ADVERTISEMENT

ರೈತ ಸಂಪರ್ಕ ಕೇಂದ್ರ| ಕಟ್ಟಡವೂ ಇಲ್ಲ, ಸಿಬ್ಬಂದಿಯೂ ಸಾಲಲ್ಲ

ಅವಳಿ ಜಿಲ್ಲೆಗಳಾದ ವಿಜಯನಗರ–

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 19:30 IST
Last Updated 13 ಜೂನ್ 2022, 19:30 IST
ಕುರುಗೋಡಿನಲ್ಲಿ ಸಿಬ್ಬಂದಿ ವಸತಿ ಗೃಹ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತ ಸಂಪರ್ಕ ಕೇಂದ್ರ
ಕುರುಗೋಡಿನಲ್ಲಿ ಸಿಬ್ಬಂದಿ ವಸತಿ ಗೃಹ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತ ಸಂಪರ್ಕ ಕೇಂದ್ರ   

ವಿಜಯನಗರ/ಬಳ್ಳಾರಿ:ಅವಳಿ ಜಿಲ್ಲೆಗಳಲ್ಲಿ ರೈತ ಸಂಪರ್ಕ ಕೇಂದ್ರಗಳು ಅಗತ್ಯ ಸೌಕರ್ಯ ಇಲ್ಲದೇ ಬಳಲುತ್ತಿವೆ.

ಎರಡೂ ಜಿಲ್ಲೆಯ ಹಲವೆಡೆ ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಕೆಲವು ಕಡೆ ನಿವೇಶನಗಳಿದ್ದರೆ, ಕೆಲವೆಡೆ ನಿವೇಶನಗಳನ್ನು ಖರೀದಿಸಿ, ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ 18 ರೈತ ಸಂಪರ್ಕ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ.

ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿ ಬೀಜ, ನ್ಯೂಟ್ರಿಯೆಂಟ್ಸ್‌ ವಿತರಿಸಲಾಗುತ್ತದೆ. ಹೊಸ ತಾಂತ್ರಿಕತೆ, ನೀರಾವರಿ, ಉಪಕರಣ, ಬೆಳೆ ಪದ್ಧತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆದರೆ, ಹೆಚ್ಚಿನ ಕಡೆಗಳಲ್ಲಿ ಆ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿ ವರ್ಗವೇ ಇಲ್ಲ. ಅದರಲ್ಲೂ ಮುಂಗಾರು ಹಂಗಾಮು ಬಂತೆಂದರೆ ಅಧಿಕಾರಿ, ಸಿಬ್ಬಂದಿ ಮೇಲೆ ಹೆಚ್ಚಿನ ಕೆಲಸದ ಒತ್ತಡ ಬೀಳುತ್ತದೆ. ಅನೇಕ ಸಲ ಅಧಿಕಾರಿ ವರ್ಗ ಹಾಗೂ ರೈತರು ಮುಖಾಮುಖಿಯಾಗಿ ಜಟಾಪಟಿಗಳಿಗೆ ಕಾರಣವಾಗಿದೆ. ಹೀಗಿದ್ದರೂ ಸರ್ಕಾರ ಹುದ್ದೆ ತುಂಬಲು ಗಂಭೀರವಾಗಿಲ್ಲ.

