ADVERTISEMENT

ಧಾರಾಕಾರ ಮಳೆ: 20 ಹೆಕ್ಟೇರ್ ಬೆಳೆ ನಾಶ, 21 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:18 IST
Last Updated 12 ಜೂನ್ 2025, 16:18 IST
ಹರಪನಹಳ್ಳಿ ತಾಲ್ಲೂಕು ಇಟ್ಟಿಗುಡಿ ಸಮೀಪದಲ್ಲಿ ಭರ್ತಿಯಾಗಿ ಹರಿಯುತ್ತಿರುವ ಹಳ್ಳದಲ್ಲಿ ಜನರು ಮೀನು ಹಿಡಿದರು
ಹರಪನಹಳ್ಳಿ ತಾಲ್ಲೂಕು ಇಟ್ಟಿಗುಡಿ ಸಮೀಪದಲ್ಲಿ ಭರ್ತಿಯಾಗಿ ಹರಿಯುತ್ತಿರುವ ಹಳ್ಳದಲ್ಲಿ ಜನರು ಮೀನು ಹಿಡಿದರು   

ಹರಪನಹಳ್ಳಿ: ತಾಲ್ಲೂಕಿನಾದ್ಯಂತ ಗುರುವಾರ ಸುರಿದ ಧಾರಾಕಾರ ಮಳೆಯಿಂದ 21 ಮನೆಗಳಿಗೆ ನೀರು ನುಗ್ಗಿ, ಹಾನಿ ಸಂಭವಿಸಿದೆ.

ತಲವಾಗಲು ಗ್ರಾಮದಲ್ಲಿ 20 ಮನೆಗಳಿಗೆ ನೀರು‌ ನುಗ್ಗಿದೆ. ಮಾದಾಪುರದಲ್ಲಿ ಬಂಡ್ರಿ ಮಲ್ಲಪ್ಪ ಅವರ ಮನೆಗೆ ನೀರು ನುಗ್ಗಿದ್ದರಿಂದ ಜೋಳ, ಅಕ್ಕಿ, ತರಕಾರಿ ಮತ್ತು ಅಡುಗೆ ಸಾಮಾಗ್ರಿಗಳು ನೀರು ಪಾಲಾಗಿವೆ.

ಹಲುವಾಗಲು ಗ್ರಾಮದ ಎಚ್. ಗಂಗಪ್ಪ ಮತ್ತು ದೀಪಿಕಾ ಕುಟುಂಬದ ಸೋರುತ್ತಿದ್ದ ಮನೆಯಲ್ಲಿ‌ ಮಳೆ ನೀರು ನುಗ್ಗಿ ಅಡುಗೆ ಸಾಮಾಗ್ರಿಗಳು ಜಲಾವೃತವಾಗಿವೆ. ಮಕ್ಕಳೊಂದಿಗೆ ನೀರು ಹೊರ ಚೆಲ್ಲುತ್ತಾ‌‌‌ ಕುಟುಂಬ ರಾತ್ರಿ ಇಡೀ ಕಣ್ಣೀರಲ್ಲಿ ಕಾಲ ಕಳೆದಿದೆ. ನೀಲಗುಂದ, ಚಿರಸ್ತಹಳ್ಳಿ, ಅರಸೀಕೆರೆ ವ್ಯಾಪ್ತಿಯಲ್ಲಿ ಮೈದುಂಬಿ ಹರಿಯುತ್ತಿರುವ ಹಳ್ಳಗಳಲ್ಲಿ ಜನರು ಬಲೆ ಹಾಕಿ ಮೀನು ಹಿಡಿಯುತ್ತಿದ್ದ ದೃಶ್ಯ ಕಂಡುಬಂದವು.

ADVERTISEMENT

ತಲುವಾಗಲು ಗ್ರಾಮಕ್ಕೆ ಶಾಸಕಿ ಎಂ.ಪಿ.ಲತಾ, ತಹಶೀಲ್ದಾರ್‌ ಬಿ.ವಿ.ಗಿರೀಶ್ ಬಾಬು ಸ್ಥಳ ಪರಿಶೀಲಿಸಿದರು. ನೀರು ಬಾರದಂತೆ ಕ್ರಮವಹಿಸಬೇಕು, ಶೀಘ್ರ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಸುರಿದ ಮಳೆಗೆ ಚಿಗುರೊಡೆದಿದ್ದ ಚಿಗಟೇರಿ ಮತ್ತು ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ 20 ಹೆಕ್ಟೇರ್ ಬೆಳೆ ಹಾನಿಯಾಗಿದೆ’ ಎಂದು ಕೃಷಿ‌ ಸಹಾಯಕ ನಿರ್ದೇಶಕ ವಿ.ಸಿ.ಉಮೇಶ್ ಮಾಹಿತಿ ನೀಡಿದರು.

