲ್ಲೆಯಲ್ಲಿ ಮಂಗಳವಾರ ಗುಡುಗು, ಸಹಿತ ಭಾರಿ ಮಳೆಯಾಗಿದ್ದು, ಹಳ್ಳ, ಕೊಳ್ಳ, ಜನವಸತಿ ಪ್ರದೇಶಗಳಲ್ಲಿ ನೀರು ಆವರಿಸಿ ಜನಜೀವನ ಅಸ್ತವ್ಯಸ್ತಗೊಂಡಿತು.
ಕಳೆದೆರಡು ದಿನಗಳಿಂದ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದ ಮಳೆ, ಮಂಗಳವಾರ ಮೇಲಿಂದ ಮೇಲೆ ಸುರಿಯಿತು. ಮಧ್ಯಾಹ್ನ ಆರಂಭವಾದ ಮಳೆ ರಾತ್ರಿ ವರೆಗೆ ಬಿಟ್ಟು ಬಿಟ್ಟು ಸುರಿಯುತ್ತಿತ್ತು. ಹೀಗಾಗಿ ಕೊಳಗೇರಿಗಳೂ ಸೇರಿದಂತೆ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ ಬಗ್ಗೆ ಜನ ದೂರಿದ್ದಾರೆ.
ಬಳ್ಳಾರಿ ನಗರದ ರಾಣಿತೋಟ, ಕಣೇಕಲ್ ಬಸ್ ನಿಲ್ದಾಣದ ವ್ಯಾಪ್ತಿಯ ಪ್ರದೇಶ, ಬಾಪೂಜಿ ನಗರ, ವಡ್ಡರಬಂಡೆ, ಬಂಡಿಮೋಟ್, ದೇವಿನಗರ, ಇಂದಿರಾನಗರ, ರೂಪನಗುಡಿ ರಸ್ತೆ, ಬೆಂಗಳೂರು ರಸ್ತೆಯ ಅಕ್ಕಪಕ್ಕದ ಪ್ರದೇಶಗಳು, ಎಪಿಎಂಸಿ ಯಾರ್ಡ್ ಸುತ್ತಲ ಪ್ರದೇಶ, ಮಿಲ್ಲರ್ ಪೇಟೆ, ಕೌಲ್ ಬಜಾರ್ ಪ್ರದೇಶದಲ್ಲಿ ಚರಂಡಿ ನೀರು ಮನೆಗಳಿಗೆ ಹರಿಯಿತು. ಜನರನ್ನು ಸಮಸ್ಯೆಗೆ ದೂಡಿತು.
ವಿದ್ಯುತ್ ಕಟ್: ಮಳೆ ಆರಂಭವಾಗುತ್ತಲೇ ವಿದ್ಯುತ್ ಕೂಡ ಕಡಿತಗೊಂಡಿತು. ಜೆಸ್ಕಾಂ ನಡೆಗೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ವ್ಯಾಪಾರಕ್ಕೆ ಅಡ್ಡಿ
ಮಳೆಯಿಂದಾಗಿ ದೀಪಾವಳಿ ವ್ಯಾಪಾರ, ಖರೀದಿ ಭರಾಟೆಗೆ ತೊಡಕುಂಟಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ತಲೆ ಎತ್ತಿದ್ದ ಹೂವಿನ ಅಂಗಡಿಗಳಿಗಂತೂ ತೀವ್ರ ಸಮಸ್ಯೆಯಾಯಿತು. ಮಳೆ ನೀರಿನಲ್ಲಿ ಹೂಗಳು ಕೊಚ್ಚಿ ಹೋದವು. ಹೀಗಾಗಿ ವ್ಯಾಪಾರಿಗಳಿಗೆ ನಷ್ಟ ಉಂಟಾಯಿತು.
ಗುಂಡಿ ರಸ್ತೆಗಳಲ್ಲಿ ಆವರಿಸಿದ ನೀರು: ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದಿದ್ದು, ಅವುಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಹೀಗಾಗಿ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.