ADVERTISEMENT

ಹೊಸಪೇಟೆ ತಾಲ್ಲೂಕಿನಲ್ಲಿ 2, ಕೂಡ್ಲಿಗಿಯಲ್ಲಿ 3 ಬಾಡಿಗೆ ಕಟ್ಟಡಗಳಲ್ಲಿ ರೈತ ಸಂಪರ್ಕ ಕೇಂದ್ರಗಳು ಕೆಲಸ ಮಾಡುತ್ತಿವೆ. ಈಗಷ್ಟೇ ನಿವೇಶನಗಳು ಸಿಕ್ಕಿರುವುದರಿಂದ ಕಟ್ಟಡ ನಿರ್ಮಾಣಗೊಳ್ಳಲು ಇನ್ನೂ ಕೆಲವು ತಿಂಗಳು, ವರ್ಷಗಳೇ ಬೇಕಾಗಬಹುದು. ಬಳ್ಳಾರಿ ಜಿಲ್ಲೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜಿಲ್ಲೆಯ ತಾಲ್ಲೂಕುಗಳಲ್ಲಿ ಸ್ವಂತ ಕಟ್ಟಡಗಳು, ಸಿಬ್ಬಂದಿಯ ಕೊರತೆ ಇದೆ. ರೈತರಿಗೆ ಸಕಾಲಕ್ಕೆ ಅಗತ್ಯ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷ ಬಜೆಟ್‌ನಲ್ಲಿ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಿದೆ. ಆದರೆ, ಅವುಗಳ ಅನುಷ್ಠಾನಕ್ಕೆ ಸಿಬ್ಬಂದಿ ನೇಮಕ ಆಗುತ್ತಿಲ್ಲ. ಇದರಿಂದಾಗಿ ಹೆಚ್ಚಿನ ಯೋಜನೆಗಳು ಹೆಸರಿಗಷ್ಟೇ ಸೀಮಿತವಾಗಿವೆ. ತಳಮಟ್ಟದಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ಅದರ ಪ್ರಯೋಜನ ಸಿಗುತ್ತಿಲ್ಲ.

ಬಂಡ್ರಿಯಲ್ಲಿ ‘ಆತ್ಮ’ ಸಿಬ್ಬಂದಿ ಬಳಕೆ

ಸಂಡೂರು ವರದಿ: ತಾಲ್ಲೂಕಿನ ಸಂಡೂರು, ಚೋರುನೂರು ಹಾಗೂ ತೋರಣಗಲ್‌ನಲ್ಲಿ ರೈತ ಸಂಪರ್ಕ ಕೇಂದ್ರಗಳಿದ್ದು, ಬಂಡ್ರಿ ಗ್ರಾಮದಲ್ಲಿ ಜೂ.1 ರಿಂದ ಹೆಚ್ಚುವರಿ ತಾತ್ಕಾಲಿಕ ಬೀಜ ವಿತರಣಾ ಕೇಂದ್ರ ತೆರೆಯಲಾಗಿದೆ.

ಸಂಡೂರು ಮತ್ತು ಚೋರುನೂರು ಗ್ರಾಮದಲ್ಲಿ ಕೃಷಿ ಇಲಾಖೆಯ ಕಟ್ಟಡಗಳಲ್ಲಿ ರೈತ ಸಂಪರ್ಕ ಕೇಂದ್ರಗಳಿದ್ದರೆ, ತೋರಣಗಲ್ಲಿನಲ್ಲಿ ಗ್ರಾಮ ಪಂಚಾಯ್ತಿಗೆ ಸೇರಿದ ಕಟ್ಟಡದಲ್ಲಿ ಸಂಪರ್ಕ ಕೇಂದ್ರ ತೆರೆಯಲಾಗಿದೆ.

ಮೇ.31 ರಂದು ತೋರಣಗಲ್ಲು ಗ್ರಾಮದಲ್ಲಿ 0.75 ಸೆಂಟ್ಸ್ ಜಾಗ ರೈತ ಸಂಪರ್ಕ ಕೇಂದ್ರಕ್ಕಾಗಿ ಕಂದಾಯ ಇಲಾಖೆಯಿಂದ ಕೃಷಿ ಇಲಾಖೆಗೆ ಮಂಜೂರಾಗಿ ಹಸ್ತಾಂತರವಾಗಿದೆ. ರೈತ ಸಂಪರ್ಕ ಕೇಂದ್ರ ನಿರ್ಮಾಣಕ್ಕಾಗಿ ಇಲಾಖೆಯ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.