ಮಳೆ ವರದಿ: ಹರಪನಹಳ್ಳಿ 4.8 ಸೆಂ.ಮೀ, ಅರಸೀಕೆರೆ 3.4 , ಚಿಗಟೇರಿ 1.3, ಹಿರೆಮೇಗಳಗೆರೆ 2.1 , ಉಚ್ಚಂಗಿದುರ್ಗ 1.5, ತೆಲಿಗಿ 2.8 ಸೆಂ.ಮೀ. ಮಳೆ ಸುರಿದಿದೆ.

ನಾಲ್ಕು ಮಣ್ಣಿನ ಮನೆಗಳು ಭಾಗಃ ಕುಸಿತ

ಸಿರುಗುಪ್ಪ: ತಾಲ್ಲೂಕಿನಾದ್ಯಂತ ಬುಧವಾರ ಸುರಿದ ಮಳೆಗೆ ನಾಲ್ಕು ಮಣ್ಣಿನ ಮನೆಗಳು ಭಾಗಶಃ ಕುಸಿದಿವೆ.

ತಾಲ್ಲೂಕಿನ ಬಂಡ್ರಾಳ ಗ್ರಾಮದ ಚನ್ನಮ್ಮಾ ಮತ್ತು ದೊಡ್ಡ ಹುಸೇನಮ್ಮ, ರಾರಾವಿ ಅಂಜಿನಮ್ಮ, ರಾರಾವಿ ಎಂ.ಯಶೋಧ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 5 ವಿದ್ಯುತ್‌ ಪರಿರ್ವತಕಗಳು ಹಾಳಾಗಿದ್ದು, 4 ವಿದ್ಯುತ್‌ ಕಂಬಗಳು ಕುಸಿದಿವೆ.

ರಾರಾವಿ ಗ್ರಾಮದಿಂದ ಕುರುವಳ್ಳಿ, ಕುಡುದರಹಾಳ್‌ ಗ್ರಾಮಗಳಿಗೆ ಹಾಗೂ ವಿದ್ಯಾರ್ಥಿಗಳು ಪ್ರೌಢಶಾಲೆ ದಾಟಲು ಪ್ರತಿ ವರ್ಷ ಮಳೆಗಾಲದಲ್ಲಿ ಯಲ್ಲಮ್ಮನ ಹಳ್ಳ ದಾಟಲು ಹರಸಾಹಸ ಪಡುವಂತಾಗಿದೆ. ಶಾಸಕರೇ ಈ ಹಳ್ಳದ ಸೇತುವೆಯನ್ನು ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಹಗರಿಬೊಮ್ಮನಹಳ್ಳಿ: ಉತ್ತಮ ಮಳೆ
ಹಗರಿಬೊಮ್ಮನಹಳ್ಳಿ:
ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ.
ಪಟ್ಟಣದಲ್ಲಿ 3.68 ಸೆಂ.ಮೀ, ತಂಬ್ರಹಳ್ಳಿಯಲ್ಲೊ 2.32 ಸೆಂ.ಮೀ, ಹಂಪಸಗಾರದಲ್ಲಿ 5.66 ಸೆಂ.ಮೀ, ಮಾಲವಿಯಲ್ಲಿ 2.72 ಸೆಂ.ಮೀ. ಮಳೆಯಾಗಿರುವ ವರದಿಯಾಗಿದೆ.

ಕೊಟ್ಟೂರು ತಾಲ್ಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಸುರಿದ ನಿರಂತರ ಮಳೆಗೆ ಮೆಕ್ಕೆಜೋಳ ಎಳೆ ಪೈರು ನೀರಿನಿಂದ ಕೊಚ್ಚಿ ಹೋಗಿರುವುದನ್ನು ಕಂದಾಯ ಹಾಗೂ ಕೃಷಿ ಇಲಾಖಾಧಿಕಾರಿಗಳು ಗುರುವಾರ ಪರಿಶೀಲಿಸಿದರು

