ADVERTISEMENT

ಬಳ್ಳಾರಿ | ಕಂದಾಯ: ಕಂಪ್ಲಿ ಮುಂದೆ, ಬಳ್ಳಾರಿ ಹಿಂದೆ

2024–25ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲೆ ಶೇ 77.47ರಷ್ಟು ಸಾಧನೆ

ಆರ್. ಹರಿಶಂಕರ್
Published 19 ಏಪ್ರಿಲ್ 2025, 4:44 IST
Last Updated 19 ಏಪ್ರಿಲ್ 2025, 4:44 IST
ಮೊಹಮದ್‌ ಹ್ಯಾರಿಸ್‌ ಸುಮೇರ್‌
ಮೊಹಮದ್‌ ಹ್ಯಾರಿಸ್‌ ಸುಮೇರ್‌   

ಬಳ್ಳಾರಿ: ಬಳ್ಳಾರಿ ಜಿಲ್ಲೆ 2024–25ನೇ ಸಾಲಿನ ಕಂದಾಯ ಸಂಗ್ರಹಣೆಯಲ್ಲಿ ಶೇ 77.47ರಷ್ಟು ಸಾಧನೆ ಮಾಡಿದ್ದು, ಕಂಪ್ಲಿ ತಾಲೂಕು ಶೇ 100ರಷ್ಟು ಸಾಧನೆಯೊಂದಿಗೆ ಮುಂದಿದೆ. ಶೇ 70.23ರಷ್ಟು ಕಂದಾಯ ಸಂಗ್ರಹಿಸಿರುವ ಬಳ್ಳಾರಿ ತಾಲೂಕು ಜಿಲ್ಲೆಯಲ್ಲಿ ಕಡೇ ಸ್ಥಾನದಲ್ಲಿದೆ. 

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ಐದು ತಾಲೂಕುಗಳಿವೆ. ಬಳ್ಳಾರಿ ತಾಲೂಕಿನಲ್ಲಿ ಒಟ್ಟು 25 ಗ್ರಾಮ ಪಂಚಾಯಿತಿಗಳಿವೆ. ಸಂಡೂರು 26,  ಕಂಪ್ಲಿಯಲ್ಲಿ 10, ಕುರಗೋಡು 12,  ಸಿರುಗುಪ್ಪದಲ್ಲಿ 27 ಗ್ರಾಮ ಪಂಚಾಯಿತಿಗಳಿವೆ. 

ಒಟ್ಟಾರೆ 100 ಗ್ರಾಮ ಪಂಚಾಯಿತಿಗಳಿಂದ ಕಳೆದ ಆರ್ಥಿಕ ಸಾಲಿನ ಕಂದಾಯ ಸಂಗ್ರಹಣೆ ಗುರಿ ₹14.02 ಕೋಟಿ ಇತ್ತು. ಇದಕ್ಕೆ ಪ್ರತಿಯಾಗಿ ₹10.86 ಕೋಟಿ ಸಂಗ್ರಹವಾಗಿದೆ. ಇನ್ನೂ ₹3 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಬೇಕಾಗಿದೆ.

ADVERTISEMENT

ಕಂದಾಯ ಸಂಗ್ರಹಣೆ ಹೆಚ್ಚಿಸಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಪ್ರತಿ ವಾರ ವಿಡಿಯೊ ಸಂವಾದದ ಮೂಲಕ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕಂದಾಯ ಸಂಗ್ರಹಣೆಯಲ್ಲಿ ನಿರೀಕ್ಷಿತ ಗುರಿ ಸಾಧನೆ ಮಾಡದ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಕರೆಸಿ ಅವರಿಗೆ ಸೂಕ್ತ ಮಾರ್ದರ್ಶನ ನೀಡಿದ್ದಾರೆ. ಇದರ ಪರಿಣಾಮವಾಗಿ ಜಿಲ್ಲೆ ಶೇ 77ಕ್ಕಿಂತಲೂ ಅಧಿಕ ಸಾಧನೆ ಮಾಡಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು. 

