ADVERTISEMENT

ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಹೊಸ ಟೆಂಡರ್‌

₹1.50 ಕೋಟಿ ಬದಲು ₹3.5 ಕೋಟಿ ವೆಚ್ಚದ ಪರಿಷ್ಕೃತ ಯೋಜನಾ ವರದಿ ಸಿದ್ಧ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಡಿಸೆಂಬರ್ 2018, 9:47 IST
Last Updated 19 ಡಿಸೆಂಬರ್ 2018, 9:47 IST
ಹೊಸಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್‌ ತರಕಾರಿ ಮಾರುಕಟ್ಟೆಯ ಸ್ಥಳ
ಹೊಸಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್‌ ತರಕಾರಿ ಮಾರುಕಟ್ಟೆಯ ಸ್ಥಳ   

ಹೊಸಪೇಟೆ: ಇಲ್ಲಿನ ಉದ್ಯೋಗ ಪೆಟ್ರೋಲ್‌ ಬಂಕ್‌ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್‌ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಹೊಸದಾಗಿ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ.

ಹೈಟೆಕ್‌ ಮಾರುಕಟ್ಟೆ ನಿರ್ಮಾಣಕ್ಕೆ 2017ರ ಡಿಸೆಂಬರ್‌ನಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ₨1.50 ಕೋಟಿ ವೆಚ್ಚದ ಕಾಮಗಾರಿಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಒಂದು ವರ್ಷ ಗತಿಸಿದರೂ ಕಾಮಗಾರಿ ಆರಂಭವಾಗಿಲ್ಲ. ಈಗ ವಾಹನಗಳ ಪಾರ್ಕಿಂಗ್‌ ಸೌಲಭ್ಯ ಸೇರಿದಂತೆ ಜಿ+2 ಮಾದರಿಯಲ್ಲಿ ಮಾರುಕಟ್ಟೆ ನಿರ್ಮಿಸಲು ಪರಿಷ್ಕೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ತಾಂತ್ರಿಕ ಒಪ್ಪಿಗೆಗೆ ಕಳುಹಿಸಲಾಗಿದ್ದು, ಇನ್ನಷ್ಟೇ ಒಪ್ಪಿಗೆ ಸಿಗಬೇಕು. ಒಪ್ಪಿಗೆ ದೊರೆತ ನಂತರ ಟೆಂಡರ್‌ ಕರೆದು, ಕಾಮಗಾರಿ ಆರಂಭಿಸಬೇಕು.

‘ಈ ಹಿಂದೆ ಕೇವಲ ತರಕಾರಿ ಮಾರಾಟಕ್ಕಾಗಿ ಮಾರುಕಟ್ಟೆ ನಿರ್ಮಿಸುವ ಯೋಜನೆ ಇತ್ತು. ಈಗ ಅದರ ಜಾಗದಲ್ಲಿ ಜಿ+2 ಮಾದರಿಯಲ್ಲಿ ಮಾರುಕಟ್ಟೆ ನಿರ್ಮಿಸಲಾಗುವುದು. ಈ ಹಿಂದಿನ ಯೋಜನೆ ಪಾರ್ಕಿಂಗ್‌ ವ್ಯವಸ್ಥೆ ಒಳಗೊಂಡಿರಲಿಲ್ಲ. ಹೊಸ ಯೋಜನೆಯಲ್ಲಿ ಅದು ಸೇರಿದೆ. ಸ್ವಲ್ಪ ವಿಳಂಬವಾದರೂ ಉತ್ತಮ ಮಾರುಕಟ್ಟೆ ನಿರ್ಮಾಣಗೊಳ್ಳಲಿದೆ’ ಎಂದು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅಹಮ್ಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಇನ್ನಷ್ಟೇ ತಾಂತ್ರಿಕ ಒಪ್ಪಿಗೆ ದೊರೆತು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಬೇಕಿರುವುದರಿಂದ ಕಾಮಗಾರಿ ಪೂರ್ಣಗೊಳ್ಳಲು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ತರಕಾರಿ ವ್ಯಾಪಾರಿಗಳ ಪೈಕಿ ಕೆಲವರು ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಮತ್ತೆ ಕೆಲವರು ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ರಸ್ತೆಬದಿ ತರಕಾರಿ ಮಾರಾಟಕ್ಕೆ ಸಂಚಾರ ಪೊಲೀಸರು ನಿರ್ಬಂಧ ಹೇರಿರುವುದರಿಂದ ಸಣ್ಣ ವ್ಯಾಪಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಜೀವನ ನಡೆಸುವುದು ದುಸ್ತರವಾಗಿದೆ. ಭವಿಷ್ಯ ಡೋಲಾಯಮಾನವಾಗಿದೆ. ಮಾರುಕಟ್ಟೆ ನಿರ್ಮಾಣಗೊಳ್ಳುವವರೆಗೆ ಅವರು ಅತಂತ್ರ ಪರಿಸ್ಥಿತಿಯಲ್ಲಿ ಬದುಕುವ ಸನ್ನಿವೇಶ ಸೃಷ್ಟಿಯಾಗಿದೆ.

‘ತಾತ್ಕಾಲಿಕವಾಗಿ ನಿರ್ಮಿಸಿರುವ ಮಾರುಕಟ್ಟೆಯಲ್ಲಿ ತರಕಾರಿಯನ್ನು ಸಂಗ್ರಹಿಸಿ ಇಡಲು ಆಗುವುದಿಲ್ಲ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಮಾರಾಟ ಮಾಡಿ ಮಿಕ್ಕುಳಿದವುಗಳನ್ನು ಕೊಂಡೊಯ್ಯಬೇಕು. ಹೊಸ ಮಾರುಕಟ್ಟೆ ನಿರ್ಮಿಸಿದರೆ ದಿನವಿಡೀ ಮಾರಾಟ ಮಾಡಿದ ನಂತರ ಉಳಿದ ತರಕಾರಿಯನ್ನು ಅಲ್ಲಿಯೇ ಇಟ್ಟು ಹೋಗಬಹುದು. ಕುಂಟು ನೆಪಗಳನ್ನು ಹೇಳುತ್ತ ವಿಳಂಬ ಮಾಡುತ್ತಿರುವುದರಿಂದ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ’ ಎಂದು ತರಕಾರಿ ವ್ಯಾಪಾರಿ ಹುಲುಗಮ್ಮ ತಿಳಿಸಿದರು.

‘ಶೆಡ್‌ನಲ್ಲಿ ಸ್ಥಳಾವಕಾಶ ಸಿಗದವರು ರಸ್ತೆಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ, ಸಂಚಾರ ಪೊಲೀಸರು ಈಗ ಅದಕ್ಕೂ ಅವಕಾಶ ಮಾಡಿಕೊಡುತ್ತಿಲ್ಲ. ಹೀಗಾದರೆ ನಾವೆಲ್ಲಿ ಹೋಗಿ ವ್ಯಾಪಾರ ಮಾಡಬೇಕು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.