ಸಿಬ್ಬಂದಿಗಳ ಕೊರತೆ: ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ 3 ಕೃಷಿ ಅಧಿಕಾರಿಗಳು ಹಾಗೂ 9 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಮಂಜೂರಾಗಿದ್ದು, ಇವರಲ್ಲಿ ಇಬ್ಬರು ಕೃಷಿ ಅಧಿಕಾರಿಗಳಿದ್ದಾರೆ. ಒಬ್ಬರು ಪ್ರಭಾರಿಯಾಗಿದ್ದಾರೆ. ಒಬ್ಬರು ಮಾತ್ರ ಸಹಾಯಕ ಕೃಷಿ ಅಧಿಕಾರಿ ಇದ್ದಾರೆ. ಬಂಡ್ರಿ ಗ್ರಾಮದಲ್ಲಿನ ಬೀಜ ವಿತರಣಾ ಕೇಂಧ್ರವನ್ನು "ಆತ್ಮ" ಯೋಜನೆಯ ಸಿಬ್ಬಂದಿಯಿಂದ ನಿರ್ವಹಣೆ ಮಾಡಲಾಗುತ್ತಿದೆ.

‘ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಪತ್ತಿನ ಸಹಕಾರ ಕೇಂದ್ರಗಳ ಮೂಲಕ ಬೀಜ ದೊರೆಯುತ್ತಿದೆ. ಕೃಷಿ ಪತ್ತಿನ ಸಹಕಾರ ಕೇಂದ್ರಗಳಲ್ಲೂ ಬೀಜ ಗೊಬ್ಬರ ದೊರೆಯುತ್ತಿದೆ. ಬೀಜ ಗೊಬ್ಬರದ ಸಮಸ್ಯೆ ಇಲ್ಲ’ ಎನ್ನುತ್ತಾರೆ ರೈತ ಬೊಮ್ಮಾಘಟ್ಟದ ರಮೇಶ್ ಹಾಗೂ ನಿಡಗುರ್ತಿಯ ಹನುಮಂತಪ್ಪ.

ಇಲಾಖೆ ಕೆಲಸ ವಿಳಂಬ

ಹರಪನಹಳ್ಳಿ: ಶೇ.65ರಷ್ಟು ಸಿಬ್ಬಂದಿ ಕೊರತೆಯ ನಡುವೆಯೂ ಇಲ್ಲಿಯ ಕೃಷಿ ಇಲಾಖೆ ತಾಲ್ಲೂಕಿನ ಆರು ರೈತ ಸಂಪರ್ಕ ಕೇಂದ್ರಗಳನ್ನು ತೆರೆದು ಗೊಬ್ಬರ ಮತ್ತು ಬಿತ್ತನೆ ಬೀಜ ವಿತರಣೆ ಮಾಡುತ್ತಿದೆ.

ತಾಲ್ಲೂಕಿನ ರೈತ ಸಂಪರ್ಕ ಕೇಂಧ್ರಗಳಾದ ತೆಲಿಗಿ, ಅರಸಿಕೇರಿ, ಚಿಗಟೇರಿ, ಹರಪನಹಳ್ಳಿ ಮತ್ತು ಸಾಸ್ವಿಹಳ್ಳಿ, ಹಲುವಾಗಲು ಗ್ರಾಮಗಳಲ್ಲೂ ಬೀಜ, ಗೊಬ್ಬರ ವಿತರಣೆ ಕೇಂದ್ರ ತೆರದಿದ್ದಾರೆ.

ಕೃಷಿ ಇಲಾಖೆಯಲ್ಲಿ 23 ಹುದ್ದೆಗಳು ಮುಂಜೂರಾಗಿವೆ. ಆ ಪೈಕಿ ಕೇವಲ 8 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಶೇ.65ರಷ್ಟು ಹುದ್ದೆಗಳ ಕೊರತೆಯಿಂದಾಗಿ ಒಬ್ಬರಿಗೆ ಎರಡು ಕೇಂದ್ರಗಳನ್ನು ನಿಯೋಜಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಗೊಂದಿ ಮಂಜುನಾಥ್ ತಿಳಿಸಿದರು.