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಅಭಿಯಾನ ನಡೆಸಲಾಗಿದೆ. ಕಂದಾಯ ಪಾವತಿ ಬಗ್ಗೆ ಜನರಿಗೆ ತಿಳಿಹೇಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಾಕಿ ಏಕೆ?: ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೊಸ ಹೊಸ ಬಡಾವಣೆಗಳು ತಲೆ ಎತ್ತಿವೆಯಾದರೂ, ಅವುಗಳಿಂದ ಕಂದಾಯ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗಿಲ್ಲ. ಇನ್ನೊಂದೆಡೆ ಜನ ಸಂಪರ್ಕಕ್ಕೇ ಸಿಗದೇ ಇರುವುದೂ ಗುರಿ ಸಾಧನೆಗೆ ತೊಡಗಾಗಿದೆ. ಕೆಲವರು ನೆನಪಿಸಿದರೂ ಪಾವತಿ ಮಾಡುವುದಿಲ್ಲ. ಇದು ಸಮಸ್ಯಾತ್ಮಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇನ್ನೊಂದೆಡೆ, ವರ್ಷದ ಆರಂಭದಲ್ಲಿ ಜಿಲ್ಲೆಯಲ್ಲಿ ಜನ ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ಗುಳೇ ಹೋಗುತ್ತಾರೆ. ಅವರನ್ನು ತಡೆಯಲು ಉದ್ಯೋಗ ಖಾತ್ರಿ ಯೋಜನೆ ಕಡೆಗೆ ಅಧಿಕಾರಿಗಳು ಸಿಬ್ಬಂದಿ ಹೆಚ್ಚು ಗಮನ ಹರಿಸುತ್ತಾರೆ. ಈ ಸಂದರ್ಭದಲ್ಲಿ ಕಂದಾಯ ಸಂಗ್ರಹ ಕುಸಿಯುತ್ತದೆ. ಬಾಕಿ ಹಾಗೇ ಮುಂದುವರಿಯುತ್ತದೆ ಎಂದು ಕೆಲವರು ಹೇಳುತ್ತಾರೆ. 

ಹೆಚ್ಚು ಕಂದಾಯ: ಕಂದಾಯ ಸಂಗ್ರಹಣೆಯ ಗುರಿ ಸಾಧನೆಯಲ್ಲಿ ಬಳ್ಳಾರಿ ತಾಲ್ಲೂಕು ಹಿಂದೆ ಬಿದ್ದಿದ್ದರೂ, ಕಂದಾಯದ ಮೊತ್ತ ಬೇರೆಲ್ಲ ತಾಲ್ಲೂಕುಗಳಿಗಿಂತಲೂ ದುಪ್ಪಟ್ಟು ಇದೆ. ಇಲ್ಲಿ ಸದ್ಯ ಸಂಗ್ರಹವಾಗಿರುವ ಮೊತ್ತವೂ (₹3.53 ಕೋಟಿ) ಬೇರೆಲ್ಲ ತಾಲ್ಲೂಕಿನ ಗುರಿಗಿಂತಲೂ ಅಧಿಕ.

ಬಳ್ಳಾರಿಯಲ್ಲಿ ರಾಜ್ಯ ಸರಾಸರಿಗಿಂತ ಹೆಚ್ಚು ಕಂದಾಯ ಸಂಗ್ರಹವಾಗಿದೆ. ಆದರೂ ಗುರಿ ಸಾಧನೆಯಾಗಿಲ್ಲ. ಬಿಲ್‌ ಕಲೆಕ್ಟರ್‌ಗಳ ಕೊರತೆ ಇದ್ದು ಸಮಸ್ಯೆ ಸರಿಪಡಿಸುತ್ತೇವೆ
ಮೊಹಮದ್‌ ಹ್ಯಾರಿಸ್‌ ಸುಮೇರ್‌ ಜಿಲ್ಲಾ ಪಂಚಾಯಿತಿ ಸಿಇಒ ಬಳ್ಳಾರಿ

ಕಟಾವು ಮುಗಿದ ಮೇಲೆ ಸಂಗ್ರಹ ಸಾಧ್ಯತೆ

ಜಿಲ್ಲೆಯಲ್ಲಿ ಹಿಂಗಾರು ಬೆಳೆಗಳು ಕಟಾವು ಹಂತದಲ್ಲಿವೆ. ಒಂದು ಬಾರಿ ಕಟಾವು ಪೂರ್ಣಗೊಂಡರೆ ರೈತರು ಕೃಷಿ ಕಾರ್ಮಿಕರು ಸೇರಿದಂತೆ ವ್ಯವಸಾಯವನ್ನೇ ಅವಲಂಬಿಸಿದ ವರ್ಗದ ಕೈಗೆ ದುಡ್ಡು ಸೇರುತ್ತದೆ. ಆಗ ಕಂದಾಯ ಸಂಗ್ರಹ ಹೆಚ್ಚಾಗುವ ಸಾಧ್ಯತೆಗಳಿವೆ. ಜನರೇ ಬಂದು ಕಂದಾಯ ಪಾವತಿ ಮಾಡಿ ಹೋಗುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.