ಮಳೆಗೆ ಬೆಳೆ ಜಲಾವೃತ

ಕೊಟ್ಟೂರು: ತಾಲ್ಲೂಕಿನಾದ್ಯಂತ ಕಳೆದ ಕಳೆದ ಒಂದು ವಾರದಿಂದ ಸುರಿದ ನಿರಂತರ ಮಳೆಗೆ ಬಹುತೇಕ ಜಮೀನುಗಳಲ್ಲಿ ಬೆಳೆಗಳು ನೀರಿನಿಂದ ಆವೃತ್ತವಾಗಿರುವುದನ್ನು ಕಾಣಬಹುದಾಗಿದೆ. ತಾಲ್ಲೂಕಿನ ಹುಣಸಿಕಟ್ಟೆ ಗ್ರಾಮದ 38 ಎಕರೆ ಭೂಮಿಯಲ್ಲಿ ಬಿತ್ತಿದ್ದ ಮೆಕ್ಕೆಜೋಳದ ಬೀಜ ಮೊಳಕೆ ಹೊಡೆಯುವ ಹಂತದಲ್ಲಿರುವಾಗ ಸತತವಾಗಿ ಸುರಿದ ಮಳೆಯಿಂದ ನೀರಿನಲ್ಲಿ ಕೊಚ್ಚಿಕೊಂಡುಹೋಗಿದೆ. ಸ್ಥಳಕ್ಕೆ ಕಂದಾಯ ಹಾಗೂ ಕೃಷಿ ಇಲಾಖಾಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಲಬೂರ ಗ್ರಾಮದ ಸಮೀಪದಲ್ಲಿ ಹಾದು ಹೋಗಿರುವ ಹಗರಿ ಹಳ್ಳವು ತುಂಬಿ ಹರಿಯುತ್ತಿರುವುದರಿಂದ ಕೊಟ್ಟೂರಿನಿಂದ ಇಟ್ಟಗಿಗೆ ಹೋಗುವ ರಸ್ತೆ ಸಂಪರ್ಕ ಕೆಲ ಕಾಲ ಕಡಿತಗೊಂಡಿತು. ಚಿರಬಿ ಗ್ರಾಮದ ಹೊರವಲಯದಲ್ಲಿ ಸೇತುವೆ ಮೇಲೆ ನೀರು ಹರಿದ ಪರಿಣಾಮ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗಿತ್ತು. ನಿಂಬಳಗೆರೆ ಹಾಗೂ ಉಜ್ಜಯಿನಿ ಸುತ್ತಮುತ್ತ ಸುರಿದ ಧಾರಾಕಾರ ಮಳೆಗೆ ದಾಳಂಬೆ ಪಪ್ಪಾಯಿ ತೋಟಗಳು ಹಾಗೂ ಜಮೀನುಗಳಲ್ಲಿ ಬೆಳೆಗಳು ಜಲಾವೃತವಾಗಿರುವುದು ಕಂಡುಬಂದಿದೆ. ಪಟ್ಟಣದ ಕೆರೆಗೆ ನಾಲ್ಕೈದು ದಿನಗಳಿಂದ ಸುರಿದ ನಿರಂತರ ಮಳೆಗೆ ಒಳ ಹರಿವು ಹೆಚ್ಚಾಗಿ ನೀರಿನ ಸಂಗ್ರಹ ಹೆಚ್ಚಳವಾಗುತ್ತಿರುವುದು ರೈತರ ಮೊಗದಲ್ಲಿ ಹರ್ಷದ ಹೊನಲನ್ನು ಹರಿಸಿದೆ. ಈ ಭಾಗದ ಜನತೆಯ ಜೀವನಾಡಿಯಾಗಿರುವ ಕೆರೆ ಬಹುತೇಕ ಕೃಷಿ ಚಟುವಟಿಕೆಗಳ ಆಧಾರವಾಗಿದೆ.

ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಸುರಿದ ಮಳೆಗೆ ಸಮೀಪದ ಪೋತಲಕಟ್ಟೆ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿದೆ

ಉತ್ತಮ ಮಳೆ: ಕೋಡಿ ಬಿದ್ದ ಕೆರೆಗಳು

ಮರಿಯಮ್ಮನಹಳ್ಳಿ: ಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಸುರಿದ ಉತ್ತಮ ಮಳೆಗೆ ಎರಡು ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಗುಡುಗು ಸಹಿತ ಬುಧವಾರ ರಾತ್ರಿಯಿಡೀ ಮಳೆ ಸುರಿಯಿತು. ಅಲ್ಲದೆ ಗುರುವಾರ ಬೆಳಿಗ್ಗೆ 7.30ಕ್ಕೆ ಆರಂಭವಾದ ಮಳೆ ಎರಡು ತಾಸಿಗೂ ಅಧಿಕ ಕಾಲ ಭಾರಿ ಮಳೆ ಸುರಿದು ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು. ಭಾರಿ ಮಳೆಗೆ ಸಮೀಪದ ಪೋತಲಕಟ್ಟೆ ಗ್ರಾಮದ ಕೆರೆ ಹಾರುವನಹಳ್ಳಿ ಬಳಿಯ ಬಸವನದುರ್ಗ ಕೆರೆ ತುಂಬಿ ಕೋಡಿ ಬಿದ್ದಿವೆ. ಬಸವನದುರ್ಗ ಕೆರೆಯ ತೂಬಿನ ಬಳಿ ಬೊಂಗಾ ಬಿದ್ದಿದ್ದು ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ರೈತರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.