ಸಕಾಲಕ್ಕೆ ರೈತರಿಗಿಲ್ಲ ಸೇವೆ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿರುವ ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ಕೊರತೆ ಇದೆ. ರೈತರಿಗೆ ಸಿಗಬೇಕಾದ ಸೌಲಭ್ಯಗಳು, ಸಲಹೆಗಳು ಸಕಾಲಕ್ಕೆ ದೊರೆಯದೆ ತೊಂದರೆಯಾಗಿದೆ. ಪಟ್ಟಣದ ಮೂರು, ತಾಲ್ಲೂಕಿನ ತಂಬ್ರಹಳ್ಳಿ, ಹಂಪಸಾಗರದ ಕೇಂದ್ರಗಳಿಗೆ ಕೃಷಿ ಸಹಾಯಕರು ಮತ್ತು ತಾಂತ್ರಿಕ ಸಿಬ್ಬಂದಿಯ ಅಗತ್ಯವಿದೆ.

‘ರೈತರಿಗೆ ಯಾವುದೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಬಿತ್ತನೆ ಬೀಜ ಸಂಗ್ರಹವಿದೆ, ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಲ್ಲ ರಸಗೊಬ್ಬರ ಅಂಗಡಿಗಳಿಗೆ ಸೂಚನೆ ನೀಡಿಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಜೀವನ್ ಸಾಹೇಬ್ ತಿಳಿಸಿದರು.

ಶಿಥಿಲ ಕಟ್ಟಡದಲ್ಲಿ ರೈತ ಸಂಪರ್ಕ ಕೇಂದ್ರ

ಕೊಟ್ಟೂರು: ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಎಪಿಎಂಸಿ ಆವರಣದ ಬಾಡಿಗೆ ಕಟ್ಟಡದಲ್ಲಿ ಕಳೆದ ಎರಡು ದಶಕಗಳಿಂದಲೂ ಕಾರ್ಯ ನಿರ್ವಹಿಸುತ್ತಿದೆ.

ಒಬ್ಬ ಕೃಷಿ ಅಧಿಕಾರಿ ಹಾಗೂ ಒಬ್ಬ ಸಹಾಯಕ ಕೃಷಿ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರು ಸಹಾಯಕ ಕೃಷಿ ಅಧಿಕಾರಿಗಳು ಎರವಲು ಸೇವೆಯ ಮೇಲೆ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಕೇಂದ್ರಕ್ಕೆ ನಿಯೋಜನೆಗೊಂಡಿದ್ದಾರೆ. ‘ಆತ್ಮ’ ಯೋಜನೆಯಡಿ ಇಬ್ಬರು ಹೊರಗುತ್ತಿಗೆ ನೌಕರರು ಸೇವೆಯಲ್ಲಿದ್ದಾರೆ.ಶಿಥಿಲಗೊಂಡಿರುವ ಕೇಂದ್ರದಲ್ಲಿ ಸ್ಥಳಾವಕಾಶದ ಕೊರತೆಯಿಂದ ಬಾಡಿಗೆ ಗೋದಾಮಿನಲ್ಲಿ ದಾಸ್ತಾನು ಶೇಖರಿಸಲಾಗಿದೆ. ಸಿಬ್ಬಂದಿ ಕೊರತೆಯಿಂದ ಅಧಿಕಾರಿಗಳು ವಿತರಿಸುವ ಪರಿಸ್ಥಿತಿ ಇದೆ.

‘ಬೇಡಿಕೆಗೆ ತಕ್ಕಂತೆ ಬಿತ್ತನೆಬೀಜ ಸಂಗ್ರಹವಿದೆ. ಪರಿಕರಗಳನ್ನು ವಿತರಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ ತಿಳಿಸಿದರು.

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ವಾಗೀಶ ಕುರುಗೋಡು, ಕೆ.ಎಂ. ನಾಗಭೂಷಣ, ಎಚ್‌.ಎಂ. ಪಂಡಿತಾರಾಧ್ಯ, ಸಿ. ಶಿವಾನಂದ, ಎ.ಎಂ. ಸೋಮಶೇಖರ್‌, ಕೆ. ಸೋಮಶೇಖರ್‌, ವಿಶ್ವನಾಥ ಡಿ., ಎಸ್‌.ಎಂ. ಗುರುಪ್ರಸಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.